Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಾತಿ ನಿಂದನೆ: ಪುನೀತ್ ಕೆರೆಹಳ್ಳಿ ಮತ್ತೇ ಬಂಧನ

ಪದೇ ಪದೇ ನಾಲಿಗೆ ಹರಿಬಿಟ್ಟು ಅಶಾಂತಿ ಉಂಟು ಮಾಡುವ ಹಿಂದುತ್ವ ಮುಖಂಡ, ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷ ಪುನೀತ್‌ ಕೆರೆಹಳ್ಳಿ ಬಂಧನವಾಗಿದೆ. ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ನಿಂದಿಸಿದ್ದ ಪ್ರಕರಣದಲ್ಲಿ ಇದೀಗ ಪುನೀತ್ ಜೈಲು ಸೇರಿದ್ದಾನೆ.

ಪುನೀತ್ ಕೆರೆಹಳ್ಳಿ ಈಗಾಗಲೇ ಹಲವು ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. 2013ರಲ್ಲಿ ವೇಶ್ಯಾವಾಟಿಕೆ ಪ್ರಕರಣವೊಂದರಲ್ಲಿ ಸಿಲುಕಿ ಬಿದ್ದಿದ್ದ. ಗೋ ರಕ್ಷಣೆ ಹೆಸರಲ್ಲಿ ಇದ್ರೀಸ್ ಪಾಷಾ ಎಂಬ ವ್ಯಕ್ತಿಯನ್ನು ಕೊಂದ ಆರೋಪವೂ ಪುನೀತ್‌ ಕೆರೆಹಳ್ಳಿ ಮತ್ತು ಆತನ ಗ್ಯಾಂಗ್ ಮೇಲೆ ಇದೆ. ವಿಧಾನಸೌಧಕ್ಕೆ ಕಲ್ಲು ಹೊಡೆಯುವ ಮತ್ತು ಬಸ್ಸಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ ಪ್ರಕರಣ ದಾಖಲಾಗಿತ್ತು. ವಕೀಲರು ಮತ್ತು ಕೆಪಿಸಿಸಿ ವಕ್ತಾರರಾಗಿರುವ ಸೂರ್ಯ ಮುಕುಂದರಾಜ್ ಅವರನ್ನು ಮತ್ತು ಅವರ ಸಹೋದ್ಯೋಗಿಗಳ ಬಗ್ಗೆ ಅವಹೇಳನಕಾರಿಯಾಗಿ, ಅವಾಚ್ಯ ಪದಗಳನ್ನು ಬಳಸಿ ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದನು. ಈ ವಿಚಾರವಾಗಿಯೂ ದೂರು ದಾಖಲಾಗಿದೆ.

ಇಂತಹ ಅನೇಕ ಗಂಭೀರ ಪ್ರಕರಣಗಳಲ್ಲಿ ಸಿಲುಕಿರುವ ಹಿಂದುತ್ವ ಮುಖಂಡ ಪುನೀತ್ ಕೆರೆಹಳ್ಳಿ, ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲವಾಗಿ ಬರೆಯುತ್ತಾ ಕನ್ನಡಪರ ಹೋರಾಟಗಾರ, ದಲಿತ ಮುಖಂಡ ಹರೀಶ್ ಭೈರಪ್ಪ ಅವರ ಕುರಿತು ಕೀಳುಮಟ್ಟದ ಭಾಷೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕಿದ್ದರು. ಈ ಕುರಿತು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಶುಕ್ರವಾರ ಪುನೀತ್ ಬಂಧನವಾಗಿದೆ.

ದೂರಿನಲ್ಲಿ ಏನಿದೆ?

”ನಾನು ದಲಿತನಾಗಿರುವ ಕಾರಣ ಪುನೀತ್ ಕೆರೆಹಳ್ಳಿ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಜಾತಿ ನಿಂದನೆ ಮಾಡಿದ್ದಾನೆ” ಎಂದು ಭೈರಪ್ಪ ಹರೀಶ್ ಕುಮಾರ್ ಅವರು ದೂರಿನಲ್ಲಿ ಹೇಳಿದ್ದಾರೆ.

”ನಾನೊಬ್ಬ ಕನ್ನಡಪರ ಹೋರಾಟಗಾರನಾಗಿದ್ದು ಇತ್ತೀಚೆಗೆ ಇದೀಸ್ ಪಾಷಾ ಕೊಲೆ ಆರೋಪದಲ್ಲಿ ಜೈಲು ಶಿಕ್ಷೆಯಿಂದ ಬಿಡುಗಡೆಗೊಂಡ ಬಳಿಕವೂ ಸಮಾಜದ ಸ್ವಾಸ್ಥ್ಯ ಕದಡಲು ಯತ್ನಿಸುತ್ತಿದ್ದ ಪುನೀತ್ ಕೆರೆಹಳ್ಳಿಯ ಬಗ್ಗೆ ಜಾಗೃತರಾಗಿರುವಂತೆ ಸಾಮಾಜಿಕ ಕಳಕಳಿಯಿಂದ ಮಾಧ್ಯಮ ವರದಿಯನ್ನು ಫೇಸ್ ಬುಕ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದೆ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ದಿನಾಂಕ 17-10-2023 ರಂದು ಪುನೀತ್ ಕೆರೆಹಳ್ಳಿ, ನನ್ನ ಮತ್ತು ನನ್ನ ಪತ್ನಿ ಮಕ್ಕಳ ವಿರುದ್ಧ ನಿಂದನಾತ್ಮಕ ಮಾತುಗಳನ್ನಾಡಿದ್ದಾನೆ. ನನ್ನ ಪತ್ನಿ ,ಮಕ್ಕಳು ತಲೆ ಎತ್ತಿ ನಡೆಯಂದಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪುನೀತ್ ಬಂಧನದ ಬಳಿಕ ಮಾತನಾಡಿದ ಹರೀಶ್ ಭೈರಪ್ಪ ಅವರು, ”ಕೊನೆಗೂ ನನ್ನ ದೂರಿನ ಮೇರೆಗೆ ಪುನೀತ್ ಕೆರೆಹಳ್ಳಿ ಎನ್ನುವ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವ್ಯಕ್ತಿ ಅರೆಸ್ಟ್ ಆಗಿದ್ದಾನೆ. ನನ್ನ ಹಾಗೂ ನನ್ನ ಕುಟುಂಬದ ಮೇಲೆ ವೈಯಕ್ತಿಕ ದಾಳಿಗೆ ಇಳಿದು ತನ್ನ ಹೀನ ಮನಸ್ಥಿತಿಯನ್ನು ಪ್ರದರ್ಶನ ಮಾಡಿದ, ಸಂಘ ಪರಿವಾರದ ಮುಖಂಡ ಎಂದು ಹೇಳಿಕೊಳ್ಳುವ ವಿಕೃತ ಮನಸ್ಸಿನ ಹಿಂದೂ ಮುಖವಾಡದ ಕೊಲೆ ಆರೋಪಿ ಹಾಗೂ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಆರೋಪಿ ಸಮಾಜಘಾತಕ ಪುನೀತ್ ಕೆರೆಹಳ್ಳಿಯನ್ನು ನೆನ್ನೆಯಿಂದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದರು. ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಕೇಳಿದರು. ಪೊಲೀಸರ ಬೇಡಿಕೆ ಪುರಸ್ಕರಿಸಿದ ನ್ಯಾಯಾಧೀಶರ ಪುನೀತ್ ಕೆರೆಹಳ್ಳಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.

”ಇದು ಹೋರಾಟಗಾರರ ಕುಟುಂಬವನ್ನ ಟಾರ್ಗೆಟ್ ಮಾಡುವ ವಿಕೃತ ಮನಸ್ಸಿನ ಹಿಂದೂ ಹೋರಾಟಗಾರರಿಗೆ ಪಾಠವಾಗಬೇಕು. ನಾನು ಹೋರಾಟದ ಜೀವನದಲ್ಲಿ ಎಲ್ಲಾ ಅವಮಾನಗಳನ್ನು ಟೀಕೆಗಳನ್ನು ಅನುಭವಿಸಿದ್ದೇನೆ. ಇನ್ನು ಮುಂದೆಯೂ ಅನುಭವಿಸಲು ತಯಾರಿದ್ದೇನೆ. ಯಾಕೆಂದರೆ ಒಂದು ಸಿದ್ದಾಂತಕ್ಕೆ ಬದ್ಧನಾಗಿರುವ ನಾನು ಎಲ್ಲರಿಗೂ ಒಳ್ಳೆಯವನಾಗಲು ಸಾಧ್ಯವಿಲ್ಲ. ಬಲಪಂಥೀಯರು ನನ್ನನ್ನು ವಿರೋಧಿಸುತ್ತಾರೆ ಎಂದರೆ ನಾನು ಬಾಬಾ ಸಾಹೇಬರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇನೆ ಎಂದರ್ಥ” ಎಂದು ಹೇಳಿದ್ದಾರೆ.

”ನನಗೆ ಬಂದ ಮಾಹಿತಿ ಪ್ರಕಾರ ಬಿಜೆಪಿಯ ಒಂದಷ್ಟು ಮುಖಂಡರು ಹಾಗೂ ಹಿಂದೂ ಸಂಘಟನೆಗಳ ಒಂದಷ್ಟು ಮುಖಂಡರು ನನ್ನ ವಿರುದ್ಧ ಬರೆದಿರುವ ಆ ಅಸಹ್ಯಕರವಾದ ಭಾಷೆಯನ್ನು ಯಾರು ಬೆಂಬಲಿಸಿಲ್ಲ. ಈ ವಿಚಾರವಾಗಿ ಇವನ ಜೊತೆ ನಾವು ನಿಲ್ಲಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂಬ ಮಾಹಿತಿ ನನಗಿದೆ. ಈ ರೀತಿಯಾದ ಒಂದು ನೈತಿಕತೆಯ ತೀರ್ಮಾನ ತೆಗೆದುಕೊಂಡಿದ್ದರೆ ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ” ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಬಂಧನಕ್ಕೂ ಮುನ್ನ ಪುನೀತ್ ಕೆರೆಹಳ್ಳಿ ಬಂಧನಕ್ಕೂ ಮುನ್ನ ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದನು. ಅದರಲ್ಲಿ ತನಗೆ ಈ ಬಾರಿ ಜಾಮೀನು ಬೇಡ, ನಾನು ಜೈಲಿನಲ್ಲಿಯೇ ಇರುತ್ತೇನೆ ಎಂದು ಹೇಳಿದ್ದ ಹೇಳಿಕೆ ಸಾಕಷ್ಟು ವೈರಲ್ ಆಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!