Thursday, September 19, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ ಜಾತ್ಯತೀತತೆ ನಾಟ್ಯಕ್ಕೆ ತೆನೆ ಹೊತ್ತ ಮಹಿಳೆಯೇ “ಕೋಮು-ಕುಂಡ”ದಲ್ಲಿ ಬಿದ್ದು ಆತ್ಮಹತ್ಯೆ: ಕಾಂಗ್ರೆಸ್ ವಾಗ್ದಾಳಿ

”ಹಿಂದಿನ ನಿಮ್ಮ ಎಲ್ಲ ಅಕ್ರಮ, ಅನಾಚಾರ, ಅವ್ಯವಹಾರಗಳು ಹೊರಬರುತ್ತವೆ ಎಂದು ಹೆದರಿ ಬಿಜೆಪಿ ಸೆರಗಿನೊಳಗೆ ಸೇರಿಕೊಂಡಿರುವ ನಿಮ್ಮ ಜಾತ್ಯತೀತತೆ ನಾಟ್ಯಕ್ಕೆ ಬೆರಗಾಗಿ ತೆನೆ ಹೊತ್ತ ಮಹಿಳೆಯೇ “ಕೋಮು-ಕುಂಡ”ದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ಜೆಡಿಎಸ್‌ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆದಿದೆ.

ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ”ಕೈ ಹಿಡಿದವರ ತಲೆ ಕಡಿಯುವ, ಹೆಗಲು ಕೊಟ್ಟವರ ಬೆನ್ನಿಗೆ ಚೂರಿ ಹಾಕುವ, ನಂಬಿದವರಿಗೆ ನಾಮ ಬಳಿಯುವ ಕುಮಾರಸ್ವಾಮಿ ರಾಮಾಯಣದ ಮಂಥರೆ, ಮಹಾಭಾರತದ ಶಕುನಿಯೇ ಸರಿ!” ಎಂದು ಕುಟುಕಿದೆ.

”ಕ್ಷಣಕ್ಕೊಂದು ಬಣ್ಣ, ದಿನಕ್ಕೊಂದು ವೇಷ ತೊಡುವ ನಿಮ್ಮ ಬಣ್ಣದೋಕುಳಿಯಾಟಕ್ಕೆ ಗೋಸುಂಬೆಯೇ ಲಗಾ ಹೊಡೆದಿದೆ!” ಎಂದು ಟೀಕಿಸಿದೆ.

“>

”ಕುಮಾರಸ್ವಾಮಿಯವರೇ, ಮೊದಲ ಬಾರಿ ನಿಮ್ಮನ್ನು ಸಿಎಂ ಮಾಡಿದ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸದೆ ವಚನ ಭ್ರಷ್ಟರಾದಿರಿ, ದ್ರೋಹ ಮಾಡಿದಿರಿ. ಕಾಂಗ್ರೆಸ್ ನಿಮ್ಮನ್ನು ಸಿಎಂ ಮಾಡಿದಾಗ ಯಡಿಯೂರಪ್ಪ ಅಸೆಂಬ್ಲಿಯಲ್ಲಿ ಹೇಳಿದ್ದರು. “ಶಿವಕುಮಾರ್, ಈ ಅಪ್ಪ ಮಕ್ಕಳನ್ನು ನಂಬಬೇಡಿ, ಬಳಸಿ ಬಿಸಾಡುತ್ತಾರೆ. ಹಾವು ಇವರ ಲಾಂಚನ” ಎಂದು. ಆದರೆ ಸಿದ್ದಾಂತಕ್ಕಾಗಿ ಕಾಂಗ್ರೆಸ್ ನಿಮ್ಮ ಜತೆ ನಿಂತಿತ್ತು” ಎಂದು ಮೈತ್ರಿ ಸರ್ಕಾರದ ದಿನಗಳನ್ನು ಕಾಂಗ್ರೆಸ್ ನೆನಪಿಸಿದೆ.

”ಕಾಂಗ್ರೆಸ್ ದಯಾಭಿಕ್ಷೆಯಿಂದ ಎರಡನೇ ಬಾರಿಗೆ ಸಿಎಂ ಆದ ನಿಮಗೆ ಕಿಂಚಿತ್ತಾದರೂ ನಿಯತ್ತು ಬೇಡವೇ? ಓಹ್.. ಕ್ಷಮಿಸಿ, ಆತ್ಮಸಾಕ್ಷಿ ಮಾರಿಕೊಂಡೇ ರಾಜಕೀಯ ಬಯಲಾಟ ಆಡುವ ನಿಮ್ಮಂತವರಿಂದ ನೀತಿ, ನಿಯತ್ತು, ನೈತಿಕತೆ ನಿರೀಕ್ಷೆ ಮಾಡುವುದೇ ಮಹಾಪಾಪ!” ಕಿಡಿಕಾರಿದೆ.

”ಕುಮಾರಸ್ವಾಮಿಯವರೇ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಅನ್ಯ ರಾಜ್ಯದ ಪೇಶ್ವೆ ಎಂದು ನಿಂದಿಸಿದಿರಿ. 2.50 ಕೋಟಿಯಂತೆ ಸರಕಾರಿ ಹುದ್ದೆ ಮಾರಿಕೊಂಡ ಭ್ರಷ್ಟ ಎಂದಿರಿ. ಸಿ ಟಿ ರವಿಯನ್ನು ಲೂಟಿ ರವಿ ಎಂದು ನಾಮಕರಣ ಮಾಡಿದವರೂ ನೀವೇ. ಇವತ್ತು ಅವರದ್ದೇ ಅಂಗಿ ಚುಂಗು ಹಿಡಿದು ನಿಂತಿದ್ದೀರಲ್ಲಾ… ನಿಮಗೇನಾದರೂ ಆತ್ಮಗೌರವ ಇದೆಯೇ?” ಎಂದು ವಾಗ್ದಾಳಿ ನಡೆಸಿದೆ.

”ಇಡೀ ರಾಜ್ಯದ ಜನಕ್ಕೆ ಅರ್ಥವಾಗಿದೆ. ಅಧಿಕಾರದ ಕನಸು ನುಚ್ಚುನೂರಾದ ನಂತರ ನೀವೆಷ್ಟು ಹತಾಶರಾಗಿದ್ದೀರಿ, ಮತಿಭ್ರಂಶರಾಗಿದ್ದೀರಿ ಎಂದು ನೀವಾಡುವ ಒಂದೊಂದು ನುಡಿಯಲ್ಲೂ ಅದರದೇ ಪ್ರತಿಫಲನ. ಪಾಪ, ನಿಮ್ಮ ಸ್ಥಿತಿ ಕಂಡು ಅಯ್ಯೋ ಅನ್ನಿಸುತ್ತದೆ. ಇದೇ ಸ್ಥಿತಿ ಮುಂದುವರೆದರೆ ಬೀದಿಯಲ್ಲಿ ಅಂಗಿ ಹರಿದುಕೊಂಡು ಓಡಾಡುವ ದಿನ ದೂರವಿಲ್ಲ ಎಂಬುದನ್ನು ನೆನೆದು ಭಯವೂ ಆಗುತ್ತದೆ” ಎಂದು ಹೇಳಿದೆ.

”ಅದು ಒತ್ತಟ್ಟಿಗಿರಲಿ, ನಿಮ್ಮನ್ನು, ನಿಮ್ಮ ಕುಟುಂಬದವರನ್ನು ದಶಕಗಳ ಕಾಲ ಪೊರೆದ ಒಕ್ಕಲಿಗರು ನನಗೆ ಮತ ಹಾಕಿಲ್ಲ ಎನ್ನುವ ಮೂಲಕ ಅವರಿಗೆ ದ್ರೋಹ, ಅವಮಾನ ಮಾಡಿರುವ ನಿಮ್ಮನ್ನು ಆ ಭೈರವೇಶ್ವರನೂ ಕ್ಷಮಿಸುವುದಿಲ್ಲ. ಒಕ್ಕಲಿಗರಿಂದ ನೀವು ಬೆಳೆದಿರೇ ಹೊರತು ನಿಮ್ಮಿಂದ ಸಮುದಾಯವೇನೂ ಉದ್ಧಾರ ಆಗಿಲ್ಲ. ಎಷ್ಟೇ ಆಗಲಿ, ಒಕ್ಕಲಿಗರ ಆತ್ಮಗೌರವದ ಸಂಕೇತವಾದ ಆದಿ ಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳಿಗೇ ಸೆಡ್ಡು ಹೊಡೆದು ಮತ್ತೊಂದು ಮಠ ಕಟ್ಟಿದ ಮಹಾನುಭಾವರಲ್ಲವೇ ನೀವು..?!” ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

”ಇನ್ನೊಂದೆಡೆ ಅಲ್ಪಸಂಖ್ಯಾತರ ಅಗತ್ಯವಿಲ್ಲ, ಅವರನ್ನು ನಂಬಿಕೊಂಡು ರಾಜಕಾರಣ ಮಾಡಿಲ್ಲ ಅನ್ನುತ್ತೀರಿ. ಹಾಗಾದರೆ ನಿಮಗೆ ನೀವೇ ಮತ ಹಾಕಿಕೊಂಡು ಗೆದ್ದಿರಾ ಕುಮಾರಣ್ಣ..?!” ಎಂದು ಪ್ರಶ್ನೆ ಮಾಡಿದೆ.

”ಹಿಂದೆ ನೀವು ಮಕ್ಮಲ್ ಟೋಪಿ ಹಾಕಿದ್ದೇನು? ಬಿರಿಯಾನಿ ತಿಂದಿದ್ದೇನು? ಮಸೀದಿ ಹೊಕ್ಕಿದ್ದೇನು? ಆಹಾ..! ಅದೇನು ನಾಟಕ, ಅದೇನು ಪಂಚರಂಗಿ ಆಟ? ಈಗ, ಅಲ್ಪಸಂಖ್ಯಾತರನ್ನು ನಂಬಿಕೊಂಡು ರಾಜಕಾರಣ ಮಾಡಿಲ್ಲ ಎನ್ನುವ ನಿಮ್ಮ ಬಾಯಲ್ಲಿರುವುದು ನಾಲಿಗೆಯೋ ಅಥವಾ ಕೊಳಕುಮಂಡಲ ಹಾವೋ?!” ಎಂದು ಕಾಂಗ್ರೆಸ್ ಕಿಡಿಕಾರಿದೆ.

”ಐಟಿ, ಇಡಿ ಕಿಂದರ ಜೋಗಿ ಅಮಿತ್ ಶಾ ಕಾಲಿಗೆ ಬಿದ್ದು ರಾಜಕೀಯ ವಿರೋಧಿಗಳಿಗೆ ಗುಂಡಿ ತೋಡುವುದರಲ್ಲಿ ಮಗ್ನರಾಗಿರುವ ಕುಮಾರಣ್ಣ ಒಂದು ವಿಷಯ ತಿಳಿದುಕೊಳ್ಳಿ. ನೀವೇ ನಿಮ್ಮ ಪಾಲಿನ ಭಸ್ಮಾಸುರ! ಸ್ವಲ್ಪ ಕಾಲ ತಡೆದು ನೋಡಿ, ನಿಮ್ಮ ಗುಂಡಿಯಲ್ಲಿ ಬಿದ್ದು ನೀವೇ ಹೆಂಗೆ ಒದ್ದಾಡುತ್ತೀರಿ ಅಂತಾ!” ಎಚ್ಚರಿಸಿದೆ.

”ಕೈಲಾಗದವರು ಮೈ ಪರಚಿಕೊಂಡರೆ ಆಗೋದು ಗಾಯ, ರಣ ಗಾಯ! ಕೈ ನಾಯಕರ ಮೇಲೆ ಬಿದ್ದರೇ ಕೈಲಾಸ ಪ್ರಾಪ್ತಿ ಆಗದು ಕುಮಾರಣ್ಣ. ನಿಮ್ಮ ಮಾತೇ ನಿಮ್ಮ ಪಾಲಿನ ಶತ್ರು! ಮಾತಾಡಿ, ಮಾತಾಡಿ ಮಂಡ್ಯ ಚುನಾವಣೆಯಲ್ಲಿ ನಿಮ್ಮ ಮಗನನ್ನು ಬಲಿ ಕೊಟ್ಟಿರಿ. ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಪಕ್ಷವನ್ನೇ ಅಡ್ಡಡ್ಡ ಉದ್ದುದ್ದ ಮಲಗಿಸಿದಿರಿ. ಈಗ ನಿಮ್ಮನ್ನು ನೀವೇ ಹಾಳು ಮಾಡಿಕೊಳ್ಳುತಿದ್ದೀರಿ..!” ಎಂದು ಹೇಳಿದೆ.

”ನಿಯತ್ತು ಮತ್ತು ಕುಮಾರಸ್ವಾಮಿ ಎರಡೂ ವಿರುದ್ಧ ಪದಗಳು ಎಂಬುದು ಜಗಜ್ಜಾಹಿರು! ನಿಮ್ಮ ಕುಟುಂಬಕ್ಕೂ ನೀವು ನಿಯತ್ತಾಗಿಲ್ಲ. ನಿಮ್ಮ ಪಕ್ಷದ ಸಿದ್ಧಾಂತಕ್ಕೂ ನೀವು ನಿಯತ್ತಾಗಿಲ್ಲ. ನಿಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೂ ನಿಯತ್ತಾಗಿಲ್ಲ. ನಿಮ್ಮನ್ನು “ಕೈ ಹಿಡಿದ” ಜನರಿಗೂ ನಿಯತ್ತಾಗಿಲ್ಲ. ನಿಮ್ಮನ್ನು ನಂಬಿದ ಸಮುದಾಯಕ್ಕೂ ನಿಯತ್ತಾಗಿಲ್ಲ. ಕುಲದ ಮಠಕ್ಕೂ ಕೊಡಲಿ ಕಾವಾದಿರಿ. ಕೊನೇ ಪಕ್ಷ ನಿಮ್ಮ ಆತ್ಮಸಾಕ್ಷಿಗಾದರೂ ನಿಯತ್ತಾಗಿದ್ದೀರಾ? ಅದೂ ಇಲ್ಲ. ಹತಾಶೆ ಆತ್ಮಸಾಕ್ಷಿಯನ್ನೇ ಕೊಂದಿದೆ!” ಎಂದಿದೆ.

”ಹೀಗಾಗಿ ನಿಮ್ಮಂತವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುವ ಅಗತ್ಯವಿಲ್ಲ. ನೀವೀಗ ನಿರುದ್ಯೋಗಿ, ಪರರ ನಿಂದನೆಗೆ ಸಾಕಷ್ಟು ಸಮಯವಿದೆ. ಮಾತಾಡುತ್ತಾ ಹೋಗಿ. ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮಗೆ ಕೆಲಸವಿದೆ, ಜನ ಜವಾಬ್ದಾರಿ ಕೊಟ್ಟಿದ್ದಾರೆ. ಅದನ್ನು ಮರೆತು ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲ ಉತ್ತರ ಕೊಡುತ್ತಾ ಹೋದರೆ ನಿಮಗೂ ನಮಗೂ ವ್ಯತ್ಯಾಸ ಇರುವುದಿಲ್ಲ. ನೀವು ಮಾತಾಡಿ, ಮಾತಾಡುತ್ತಾ ಹೋಗಿ… ಅಲ್ ದ ಬೆಸ್ಟ್!” ಎಂದು ಕಾಂಗ್ರೆಸ್ ಪೋಸ್ಟ್ ಮಾಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!