Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರಾಧಿಕಾರದ ಆದೇಶಕ್ಕೆ ಆಕ್ರೋಶ: ಹೋರಾಟಗಾರರಿಂದ ರಸ್ತೆತಡೆ

ಕಾವೇರಿ ನದಿ ಪಾತ್ರದ ಜಲಾಶಯಗಳಿಂದ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿನಿತ್ಯ 3,000 ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ ನೀಡಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಕ್ರಮ ಖಂಡಿಸಿ ಕಾವೇರಿ ಹೋರಾಟಗಾರರು ಮಂಡ್ಯದಲ್ಲಿ ಶುಕ್ರವಾರ ರಸ್ತೆತಡೆ ನಡೆಸಿದರು.

ಮಂಡ್ಯ ನಗರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಭಾರತೀಯ ವೈದ್ಯಕೀಯ ಸಂಘದ ವೈದ್ಯರು, ರೈತರು, ದಲಿತ, ಕನ್ನಡ ಪರ ಹೋರಾಟಗಾರರು ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಆಕ್ರೋಶ ಹೊರ ಹಾಕಿದರು.

ಈ ಸಂದರ್ಭದಲ್ಲಿ ಸಮಿತಿಯ ಸುನಂದಾ ಜಯರಾಂ ಮಾತನಾಡಿ, ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿದ್ದಂತೆ ಪ್ರತಿನಿತ್ಯ 3000 ಕ್ಯೂಸೆಕ್ ನಂತೆ 15 ದಿನಗಳ ಕಾಲ ನೀರು ಹರಿಸುವಂತೆ ಪ್ರಾಧಿಕಾರ ಆದೇಶ ಮಾಡಿರುವುದು ರೈತರ ಕತ್ತು ಕುಯ್ಯುವ ಕೆಲಸವಾಗಿದೆ, ಇಲ್ಲದ ನೀರನ್ನು ಬಿಡುವುದು ಹೇಗೆ, ತಮಿಳುನಾಡು ನೀರಿನ ಹಕ್ಕು ಸ್ಥಾಪಿಸಿ ಏಕಮುಖ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಅದೇ ರೀತಿ ರಾಜ್ಯ ಸರ್ಕಾರ ನಿರಂತರವಾಗಿ ನೀರು ಹರಿಸುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ, ಪ್ರಾಧಿಕಾರದ ಆದೇಶವನ್ನು ತಿರಸ್ಕರಿಸಿ ನೀರು ಸ್ಥಗಿತ ಮಾಡಬೇಕು ಎಂದು ಆಗ್ರಹಿಸಿದರು.

ಭಾರತೀಯ ವೈದ್ಯಕೀಯ ಸಂಘದ ಡಾ. ಜಗದೀಶ್ ಮಾತನಾಡಿ, ಕರ್ನಾಟಕದ ಜನತೆಗೆ ಕುಡಿಯುವ ನೀರು ಉಳಿಸಿಕೊಳ್ಳಲು ಹೋರಾಟ ನಡೆಯುತ್ತಿದೆ, ಆದರೆ ತಮಿಳುನಾಡಿಗೆ ಮೂರನೇ ಬೆಳೆ ಬೆಳೆಯಲು ನೀರು ಬಿಡಲಾಗುತ್ತಿದೆ, ಪ್ರಾಣಿ ಪಕ್ಷಿಗಳು, ಜನಜಾನುವಾರುಗಳಿಗೆ ಕುಡಿಯುವ ನೀರು ಉಳಿಸಲು ಪ್ರಾಧಿಕಾರದ ಆದೇಶವನ್ನು ಧಿಕ್ಕರಿಸಿ ಜಲಾಶಯಗಳಿಂದ ಹರಿಯುತ್ತಿರುವ ನೀರು ನಿಲ್ಲಿಸಿ ಎಂದು ಒತ್ತಾಯಿಸಿದರು,

ಈ ಸಂದರ್ಭದಲ್ಲಿ ರೈತಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಬೇಕ್ರಿ ರಮೇಶ್  ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!