Thursday, September 19, 2024

ಪ್ರಾಯೋಗಿಕ ಆವೃತ್ತಿ

ದಲಿತರ ಕುಂದುಕೊರತೆ ಸಭೆಗೆ ಶಾಸಕರೇ ಗೈರು: ದಲಿತ ಮುಖಂಡರ ಆಕ್ಷೇಪ

ದಲಿತರ ಕುಂದುಕೊರತೆಗಳನ್ನು ಆಲಿಸಿ ನಿವಾರಣೆಗಾಗಿ ಪರಿಹಾರವನ್ನು ಕಂಡು ಹಿಡಿಯುವ ಸಭೆಗೆ ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಭಾಗವಹಿಸದೇ ಗೈರು ಹಾಜರಾಗುವ ಮೂಲಕ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ದಲಿತ ಪರ ಸಂಘಟನೆಗಳು ಹಾಗೂ ದಲಿತ ಮುಖಂಡರು ತೀವ್ರ ಆಕ್ಷೇಪ
ವ್ಯಕ್ತಪಡಿಸಿದರು.

ಕೆ.ಆರ್.ಪೇಟೆ ತಾಲೂಕು ಪಂಚಾಯಿತಿಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಶಾಸಕ ಮಂಜು ಅನುಪಸ್ಥಿತಿಯಲ್ಲಿ ತಹಶೀಲ್ದಾರ್ ನಿಸರ್ಗಪ್ರಿಯ ಅವರ ಅಧ್ಯಕ್ಷತೆಯಲ್ಲಿ ನಡೆದ ಎಸ್.ಸಿ/ಎಸ್.ಟಿ ಜನತೆಯ
ಕುಂದುಕೊರತೆ ನಿವಾರಣಾ ಸಭೆಯಲ್ಲಿ ತಾಲೂಕಿನ ದಲಿತ ಮುಖಂಡರು ತೀವ್ರಆಕ್ಷೇಪ ವ್ಯಕ್ತಪಡಿಸಿ ಬೇಸರ ಹೊರಹಾಕಿದರು.

ಕೃಷ್ಣರಾಜಪೇಟೆ ತಾಲೂಕಿನಲ್ಲಿ ದಲಿತರ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿಗಳು ಇಂದಿಗೂ ಸುಧಾರಿಸಿಲ್ಲ. ದಲಿತರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳ ಆಳಕ್ಕೆ ಇಳಿದು ಪರಿಹಾರವನ್ನು ದೊರಕಿಸಿಕೊಡುವ ಇಚ್ಛಾಶಕ್ತಿಯು ಯಾವೊಬ್ಬ ನಾಯಕರಲ್ಲಿಯೂ ಕಾಣಿಸುತ್ತಿಲ್ಲ ಎಂದು ತೀವ್ರವಾಗಿ ಬೇಸರ ವ್ಯಕ್ತಪಡಿಸಿದ ದಲಿತ
ಮುಖಂಡರಾದ ಬಸ್ತಿರಂಗಪ್ಪ, ಡಿ.ಪ್ರೇಮ ಕುಮಾರ್, ಸುರೇಶ್‌ ಹರಿಜನ, ಸಿಂದಘಟ್ಟ ಸೋಮಸುಂದರ್ ಹಾಗೂ ಹೊಸಹೊಳಲು ಪುಟ್ಟರಾಜು ಕೆ.ಆರ್. ಪೇಟೆ ಪಟ್ಟಣದ ಪ್ರಮುಖವಾದ ವೃತ್ತದಲ್ಲಿ ಸಂವಿಧಾನಶಿಲ್ಪಿ, ವಿಶ್ವಸೂರ್ಯ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪನೆಗೆ ಅಧಿಕಾರಿಗಳು ಸೇರಿದಂತೆ
ಜನಪ್ರತಿನಿಧಿಗಳು ಸಹಕಾರ ನೀಡುತ್ತಿಲ್ಲ. ಪಟ್ಟಣದಲ್ಲಿ ಅನಧಿಕೃತವಾಗಿ ರಸ್ತೆಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ತಮಗಿಷ್ಠ ಬಂದವರ ಹೆಸರನ್ನು ಇಡಲಾಗಿದೆ ಎಂದು ದೂರಿದರು.

ಪಟ್ಟಣದ ಪ್ರವಾಸಿ ಮಂದಿರ ಬಳಿ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಸಿನಿಮಾ ನಟನ ಪುತ್ಥಳಿ ಸ್ಥಾಪನೆಗೆ ಸದ್ದಿಲ್ಲದೇ ಸಿದ್ಧತೆ ನಡೆಸಲಾಗುತ್ತಿದೆ. ತಾಲೂಕು ಆಡಳಿತವಾಗಲಿ ಸ್ಥಳೀಯ ಪುರಸಭೆಯಾಗಲೀ ಅನುಮತಿ ನೀಡಿದ್ದರೆ ಸಭೆಗೆ ಮಾಹಿತಿ ನೀಡಿ ಎಂದು ಗಟ್ಟಿಧ್ವನಿಯಲ್ಲಿ ಮಾತನಾಡಿದಾಗ ಮಧ್ಯ ಪ್ರವೇಶಿಸಿದ ತಹಶೀಲ್ದಾರ್
ನಿಸರ್ಗಪ್ರಿಯ ಸಂವಿಧಾನಶಿಲ್ಪಿಯ ಪುತ್ಥಳಿಯನ್ನು ಸ್ಥಾಪಿಸಲು ಸರ್ಕಾರವೇ ಅನುಮತಿ ನೀಡಿದೆ, ಆದ್ದರಿಂದ ಸೂಕ್ತವಾದ ಸ್ಥಳವನ್ನು ಗುರುತಿಸಿ ವಿಶ್ವನಾಯಕನ ಪುತ್ಥಳಿ ಸ್ಥಾಪನೆಗೆ ಪುರಸಭೆಯ ಮುಖ್ಯಾಧಿಕಾರಿಗಳು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಸ್ಥಳ ಗುರುತಿಸಿ ಮುಂದಿನ ಸಭೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ ನಂತರ ಸಭೆಯು ಗಲಾಟೆ ಗದ್ದಲದಿಂದ ಮುಕ್ತವಾಗಿ ಶಾಂತಿಯುತವಾಗಿ ನಡೆಯಿತು.

ಕೆ.ಆರ್.ಪೇಟೆ ಪಟ್ಟಣದಲ್ಲಿ ದಲಿತ ಶೋಷಿತ ವರ್ಗಗಳ ಮಹಾನ್ ಚೇತನಗಳಾದ ಡಾ.ಬಿ.ಆರ್.ಅಂಬೇಡ್ಕರ್
ಮತ್ತು ಬಾಬು ಜಗಜೀವನರಾಂ ಅವರ ಹೆಸರಿನಲ್ಲಿ ನಿರ್ಮಿಸುತ್ತಿರುವ ಸಮುದಾಯ ಭವನಗಳ ಕಾಮಗಾರಿಯು ಸರ್ಕಾರವು ವಿಶೇಷ ಅನುದಾನವನ್ನು ಬಿಡುಗಡೆ ಮಾಡಿದ್ದರೂ ಗುತ್ತಿಗೆ ಪಡೆದುಕೊಂಡು ಕಾಮಗಾರಿ ನಡೆಸುತ್ತಿರುವ ಏಜೆನ್ಸಿ ಕಂಪನಿಗಳು ಕಳಪೆ ಕಾಮಗಾರಿಯನ್ನು ನಡೆಸುತ್ತಿರುವುದಲ್ಲದೇ ಕಾಮಗಾರಿಯನ್ನು ನಿಧಾನವಾಗಿ ಕುಂಟುತ್ತಾ ಆಮೆ ವೇಗದಲ್ಲಿ ನಡೆಸುತ್ತಿದ್ದಾರೆ. ಈ ಬಗ್ಗೆ ತಾಲೂಕು ಆಡಳಿತವಾಗಲೀ ಸಮಾಜ ಕಲ್ಯಾಣ ಇಲಾಖೆಯಾಗಲಿ ಆಸಕ್ತಿ ವಹಿಸಿ ಕಾಮಗಾರಿಯನ್ನು ಚುರುಕುಗೊಳಿಸಿ ಕಾಮಗಾರಿಯ ಗುಣಮಟ್ಟದ ಬಗ್ಗೆ ನಿಗಾವಹಿಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ತಾಲೂಕು ಛಲವಾಧಿ ಮಹಾಸಭಾದ ಅಧ್ಯಕ್ಷ ಮಾಂಬಳ್ಳಿ ಜಯರಾಂ ಕೆಲವು ಸರ್ಕಾರಿ ಕಛೇರಿಗಳಲ್ಲಿ ದಲಿತ ಮುಖಂಡರು ಸಾರ್ವಜನಿಕರ ಕುಂದು ಕೊರತೆಗಳ ಕುರಿತು
ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಹೋದರೆ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ತಾಲೂಕು ದಂಡಾಧಿಕಾರಿಗಳಾದ ತಹಶೀಲ್ದಾರರು ಗಮನಹರಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ಧೇಶನ ನೀಡಬೇಕು ಎಂದು ಸಭೆಯಲ್ಲಿ ದಲಿತ ಮುಖಂಡರು ಆಗ್ರಹಿಸಿದರು.

ದಲಿತ ಕೇರಿಗಳಲ್ಲಿ ಹಾಗೂ ದಲಿತ ಕೇರಿಗಳ ಸಮೀಪದ ಗೂಡಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ತಾಲೂಕಿನ ಕೆಲವು ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶ ನೀಡುತ್ತಿಲ್ಲ. ಕೆಲವು ಗ್ರಾಮಗಳಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಿಸಲಾಗುತ್ತಿದೆ. ದಲಿತರು ಟೀ ಅಂಗಡಿಗಳಲ್ಲಿ ಚಹಾ ಕುಡಿಯಲು ಪ್ರತ್ಯೇಕವಾಗಿ ಲೋಟಗಳನ್ನಿಟ್ಟಿದ್ದಾರೆ ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!