Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ಅಪಘಾತದಲ್ಲಿ ಸಾವನ್ನಪ್ಪಿದ ಹಾಗೂ ಗಾಯಾಳು ಕುಟುಂಬಕ್ಕೆ ಪರಿಹಾರ : ಶಾಸಕ ಪಿ.ಎಂ.ನರೇಂದ್ರಸ್ವಾಮಿ

ಕಳೆದೊಂದು ತಿಂಗಳಿನಲ್ಲಿ ಮಳವಳ್ಳಿ ತಾಲೂಕಿನಲ್ಲಿ ಸಂಭವಿಸಿರುವ ಮೂರು ಅಪಘಾತ ಪ್ರಕರಣಗಳಲ್ಲಿ ಸಾವನ್ನಪ್ಪಿರುವ ಹಾಗೂ ಗಾಯಾಳುಗಳ ಕುಟುಂಬದವರಿಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ಮಳವಳ್ಳಿ ತಾಲೂಕಿನ ಎಂ.ಬಸವನಪುರ ಗ್ರಾಮದಲ್ಲಿ ಗೂಡ್ಸ್‌ ವಾಹನ ಮಗುಚಿ ಬಿದ್ದು ಗಾಯಗೊಂಡವರಿಗೆ ಮಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹಳ್ಳಿಗಾಡಿನ ಜನರು ಶುಭ ಸಮಾರಂಭಗಳಿಗೆ ಗೂಡ್ಸ್‌ ವಾಹನಗಳನ್ನು ಬಳಸುವುದು ಸಹಜವಾಗಿದೆ. ಆ ವಾಹನಗಳ ಚಾಲಕರ ನಿರ್ಲಕ್ಷ್ಯವೇ ಅಪಘಾತಗಳಿಗೆ ಕಾರಣ ಎಂದು ಹೇಳಲಾಗುತ್ತಿದೆ. ಜನರ ಸಾವು-ನೋವುಗಳನ್ನು ನೋಡಲಾಗುತ್ತಿಲ್ಲ. ಇಂತಹ ವಾಹನಗಳು ಅಪಘಾತಕ್ಕೀಡಾದಾಗ ಮೃತರಿಗೆ, ಗಾಯಾಳುಗಳಿಗೆ ಪರಿಹಾರವೂ ಸಿಗುವುದಿಲ್ಲ. ಈ ವಾಹನಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸ ಬೇಕಿದೆ ಎಂದು ಹೇಳಿದರು.

ತಾಲೂಕಿನಲ್ಲಿ ಸಂಭವಿಸಿರುವ ಮೂರು ಅಪಘಾತಗಳ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯೊಂದಿಗೆ ಮೌಖಿಕವಾಗಿ ಮಾತುಕತೆ ನಡೆಸಿದ್ದೇನೆ. ವಿವರವಾದ ವರದಿಯನ್ನು ಮೂರು ದಿನಗಳಲ್ಲಿ ಸಲ್ಲಿಸಿ ಪರಿಹಾರಕ್ಕೆ ಕ್ರಮ ವಹಿಸುತ್ತೇನೆ. ಗಾಯಾಳುಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡುವಲ್ಲಿ ಮಿಮ್ಸ್ ವೈದ್ಯಕೀಯ ತಂಡ ಶ್ರಮಿಸಿದೆ. ಸಮಯಕ್ಕೆ ಸರಿಯಾಗಿ ಸ್ಕ್ಯಾನಿಂಗ್, ಎಕ್ಸ್‌-ರೇ ಮಾಡಿ ಎಲ್ಲ ಗಾಯಾಳುಗಳನ್ನು ಅಪಾಯದಿಂದ ಪಾರು ಮಾಡಿದ್ದಾರೆ ಎಂದು ವೈದ್ಯರ ಕಾರ್ಯವೈಖರಿಯನ್ನು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಮಿಮ್ಸ್‌ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ವೈದ್ಯಕೀಯ ಅಧೀಕ್ಷ ಡಾ.ಪಿ.ವಿ. ಶ್ರೀಧರ್, ಸ್ಥಾನಿಕ ವೈದ್ಯಾಧಿಕಾರಿ ಡಾ.ವೆಂಕಟೇಶ್, ಮಳವಳ್ಳಿ ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಯುವ ಕಾಂಗ್ರೆಸ್ ಮುಖಂಡ ತಳಗವಾದಿ ವಿಶ್ವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!