Thursday, September 19, 2024

ಪ್ರಾಯೋಗಿಕ ಆವೃತ್ತಿ

ಒಂದೇ ಕಾಮಗಾರಿಗೆ ಎರಡು ಬಾರಿ ಭೂಮಿಪೂಜೆ: ಶಾಸಕರ ವಿರುದ್ಧ ಅಸಮಾಧಾನ

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅಂದಿನ ಶಾಸಕ ಡಿ.ಸಿ. ತಮ್ಮಣ್ಣ ಅವರು ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದ್ದ ಕಾಮಗಾರಿ ಈಗ ಶಾಸಕ ಕೆ.ಎಂ. ಉದಯ್ ಅವರು 2ನೇ ಬಾರಿಗೆ ಭೂಮಿ ಪೂಜೆ ನೆರವೇರಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿ, ಜಾ.ದಳ ಕಾರ್ಯಕರ್ತರಿಂದ ಅಸಮಾಧಾನ ವ್ಯಕ್ತವಾಗಿದೆ.

ಈ ಸಂಬಂಧವಾಗಿ ಪತ್ರಿಕಾ ಹೇಳಿಕೆ ನೀಡಿರುವ ದೊಡ್ಡರಸಿನಕೆರೆ ಗ್ರಾಪಂ ಅಧ್ಯಕ್ಷ ಮಂಚೇಗೌಡ, ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ತಮ್ಮ ಅಧಿಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ ಮಟ್ಟದಲ್ಲಿ ಹೋರಾಟ ನಡೆಸಿ ಅನುದಾನ ಬಿಡುಗಡೆ ಮಾಡಿಸಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಆದರೆ, ಶಾಸಕ ಕೆ.ಎಂ. ಉದಯ್ ಅವರು ಮತ್ತದೇ ಕಾಮಗಾರಿಗಳಿಗೆ ಗುರುವಾರದಂದು ಗುದ್ದಲಿ ಪೂಜೆ ಮಾಡಿದ್ದಾರೆ. ಆದರೆ ತಮ್ಮಣ್ಣ ಅವರ ಅವಧಿಯಲ್ಲೇ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮತ್ತೆ ಭೂಮಿ ಪೂಜೆ ಮಾಡುತ್ತಿರುವುದು ಏಕೆ ?  ಎಂದು ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದರೂ ಭೂಮಿ ಪೂಜೆ ಮಾಡಿದ್ದಾರೆ ಎಂದು  ಕಿಡಿಕಾರಿದ್ದಾರೆ.

ಎಂಜಿಎಂ ರಸ್ತೆಯಿಂದ ಸುಣ್ಣದದೊಡ್ಡಿ ಗ್ರಾಮಕ್ಕೆ ತೆರಳುವ ರಸ್ತೆ ಅಭಿವೃದ್ಧಿ, ಬೊಪ್ಪಸಮುದ್ರ ಗ್ರಾಮದಿಂದ ಸುಣ್ಣದದೊಡ್ಡಿ ರಸ್ತೆ, ಮೆಣಸಗೆರೆ-ಬೊಪ್ಪಸಮುದ್ರ, ಚಿಕ್ಕಮರಿಗೌಡ ನಗರದಿಂದ ಹೆಬ್ಬಾಳ ಚನ್ನಯ್ಯ ನಾಲೆ ಮೂಲಕ ಗೌಡಯ್ಯನದೊಡ್ಡಿ ಗ್ರಾಮಕ್ಕೆ ಹೋಗುವ ರಸ್ತೆ, ಹೆಬ್ಬಾಳ ಚನ್ನಯ್ಯ ನಾಲೆಯ 3ನೇ ವಿತರಣಾ ನಾಲೆಯ ಅಭಿವೃದ್ಧಿ ಕಾಮಗಾರಿಗಳಿಗೆ 4.25 ಕೋಟಿ ರೂ.ಗಳಲ್ಲಿ ಡಿ.ಸಿ.ತಮ್ಮಣ್ಣ ಅವರು ಭೂಮಿ ಪೂಜೆ ನೆರವೇರಿಸಿದ್ದರು. ಆದರೆ, ಮತ್ತೆ ಅದೇ ಕಾಮಗಾರಿಗೆ ಕೆ.ಎಂ. ಉದಯ್ ಅವರು ಚಾಲನೆ ನೀಡಿರುವುದಾದರೂ ಏಕೆ ಎಂದು ಪ್ರಶ್ನಿಸಿದ್ದಾರೆ.

ಸಿ.ಎ.ಕೆರೆ ಹೋಬಳಿ ಭಾಗದಲ್ಲಿ ಡಿ.ಸಿ.ತಮ್ಮಣ್ಣ ಅವರು ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿದ್ದಾರೆ. ಆದರೂ ಸಹ ಇಂದಿನ ಶಾಸಕ ಕೆ.ಎಂ.ಉದಯ್ ಅವರು ಗುದ್ದಲಿ ಪೂಜೆ ಮಾಡಿರುವುದು ಅನಾಗರಿಕತೆಯನ್ನು ಎತ್ತಿ ತೋರಿಸುತ್ತಿದೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆ ತರುವಂತಹ ವಿಚಾರವಾಗಿದೆ, ಅವರು ಸರ್ಕಾರದ ಮಟ್ಟದಲ್ಲಿ ಅನುದಾನ ತಂದು ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಿ. ಅದನ್ನು ನಾವು ಸ್ವಾಗತಿಸುತ್ತೇವೆ. ಅದನ್ನು ಬಿಟ್ಟು ಈ ರೀತಿ ಹಿಂದೆ ಚಾಲನೆ ನೀಡಿರುವ ಕಾಮಗಾರಿಗಳಿಗೆ ಮತ್ತೆ ಚಾಲನೆ ನೀಡುವುದು ಅರ್ಥವಿಲ್ಲವೆಂದು ಜೆಡಿಎಸ್ ಮದ್ದೂರು ತಾಲ್ಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತೀನಗರದ ಸುತ್ತಮುತ್ತಲ ಗ್ರಾಮಗಳಲ್ಲಿ 4.25 ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಈ ಹಿಂದೆಯೇ ನಾನು ಸರ್ಕಾರದಿಂದ ಹಣ ಮಂಜೂರು ಮಾಡಿಸಿ ಭೂಮಿಪೂಜೆಯನ್ನು ಸಹ ನೆರವೇರಿಸಿದ್ದೆ. ಆದರೆ ಮತ್ತೆ ಅದೇ ಕಾಮಗಾರಿಗಳಿಗೆ ಇಂದಿನ ಶಾಸಕರು ಭೂಮಿ ಪೂಜೆ ನೆರವೇರಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ನನ್ನ ಅವಧಿಯಲ್ಲಿ ಅನೇಕ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಕೆಲವು ಕಟ್ಟಡ ಕಾಮಗಾರಿಗಳು ಉದ್ಘಾಟನೆಗೊಳ್ಳಬೇಕಿವೆ. ಇದೇ ರೀತಿ ಪ್ರಚಾರ ಬೇಕಿದ್ದರೆ ಅವರು ಒಂದು ವರ್ಷಪೂರ್ತಿ ನನ್ನ ಕಾಮಗಾರಿಗಳಿಗೆ  ಚಾಲನೆ ನೀಡಬಹುದೆಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!