Thursday, September 19, 2024

ಪ್ರಾಯೋಗಿಕ ಆವೃತ್ತಿ

ಸ್ಪರ್ಶ ಜ್ಞಾನ ಕಳೆದುಕೊಂಡ ಮಗನ ಚಿಕಿತ್ಸೆಗೆ ಆರ್ಥಿಕ ಸಹಾಯ ಕೋರಿ ತಾಯಿ ಮೊರೆ

ತೆಂಗಿನ ಮರದಿಂದ ಬಿದ್ದು ದೇಹದ ಸ್ಪರ್ಶ ಜ್ಞಾನ ಕಳೆದುಕೊಂಡಿರುವ ಮಗನ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಶ್ರೀರಂಗಪಟ್ಟಣ ತಾಲ್ಲೂಕು ಅರಕೆರೆ ಹೋಬಳಿ ಮಾಡರಹಳ್ಳಿ ಗ್ರಾಮದ ಸೌಭಾಗ್ಯ ಮನವಿ ಮಾಡಿದ್ದಾರೆ.

ಶ್ರೀರಂಗಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ದ್ವಿತೀಯ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದ ರವಿಕುಮಾರ್ (21) ಎಂಬಾತ ಎಳನೀರು ಕುಡಿಯುವ ಆಸೆಯಿಂದ ತೆಂಗಿನಮರ ಏರಿದ್ದಾಗ ಆಯತಪ್ಪಿ ಬಿದ್ದು ಸೊಂಟದ ಕೆಳಭಾಗದ ಸ್ಪರ್ಶ ಜ್ಞಾನ ಕಳೆದುಕೊಂಡಿದ್ದಾನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ನಾಲ್ಕೈದು ತಿಂಗಳ ಹಿಂದೆ ನಡೆದ ಘಟನೆಯ ತರುವಾಯ ಗಾಯಾಳು ರವಿಕುಮಾರನನ್ನು ಮಂಡ್ಯ  ಜಿಲ್ಲಾಸ್ಪತ್ರೆಗೆ ಸೇರಿಸಲಾಗಿ, ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಯ ಅಗತ್ಯತೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು. ಮೈಸೂರಿನ ಕೆ.ಆರ್ ಆಸ್ಪತ್ರೆ ವೈದ್ಯರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಗಾಯಾಳುವನ್ನು ಕರೆದೊಯ್ಯುವಂತೆ ಶಿಫಾರಸ್ಸು ಮಾಡಿದ್ದು, ನಂತರ ನಾಲ್ಕೈದು ದಿನಗಳ ಕಾಲ ಚಿಕಿತ್ಸೆ ನೀಡಿದ್ದ ನಿಮ್ಹಾನ್ಸ್ ವೈದ್ಯರು ಫಿಜಿಯೋಥೆರಪಿ ಚಿಕಿತ್ಸೆ ಕೊಡಿಸುವಂತೆ ಸಲಹೆ ನೀಡಿದ್ದಾರೆ. ಇದರಿಂದ ಹಣದ ಅವಶ್ಯಕತೆ ಎದುರಾಗಿದೆ ಎಂದು ವಿವರಿಸಿದರು.

ಕಡುಬಡತನದರುವ ತಮಗೆ ಸ್ವಂತ ಮನೆ ಇಲ್ಲ, ಹಲವು ವರ್ಷಗಳ ಹಿಂದೆಯೇ ಪತಿ ಸಾವಿಗೀಡಾಗಿದ್ದಾರೆ. ಓರ್ವ ಪುತ್ರಿಯನ್ನು ಮದುವೆ ಮಾಡಿದ್ಧೇನೆ, ಕೂಲಿ ನಾಲಿ ಮಾಡಿ ಮಗನಿಗೆ ಬಿಎಸ್ಸಿ ಓದಿಸುತ್ತಿದ್ದೆ, ಆದರೆ ಇಂತಹ ದುರ್ಘಟನೆ ನಡೆದು ಹೋಗಿದೆ ಎಂದು ಅಳಲು ತೋಡಿಕೊಂಡರು.

ಭವಿಷ್ಯದಲ್ಲಿ ನೆರವಾಗಬೇಕಿದ್ದ, 21 ವರ್ಷದ ಪುತ್ರ ರವಿಕುಮಾರ್, ದೇಹದ ಸ್ಪರ್ಶ ಜ್ಞಾನ ಕಳೆದುಕೊಂಡು ಮನೆಯಲ್ಲಿ ರೋಧಿಸುತ್ತಿರುವುದು ಒಂದೆಡೆಯಾದರೆ, ಕೂಲಿಗೂ ತೆರಳಲಾಗದೇ ಜೀವನ ನಡೆಸಬೇಕಾದ ದುಸ್ಥಿತಿ ಮತ್ತೊಂದೆಡೆ ಎದುರಾಗಿದೆ. ಇಂತಹ ಸಂಕಷ್ಟದಿಂದ ಪಾರಾಗಲು ಮಗನಿಗೆ ಸೂಕ್ತ ಚಿಕಿತ್ಸೆಯ ಅಗತ್ಯವಿದ್ದು ಆರ್ಥಿಕ ನೆರವಿಗೆ ಸಮಾಜದ ಉಳ್ಳವರು ನೆರವಾಗಬೇಕೆಂದು ಮನವಿ ಮಾಡಿದರು.

ಸಮಾಜದ ಸ್ಥಿತಿವಂತರು ಗಾಯಾಳು ರವಿಕುಮಾರ್ ಸಿ ಬಿನ್ ಲೇಟ್ ಚಿಕ್ಕಣ್ಣ ಅವರ SBI ಬ್ಯಾಂಕ್ ಖಾತೆ ಸಂಖ್ಯೆ: 40488132749, ಅರಕೆರೆ ಶಾಖೆ, ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ, IFSC CODE SBIM 0041016 ಇಲ್ಲಿಗೆ ಹಣ ಸಹಾಯ ಮಾಡುವಂತೆ ಅವರು ಕೋರಿದರು.

ಗೋಷ್ಠಿಯಲ್ಲಿ ಗಾಯಾಳು ರವಿಕುಮಾರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!