Thursday, September 19, 2024

ಪ್ರಾಯೋಗಿಕ ಆವೃತ್ತಿ

ಗಣಂಗೂರು ನಂಜೇಗೌಡರ ‘ಶ್ರೀರಂಗಪಟ್ಟಣದ ಪ್ರಾಚೀನ ದೇಗುಲಗಳು’ ಪುಸ್ತಕ ಬಿಡುಗಡೆ

ಪ್ರಜಾವಾಣಿ ವರದಿಗಾರ ಗಣಂಗೂರು ನಂಜೇಗೌಡರ ‘ಶ್ರೀರಂಗಪಟ್ಟಣ ಪ್ರಾಚೀನ ದೇವಾಲಯಗಳು’ ಪುಸ್ತಕವನ್ನು ಕನ್ನಡದ ವಾಗ್ಮಿ ಹಿರೇಮಗಳೂರು ಕಣ್ಣನ್ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪತ್ರಕರ್ತರು ನಂಜೇಗೌಡ ಅವರು ಶ್ರೀರಂಗಪಟ್ಟಣದ ಪ್ರಾಚೀನ ದೇವಾಲಯಗಳ ಬಗ್ಗೆ ತಿಳಿಸುವ ಮೂಲಕ ಈ ನಾಡಿನ ಸಂಸ್ಕೃತಿ ಹಾಗೂ ಅದರ ಮಹತ್ವವನ್ನು ತಿಳಿಸುವ ಕೆಲಸ ಮಾಡಿರುವುದು ಶ್ಲಾಘನೀಯ ಎಂದರು.

ದೇವಾಲಯಗಳು ನಮ್ಮ ನಾಡಿನ ಸಾಂಸ್ಕೃತಿಕ ಕೇಂದ್ರಗಳಾಗಿದ್ದು, ಇವುಗಳನ್ನು ಪುರಾಣ ಮಾಡದೆ, ಇತಿಹಾಸವನ್ನಾಗಿಸಬೇಕು.ಜನಸಾಮಾನ್ಯರಿಗೆ ದೇವಾಲಯಗಳನ್ನು ಪರಿಚಯಿಸಿ, ಸುಮಧುರ ಸಾಂಸ್ಕೃತಿಕ ತಾಣವನ್ನಾಗಿ ಮಾಡಬೇಕಾಗಿದೆ ಎಂದರು.

ರಾಜ್ಯದ ಪ್ರತಿ ದೇವಾಲಯಗಳ ಎದುರು ದೇವಾಲಯದ ಮಾಹಿತಿ ಫಲಕಗಳನ್ನು ಅಳವಡಿಸಬೇಕು.ದೇವಾಲಯದ ಸುತ್ತಳತೆ,ವಿನ್ಯಾಸ, ನಿರ್ಮಾಣದ ಮಾಹಿತಿ, ಪೂಜೆ ಜೊತೆಗೆ ದೇವಾಲಯದ ಸಮಗ್ರ ಇತಿಹಾಸವುಳ್ಳ ಕೈಪಿಡಿಯನ್ನು ನೀಡಬೇಕು.

ದೇವಾಲಯಗಳಿಗೆ ಚಿನ್ನಾಭರಣಗಳನ್ನು ನೀಡಿದರೆ ಸಾಲದು. ಬದಲಾಗಿ ಆವರಣದಲ್ಲಿ ಸುಂದರ ಉದ್ಯಾನವನ, ವೈದ್ಯಕೀಯ ಕೇಂದ್ರ ಮತ್ತಿತರ ಕೇಂದ್ರ ತೆರೆಯಬೇಕು. ತಮಿಳುನಾಡಿನ ಪ್ರಾಚೀನ ದೇಗುಲಗಳ ಕುರಿತು ಬೆಂಗಳೂರು ವಿಶ್ವವಿದ್ಯಾನಿಲಯ ಸಮಗ್ರ ಮಾಹಿತಿಯುಳ್ಳ ಪುಸ್ತಕ ಪ್ರಕಟಿಸಿದೆ.ಆದರೆ ಕರ್ನಾಟಕದ ದೇವಾಲಯಗಳು ಕುರಿತು ಮಾಹಿತಿ ಪ್ರಕಟಿಸಿಲ್ಲ. ದೇವಾಲಯಗಳು ಸಂಸ್ಕೃತಿಯನ್ನು ಬಿಂಬಿಸಲಿದ್ದು, ಕೆಲವೆಡೆ ದೇವಾಲಯದ ಪಳೆಯುಳಿಕೆ ಮಾತ್ರ ಉಳಿದಿವೆ. ಹಾಗಾಗಿ ದೇವಾಲಯಗಳ ಕುರಿತು ಮಾಹಿತಿ ಪುಸ್ತಕಗಳು ಹೆಚ್ಚಿನದಾಗಿ ಹೊರ ಹೊಮ್ಮಬೇಕೆಂದರು.

ಸನಾತನ ಧರ್ಮ ಮತ್ತು ಜಾತಿ ನಿರ್ಮೂಲನೆ ಆಂದೋಲನ ನಡೆಸುವುದಾಗಿ ಸಾಹಿತಿ ಭಗವಾನ್ ಹೇಳಿದ್ದು, ಪರಂಪರೆಯ ಪ್ರತೀಕವಾಗಿರುವ ಸನಾತನ ಧರ್ಮ ವಿನೂತನ ಹಾಗೂ ನೂತನ ಧರ್ಮವಾಗಿದೆ. ಇದರ ವಿಭಿನ್ನ ಸಂಸ್ಕೃತಿ ಉಳಿಸಬೇಕಾಗಿದೆ ಎಂದರು.

ಸ್ವಾಮಿ ವಿವೇಕಾನಂದರು ಚಿಕಾಗೋಗೆ ತೆರಳಲು ಧನಸಂಗ್ರಹಿಸಿ ಸಹಾಯ ಮಾಡಿದ ಚಿಕ್ಕಮಗಳೂರಿನ ಅರಸಿಂಗ ಪೆರುಮಾಳ್ ಪತ್ನಿ ಶ್ರೀ ರಂಗಮ್ಮ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದವರಾಗಿದ್ದು, ಇವರು ವಿವೇಕಾನಂದರಿಗೆ ಆರೈಕೆ ಮಾಡಿದ್ದಾರೆ. ಇವರ ಕುರಿತು ಕೃತಿ ರಚನೆಯಾಗುತ್ತಿದ್ದು, ಶೀಘ್ರದಲ್ಲೇ ಲೋಕಾರ್ಪಣೆ ಯಾಗಲಿದೆ ಎಂದರು.

ಪುಸ್ತಕ ಕುರಿತು ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ. ಎಚ್ ಎಲ್. ನಾಗರಾಜು, ಪತ್ರಕರ್ತ ಗಣಂಗೂರು ನಂಜೇಗೌಡ ಅವರು ಶ್ರೀರಂಗಪಟ್ಟಣದ ಪ್ರಾಚೀನ ದೇವಾಲಯಗಳ ಇತಿಹಾಸದ ಮೇಲೆ ಬೆಳಕು ಚೆಲ್ಲಿದ್ದಾರೆ. ಜನರ ಧಾರ್ಮಿಕ ನಂಬಿಕೆಯ ಶ್ರದ್ಧಾ ಕೇಂದ್ರವಾಗಿರುವ ದೇವಾಲಯಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ.ಇಡೀ ರಾಜ್ಯದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ಹೊಂದಿರುವುದು ಮಂಡ್ಯ ಜಿಲ್ಲೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ದೇವಾಲಯಗಳು ಜಿಲ್ಲೆಯಲ್ಲಿದೆ. ಹಿಂದೆ ರಾಜ- ಮಹಾರಾಜರ ಕಾಲದಲ್ಲಿ ಅದ್ಭುತ ದೇವಾಲಯಗಳ ನಿರ್ಮಾಣವಾಗಿದ್ದು, ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿರುವ ಅವುಗಳನ್ನು ಉಳಿಸಿಕೊಳ್ಳಬೇಕಿದೆ ಎಂದರು.

ಗಣಂಗೂರು ನಂಜೇಗೌಡರು ದೇವಾಲಯಗಳಲ್ಲಿರುವ ವಾಸ್ತವಿಕ ಅಂಶಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿವಿಧ ಜಾತಿ,ಜನಾಂಗಗಳು ಆಚರಿಸುತ್ತಿದ್ದ ಧಾರ್ಮಿಕ ಉತ್ಸವ, ಪರಂಪರೆ, ಆಚರಣೆಗಳು ಜನರನ್ನು ಹೇಗೆ ಒಗ್ಗೂಡಿಸಿವೆ ಎಂಬುದನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ಗಣಗೂರು ನಂಜೇಗೌಡರ ಪುಸ್ತಕವನ್ನು ಶ್ರೀರಂಗಪಟ್ಟಣ ದಸರಾದಲ್ಲಿ ಬರುವ ಅತಿಥಿಗಳಿಗೆ ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದರು. ನಂಜೇಗೌಡ ಅವರು ಮತ್ತಷ್ಟು ಪುಸ್ತಕಗಳನ್ನು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಲಿ ಎಂದು ಶುಭ ಕೋರಿದರು.

ಸಮಾರಂಭ ಉದ್ಘಾಟಿಸಿದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಮಾತನಾಡಿ, ಶ್ರೀರಂಗಪಟ್ಟಣ ಪಾರಂಪರಿಕ ನಗರಿ. ಇಲ್ಲಿನ ಪ್ರಾಚೀನ ದೇಗುಲಗಳ ಬಗ್ಗೆ ಪರಿಚಯ ಮಾಡಿಕೊಡುವ ಕೆಲಸ ಮಾಡಿರುವುದು ಒಳ್ಳೆಯ ಬೆಳವಣಿಗೆ. ವಿಷಯ ಸಂಗ್ರಹಿಸಿ ಪುಸ್ತಕ ಬರೆಯುವುದು ಸುಲಭವಲ್ಲ,ಸತತ ಪರಿಶ್ರಮ ಬೇಕು, ಮುಂದಿನ ದಿನಗಳಲ್ಲಿ ಶ್ರೀರಂಗಪಟ್ಟಣದ ಇತಿಹಾಸ ಹೊರ ತೆಗೆಯುವ ಕೆಲಸ ಮಾಡಬೇಕಾಗಿದೆ ಎಂದರು.

ಇತಿಹಾಸ ಸಂಶೋಧಕ ತೈಲೂರು ವೆಂಕಟ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಚಿಂತಕಿ ನಾಗಶ್ರೀ ತ್ಯಾಗರಾಜು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ ಮಂಜುನಾಥ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!