ಸಾರ್ವಜನಿಕರು ಉತ್ತಮ ಚಿಂತನೆಗಳೊಂದಿಗೆ ಸಮಾಜ ರೂಪಿಸಲು ಸಾಧಕರ ಜಯಂತಿಗಳ ಆಚರಣೆ ಸಹಕರಿಸುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಕನ್ನಡ ಮತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಶನಿವಾರ ನಡೆದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ, ವಾಲ್ಮೀಕಿರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ವಾಲ್ಮೀಕಿ ಅವರು ತಮ್ಮ ಜೀವನದಲ್ಲಿ ಅಳವಡಿಕೊಂಡಿದ್ದ ತಪ್ಪು ಮಾರ್ಗವನ್ನು ತೊರೆದು ಮನಪರಿವರ್ತನೆ ಮಾಡಿಕೊಂಡು ಮಹಾನ್ ಋಷಿ ಆಗಿ ರಾಮಾಯಣವನ್ನು ರಚಿಸಿದರು. ಕೆಲವು ಸನ್ನಿವೇಶ, ಒತ್ತಡದಿಂದ ಕೆಟ್ಟ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಬದಲಾವಣೆಗೆ ಪ್ರತಿಯೊಬ್ಬರಿಗೂ ಅವಕಾಶವಿದೆ. ಮಹಾನ್ ವ್ಯಕ್ತಿಗಳ ತತ್ವ, ಆದರ್ಶ ಹಾಗೂ ಅವರು ನಡೆದ ಬಂದ ದಾರಿಗಳು ಸದಾ ಜೀವನಕ್ಕೆ ದಾರಿ ದೀಪ ಎಂದರು.
ಶಾಸಕರಾದ ಪಿ.ರವಿಕುಮಾರ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಪ್ರಾಚೀನ ಕಾಲದ ಅತ್ಯುತ್ತಮ ಬರಹಗಾರ ಮತ್ತು ಗೌರವಾನ್ವಿತ ಋಷಿ. ಅವರು ರಾಮಾಯಣ ಮಹಾಕಾವ್ಯವನ್ನು ರಚಿಸಿದರು. ರಾಮಾಯಣವು ಭಗವಾನ್ ರಾಮನ ಜೀವನವನ್ನು ಚಿತ್ರಿಸುವ ಮೊದಲ ಸಂಸ್ಕೃತ ಪುಸ್ತಕವಾಗಿದೆ ಎಂದರು.
ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ ಕೃಷ್ಣಯ್ಯ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ವಿಶ್ವವಿಖ್ಯಾತವಾಗಿ ಅವರನ್ನು ಋಷಿ ಕವಿ, ಕವಿ ಕೋಗಿಲೆ, ಆದಿ ಕವಿ ಹಾಗೂ ಮುಂತಾದ ಹೆಸರಿನಲ್ಲಿ ಕರೆಯಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಮುದಾಯದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ 12 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಾಧಕರಾದ ಆರ್. ಜಗದೀಶ್, ಅರ್ಕೇಶ, ಸೋಮಶೇಖರ್ ಬಿ.ಜೆ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್,
ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್ ನಾಗರಾಜು, ಉಪವಿಭಾಗಾಧಿಕಾರಿ ಶಿವಮೂರ್ತಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಆಡಳಿತ) ಎಂ ಬಾಬು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ. ಸಿದ್ದಲಿಂಗೇಶ್, ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಚಂದ್ರನಾಯಕ, ಉಪಾಧ್ಯಕ್ಷ ಪುಟ್ಟಸ್ವಾಮಿನಾಯಕ, ಸಂಘ ಸಂಸ್ಥೆಗಳ ಮುಖಂಡರಾದ ವೆಂಕಟೇಶ್, ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




