Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಲೋಕಸಭಾ ಅಭ್ಯರ್ಥಿ ಆಯ್ಕೆ ಸಿಎಂ-ಡಿಸಿಎಂ ತೀರ್ಮಾನಕ್ಕೆ ಬಿಟ್ಟದ್ದು: ಸಚಿವ ಡಾ. ಸುಧಾಕರ್

ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ತೀರ್ಮಾನಕ್ಕೆ ಬದ್ಧ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರು ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಲೋಕಸಭಾ ಚುನಾವಣಾ ವೀಕ್ಷಕ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ‌.ಸಿ.ಸುಧಾಕರ್ ತಿಳಿಸಿದರು.

ಮಂಡ್ಯ ನಗರದ ಕಲ್ಲಹಳ್ಳಿಯಲ್ಲಿರುವ ಸುಮ ರವಿ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಲೋಕಸಭಾ ಚುನಾವಣೆ ಕುರಿತಂತೆ ಶಾಸಕರು, ಮಾಜಿ ಶಾಸಕರು, ಮುಂಚೂಣಿ ಘಟಕದ ಅಧ್ಯಕ್ಷರು ಹಾಗೂ ಮುಖಂಡರ ಜತೆ ಚರ್ಚಿಸಿದ ನಂತರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಭೆ ಕರೆದು ಚರ್ಚಿಸುವಂತೆ ಪಕ್ಷದ ಅಧ್ಯಕ್ಷರ ಸೂಚನೆ ಮೇರೆಗೆ ಎಲ್ಲರ ಅಭಿಪ್ರಾಯಗಳನ್ನೂ ಪಡೆಯಲಾಗಿದೆ.20 ವರ್ಷಗಳ ಹಿಂದೆ ಮಂಡ್ಯದಲ್ಲಿ ಯಾವ ಪರಿಸ್ಥಿತಿ ಇತ್ತೋ ಅದು ಈಗ ಬದಲಾವಣೆಯಾಗಿದೆ.ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಎದುರಿಸಿ ಅಧಿಕಾರಕ್ಕೆ ಬಂದ ರೀತಿಯಲ್ಲಿಯೇ ಲೋಕಸಭಾ ಚುನಾವಣೆ ಎದುರಿಸಲಾಗುವುದು.ಯಾರೇ ಅಭ್ಯರ್ಥಿಯಾದರೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ಎಲ್ಲರೂ ತಿಳಿಸಿದ್ದಾರೆ ಎಂದರು.

25 ಸ್ಥಾನ 

ಮುಂಬರುವ ಲೋಕಸಭಾ ಚುನಾವಣೆಯಲ್ಲಿ 15 ಸ್ಥಾನಗಳಲ್ಲ, 25 ಸ್ಥಾನಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿದರೂ ಅಚ್ಚರಿಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ರಾಹುಲ್‌ ಗಾಂಧಿಗೆ ಅಧಿಕಾರದಾಸೆಯಿಲ್ಲ

ನಮ್ಮ ನಾಯಕರಾದ ರಾಹುಲ್‌ಗಾಂಧಿ ಅವರಿಗೆ ಅಧಿಕಾರದ ಆಸೆ ಇಲ್ಲ. ಇದ್ದಿದ್ದರೆ 10 ವರ್ಷಗಳ ಕಾಲ ಡಾ. ಮನಮೋಹನ್‌ಸಿಂಗ್ ಪ್ರಧಾನಿಯಾಗುತ್ತಿರಲಿಲ್ಲ. ಬಿಜೆಪಿಯವರಂತೆ ನಾವು ನಡೆದುಕೊಳ್ಳುವುದಿಲ್ಲ. ಅಡ್ವಾಣಿ ಅವರು ದೇಶದಾದ್ಯಂತ ಸಂಚರಿಸಿ ಪಕ್ಷವನ್ನು ಸಂಘಟಿಸಿದ್ದರು. ಅವರಿಗೆ ಕನಿಷ್ಠ ಒಂದು ಜವಾಬ್ದಾರಿಯನ್ನಾದರೂ ನೀಡಬಹುದಿತ್ತು ಎಂದರಲ್ಲದೆ, ರಾಹುಲ್ ರಾವಣನಲ್ಲ, ಸಜ್ಜನ ರಾಜಕಾರಣಿ ಎಂದರು.

ಈವರೆಗೂ ಯಾವುದೇ ರಾಜಕಾರಣಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ `ಭಾರತ್ ಜೋಡೋ’ ಪಾದಯಾತ್ರೆ ಮಾಡಿಲ್ಲ. ದೇಶದ ಉದ್ದಗಲಕ್ಕೆ ಪಾದಯಾತ್ರೆ ಮಾಡಿ ಸಮಸ್ಯೆಗಳನ್ನು ಆಲಿಸುವ ಕೆಲಸಕ್ಕೆ ಮುಂದಾಗಿಲ್ಲ, ಅದನ್ನು ರಾಹುಲ್ ಮಾಡಿದ್ದಾರೆ ಎಂದು ಹೇಳಿದರು.

ಬಿಜೆಪಿ ನಾಯಕರಿಗೆ ನೈತಿಕತೆಯಿಲ್ಲ

ಕಾವೇರಿ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ಸರ್ವ ಪಕ್ಷಗಳ ಸಭೆಯಲ್ಲಿ ಸರ್ಕಾರದ ನಿಲುವು ಸರಿಯಾಗಿದೆ ಎಂದು ಹೇಳಿ ನಂತರ ಮಾಧ್ಯಮದವರ ಮುಂದೆ ರಾಜಕೀಯಕ್ಕಾಗಿ ಬೇರೆ ಮಾತನಾಡುತ್ತಾರೆ. ಯಡಿಯೂರಪ್ಪ,ಎಚ್.ಡಿ. ಕುಮಾರಸ್ವಾಮಿ ಹಾಗೂ ಬೊಮ್ಮಾಯಿಯವರು ಕಾವೇರಿ ವಿಚಾರದಲ್ಲಿ ಮಧ್ಯ ಪ್ರವೇಶಿಸುವಂತೆ ಮೋದಿಯವರಿಗೆ ಯಾಕೆ ಕೇಳುವುದಿಲ್ಲ. ಮಾಧ್ಯಮದವರ ಮುಂದೆ ಕಾವೇರಿ ವಿಚಾರದಲ್ಲಿ ಬಿಜೆಪಿ ನಾಯಕರಿಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ, ವೀಕ್ಷಕ, ಮಾಜಿ ಸಂಸದ ಚಂದ್ರಪ್ಪ, ಶಾಸಕರಾದ, ಪಿ.ಎಂ ನರೇಂದ್ರಸ್ವಾಮಿ, ರಮೇಶ ಬಾಬು ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಮಧು ಜಿ. ಮಾದೇಗೌಡ, ಮಾಜಿ ಶಾಸಕರಾದ ಬಿ.ರಾಮಕೃಷ್ಣ, ಹೆಚ್.ಬಿ.ರಾಮು, ಕೆ.ಬಿ.ಚಂದ್ರಶೇಖರ್, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡರಾದ ವಿಜಯ್ ರಾಮೇಗೌಡ, ಚಿದಂಬರ್ ಸೇರಿದಂತೆ ಪಕ್ಷದ ಮುಖಂಡರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!