Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಳೆ ಮಂಡ್ಯದಲ್ಲಿ ನಿಷೇದಾಜ್ಞೆ ಜಾರಿ: ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಡ್ಯ ಉಪವಿಭಾಗ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ದೃಷ್ಟಿಯಿಂದ, ಮೈಸೂರು-ಬೆಂಗಳೂರು ಹೆದ್ದಾರಿ ಮತ್ತು ರೈಲ್ವೆ ಮಾರ್ಗ, ರೈಲು ನಿಲ್ದಾಣಗಳ ವ್ಯಾಪ್ತಿಯಲ್ಲಿ ಸೆ 29 ರಂದು ಬೆಳಗ್ಗೆ 6ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೇ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಎಲ್ಲ ಸರ್ಕಾರಿ, ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಶಾಲಾ-ಕಾಲೇಜುಗಳಿಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ರಜೆ ಘೋಷಣೆ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-275 ರಲ್ಲಿ ಸಂಚರಿಸುವ ವಾಹನ ಹಾಗೂ ರೈಲುಗಳ ಸುಗಮ ಸಂಚಾರಕ್ಕಾಗಿ
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-275 ರಸ್ತೆಯಲ್ಲಿ ಮದ್ದೂರು ತಾಲ್ಲೂಕಿನ ನಿಡಘಟ್ಟ ಗಡಿ ಭಾಗದಿಂದ ಮಂಡ್ಯ ತಾಲ್ಲೂಕಿನ ತೂಬಿನಕೆರೆ ಗಡಿ ಭಾಗದವರೆಗೆ ಹಾಗೂ ಮಂಡ್ಯ, ಉಪವಿಭಾಗ ವ್ಯಾಪ್ತಿಯಲ್ಲಿರುವ ಎಲ್ಲಾ ರೈಲು ನಿಲ್ದಾಣ ರೈಲು ಸಂಚರಿಸುವ ಪ್ರದೇಶದಲ್ಲಿ , ನಿಷೇಧಿತ ಪ್ರದೇಶವೆಂದು ಘೋಷಿಸಿ,ನಿಷೇದಾಜ್ಞೆ ಜಾರಿ ಮಾಡಲಾಗಿದೆ.

 

ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188 ರ ಪ್ರಕಾರ ಕ್ರಮ ಜರುಗಿಸಲಾಗುವುದು. ನಿರ್ಬಂಧಿತ ಪ್ರದೇಶದಲ್ಲಿ 5 ಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಯಾವುದೇ ಧ್ವನಿವರ್ಧಕವನ್ನು ಬಳಸುವುದನ್ನು ನಿರ್ಬಂಧಿಸಿದೆ. ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವಂತಿಲ್ಲ. ಬಹಿರಂಗವಾಗಿ ಘೋಷಣೆ ಕೂಗುವುದು, ಪ್ರಚೋದನಾತ್ಮಕ ಮತ್ತು ಉದ್ರೇಕಕಾರಿಯಾಗಿ ಕಾನೂನು ಸುವ್ಯವಸ್ಥೆಗೆ ಭಂಗ ನಿಷೇದಿಸಲಾಗಿದೆ. ಭಾಷಣ ಸೇರಿದಂತೆ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿರ್ಬಂಧಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಎಂ ಶಿವಮೂರ್ತಿ ಆದೇಶ ಹೊರಡಿಸಿದ್ದಾರೆ.

ಬಂದ್ ಗೆ ಅವಕಾಶವಿಲ್ಲವೆಂದ ಪೊಲೀಸ್ ಇಲಾಖೆ

ಸೆ.29 ಮಂಡ್ಯ ಜಿಲ್ಲೆಯಾದ್ಯಾಂತ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ನೀಡಿರುವ ಬಂದ್ ಕರೆ ಕಾನೂನು ಬಾಹಿರ ಹಾಗೂ ಸಂವಿಧಾನ ವಿರೋಧಿ ಹಾಗೂ ಜನ ಸಾಮಾನ್ಯರ ಮೂಲಭೂತ ಹಕ್ಕು ಚ್ಯುತಿಯಾಗುವುದರಿಂದ ಯಾವುದೇ ರೀತಿಯ ಬಂದ್‌ಗೆ ಅವಕಾಶವಿರುವುದಿಲ್ಲ ಎಂದು ಮಂಡ್ಯ ಪೊಲೀಸ್ ವರಿಷ್ಟಾಧಿಕಾರಿಯವರ ಪ್ರಕಟಣೆ ತಿಳಿಸಿದೆ.

ಯಾವುದೇ ರಾಜಕೀಯ ಪಕ್ಷಗಳು, ಯಾವುದೇ ಸಂಘಟಕರು ಬಂದ್‌ಗೆ ಕರೆ ನೀಡಿದ ಸಂದರ್ಭದಲ್ಲಿ, ಆಗುವ ಆಸ್ತಿಪಾಸ್ತಿಯ ನಷ್ಟಕ್ಕೆ ಅಂತಹ ಬಂದ್‌ಗಳ ಆಯೋಜಕರು ಮತ್ತು ಸಂಘಟಕರೇ ನೇರ ಹೋಣೆಗಾರರಾಗಿ ಮಾಡಿ, ನಷ್ಟವನ್ನು ಸರ್ಕಾರಕ್ಕೆ ಮರುಪಾವತಿಸಲು, ಭರಿಸಲು ಜವಬ್ದಾರರಾಗಿರುತ್ತಾರೆ. ಇದನ್ನು ಉಲ್ಲಂಘಿಸಿ ಬಂದ್‌ ಅಥವಾ ಮೆರವಣಿಗೆ ಹಮ್ಮಿಕೊಂಡಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!