Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಿಲ್ಲೆಯಲ್ಲಿ ಬರ ಪರಿಸ್ಥಿತಿ ನಿಭಾಯಿಸಲು ಸಿದ್ಧರಾಗಿ: ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಯಾವುದೇ ಲೋಪವಾಗದಂತೆ ನಿಭಾಯಿಸಲು ಅಧಿಕಾರಿಗಳು ಸಿದ್ಧರಾಗುವಂತೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು‌.

ಮಂಗಳವಾರ ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಬರ ಪರಿಸ್ಥಿತಿ ನಿರ್ವಾಹಣೆ ಸಮಿತಿ ಸಭೆ ನಡೆಸಿ ಮಾತನಾಡಿದರು. ಸದ್ಯದಲ್ಲೇ ಕೇಂದ್ರದ ತಂಡ ಬರ ಪರಿಸ್ಥಿತಿ ಪರಿಶೀಲನೆಗಾಗಿ ಜಿಲ್ಲೆಗೆ ಆಗಮಿಸಲಿದೆ. ಅಧಿಕಾರಿಗಳು ಸಮನ್ವಯವಾಗಿ ಕಾರ್ಯನಿರ್ವಹಿಸಿ ನಿಖರ ಮಾಹಿತಿಯನ್ನು ಒದಗಿಸಬೇಕು. ಸಮಸ್ಯೆಗಳಿದ್ದಲ್ಲಿ ತಕ್ಷಣ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಬೇಕು ಎಂದರು.

ಅನಾವಶ್ಯಕವಾಗಿ ಬೋರ್ ವೆಲ್ ಕೊರೆಯಬೇಡಿ

ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ. ಕೊಳವೆಬಾವಿ ಕೊರೆಯುವ ಸಂದರ್ಭದಲ್ಲಿ ನೀರು ಸಿಗುವ ಸ್ಥಳಗಳಲ್ಲಿ ಮಾತ್ರ ಕೊರೆಯಿರಿ. ಟ್ಯಾಂಕರ್ ಮೂಲಕ ನೀರು ನೀಡುವ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿ ಹೆಚ್ಚಿನ ಟ್ರಿಪ್ ಬಿಲ್‌ ಮಾಡುವುದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಟಾಸ್ಕ್ ಫೋಸ್೯ ಸಮಿತಿ

ಬರ ನಿರ್ವಹಣೆಗಾಗಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋಸ್೯ ಸಮಿತಿ ರಚಿಸಲಾಗುವುದು. ಶಾಸಕರೊಂದಿಗೆ ಸಮಸ್ಯೆಗಳಿದ್ದಲ್ಲಿ ಚರ್ಚಿಸಿ ಪರಿಹಾರ ಕೈಗೊಳ್ಳಿ ಎಂದರು.

ಅಧಿಕಾರಿಗಳನ್ನು ತೊಡಗಿಸಿಕಿಳ್ಳಿ ಪ್ರಾಣಿಗಳಿಗೆ ಕುಡಿಯುವ ನೀರು, ಮೇವು, ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗಬಾರದು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಬರ ಪರಿಸ್ಥಿತಿ ನಿರ್ವಹಣೆ ಕೆಲಸದಲ್ಲಿ ತೊಡಗಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕರಾದ ಪಿ.ಎಂ ನರೇಂದ್ರಸ್ವಾಮಿ ಅವರು ಮಾತನಾಡಿ, ಜೀವ ರಕ್ಷಕ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ, ಜೊತೆಗೆ ಜಾನುವಾರುಗಳಿಗೆ ಮೇವು ಸಮಸ್ಯೆಯಾಗಬಾರದು. ಪರಿಸ್ಥಿತಿಗಳು ಪ್ರತಿದಿನ ಬದಲಾಗುತ್ತದೆ. ಎಲ್ಲಾ ಪರಿಸ್ಥಿತಿ ಅವಲೋಕಿಸಿ ಸೂಕ್ತ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಕೃಷಿ ಭೂಮಿಯಲ್ಲಿ ಹೆಚ್ಚಿನ ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡುವುದರಿಂದ, ಮಣ್ಣಿನಲ್ಲಿ ನೀರು ಇಂಗುವಿಕೆ ಕಡಿಮೆಯಾಗುತ್ತಿದೆ. ಬಿಸಿಲಿನ ತಾಪ ಹೆಚ್ಚಾದರೇ ನೀರು ಹಾವಿಯಾಗುವುದು ಹೆಚ್ಚಾಗುತ್ತದೆ. ಮುಂದಿನ ದಿನಗಳ ಪರಿಸ್ಥಿತಿ ಸುಧಾರಿಸಲು ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕಿದೆ ಎಂದರು.

ಶೇ‌.11ರಷ್ಟು ಮಳೆ ಕೊರತೆ

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಜನವರಿಯಿಂದ ಸೆಪ್ಟೆಂಬರ್ ವರೆಗೆ 407 ಮೀ.ಮೀ ಮಳೆಯಾಗುವುದು ವಾಡಿಕೆ. ಆದರೆ ಈವರಗೆ 362ಮೀ.ಮೀ ಮಾತ್ರ ಮಳೆಯಾಗಿದ್ದು, ಶೇ‌. 11 ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯ 7 ತಾಲ್ಲೂಕುಗಳಿಗೂ ತೀವ್ರ ಬರ ಘೋಷಣೆಯಾಗಿದೆ ಎಂದರು.

ಜಿಲ್ಲೆಯಲ್ಲಿ 1 ಹೆ. ಇರುವ 4,64,732 ಸಂಖ್ಯೆ ಅತಿ ಸಣ್ಣ ಭೂಹಿಡುವಳಿದಾರರು, 1-2 ಹೆ. ಇರುವ 69,690 ಸಂಖ್ಯೆ ಸಣ್ಣ ಭೂಹಿಡುವಳಿದಾರರು, 2-4 ಹೆ. ಇರುವ 21,769 ಸಂಖ್ಯೆ ಅರೆಮಧ್ಯಮ ಭೂಹಿಡುವಳಿದಾರರು, 4-10 ಹೆ. ಇರುವ 3,010 ಸಂಖ್ಯೆ ಮಧ್ಯಮ ಭೂಹಿಡುವಳಿದಾರರು, 10 ಹೆ. ಇವರು ದೊಡ್ಡ ಭೂಹಿಡುವಳಿದಾರರು 103 ಸಂಖ್ಯೆ ಸೇರಿದಂತೆ ಒಟ್ಟು 5,59,303 ಭೂಹಿಡುವಳಿದಾರರು ಇದ್ದಾರೆ. ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮಾಡಿಕೊಂಡಿರುವ ಸಿದ್ಧತೆಯನ್ನು ಸಭೆಗೆ ವಿವರಿಸಿದರು.

ಮಳೆಯ ಪ್ರಮಾಣ ಕಡಿಮೆಯಾಗಿ ಜಿಲ್ಲೆಯಲ್ಲಿ ಬರ ಘೋಷಣೆಯಾಗಿದೆ. ಇಂತಹ ಸಂದರ್ಭದಲ್ಲಿ ಯಾವ ಬೆಳೆಗಳನ್ನು ರೈತರು ಬೆಳೆಯಬೇಕು ಎಂದು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಕಾರ್ಯಪ್ರವೃತ್ತರಾಗಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಅವರು ಬರದ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿ ಕುರಿತು ವಿವರಿಸಿದರು.

ಶಾಸಕರಾದ ಪಿ.ರವಿಕುಮಾರ್, ಎ.ಬಿ ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಹೆಚ್.ಟಿ ಮಂಜು, ಕೆ.ಎಂ ಉದಯ್, ವಿಧಾನ ಪರಿಷತ್ ಶಾಸಕರಾದ ಮರಿತಿಬ್ಬೇಗೌಡ, ಪೋಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್ ನಾಗರಾಜು ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜಾರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!