Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಾವೇರಿ ಹೋರಾಟಕ್ಕೆ ನಿವೃತ್ತ ಐಜಿಪಿ ಸೇರಿದಂತೆ ವಿದ್ಯಾರ್ಥಿಗಳ ಬೆಂಬಲ

ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರ ಹಾಗೂ ಕೇಂದ್ರ -ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಿರಂತರ ಧರಣಿ 68ಕ್ಕೆ ಕಾಲಿಟ್ಟಿದ್ದು, ಶನಿವಾರ ನಿವೃತ್ತ ಐಜಿಪಿ ಸಿ.ಚಂದ್ರಶೇಖರ್, ಮಂಡ್ಯ ವಿವಿಯ ವಿದ್ಯಾರ್ಥಿಗಳು, ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಹಳೆಯ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಂಘ ಬೆಂಬಲ ಸೂಚಿಸಿದವು.

ಮಂಡ್ಯ ವಿದ್ಯಾಲಯದ ಪದವಿ ವಿದ್ಯಾರ್ಥಿಗಳು ಕಾಲೇಜು ಆವರಣದಿಂದ ಮೆರವಣಿಗೆ ಹೊರಟು ಧರಣಿ ಸ್ಥಳಕ್ಕೆ ಆಗಮಿಸಿ ನಿರಂತರ ಧರಣಿಯಲ್ಲಿ ಭಾಗಿಯಾದರು.

ನಿವೃತ್ತ ಐಜಿಪಿ ಸಿ. ಚಂದ್ರಶೇಖರ್ ಮಾತನಾಡಿ, ದೇಶದಲ್ಲಿ ಒಕ್ಕೂಟ ಸರ್ಕಾರ ಅಸ್ತಿತ್ವದಲ್ಲಿದೆ, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನದತ್ತ ಕಾನೂನು ಜಾರಿಯಲ್ಲಿವೆ. ಹಾಗಾಗಿ ಕಾವೇರಿ ಸಮಸ್ಯೆಗೆ ಕಾನೂನಾತ್ಮಕ ಪರಿಹಾರ ಪಡೆಯುವುದು ಒಳ್ಳೆಯ ಮಾರ್ಗ ಎಂದರು.

ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆಗೆ ಭಾವುಕತೆ, ಆವೇಶ, ಕೋಪ, ಬೇಸರ ಪರಿಹಾರವಾಗದು, ಕಾನೂನು ಪರಿಹಾರವೇ ಅಂತಿಮ ಎಂದ ಅವರು ನದಿ ಪ್ರಕೃತಿದತ್ತ ವರ ಎಂದರಿತು ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಸದುದ್ದೇಶದಿಂದ ನ್ಯಾಯಾಲಯದ ಹೊರಗೆ ಮಾತುಕತೆ ಮೂಲಕ ಬಗೆಹರಿಸಲು ಸಾಧ್ಯವಿದೆ, ಇದಕ್ಕೆ ಕಾವೇರಿ ಕುಟುಂಬದಂತಹ ಆಲೋಚನೆ ಸೂಕ್ತ ಮಾರ್ಗವಾಗಿದ್ದು ಆ ಮೂಲಕ ಸಂಕಷ್ಟ ಸೂತ್ರ ಸಾಧ್ಯವಾಗಬಹುದು ಎಂದು ಮತ್ತೊಂದು ಸಲಹೆ ನೀಡಿದರು.

ಮಂಡ್ಯ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಹಳೆಯ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ನಿವೃತ್ತ ಇಂಜಿನಿಯರ್ ಗಳು ಹೋರಾಟದಲ್ಲಿ ಭಾಗವಹಿಸಿದ್ದರು. ನಿವೃತ್ತ ಮುಖ್ಯ ಕಾರ್ಯಪಾಲಕ ಇಂಜಿನಿಯರ್ ವಿಜಯಕುಮಾರ್, ದೇವರಾಜು, ಕೆಂಪೇಗೌಡ, ಎಂ.ಬಿ ರಾಜು, ಎಂ.ಕೆ.ನಂಜಯ್ಯ, ಚಂದ್ರಶೇಖರ್, ಸತ್ಯನಾರಾಯಣ, ಎಸ್ ಎ ಮಹೇಂದ್ರ, ಪಾಂಡು, ಪ್ರಕಾಶ್, ಪುಟ್ಟರಾಜು, ಸುರೇಶ್ ಬಾಬು ಭಾಗವಹಿಸಿದ್ದರು.

ರೈತ ಹಿತರಕ್ಷಣಾ ಸಮಿತಿಯ ಸುನಂದಾ ಜಯರಾಂ, ಕೆ ಬೋರಯ್ಯ, ಮಲ್ಲನಾಯಕನ ಕಟ್ಟೆ ಬೋರೇಗೌಡ, ಜಿ.ಬಿ ಶಿವಕುಮಾರ್, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕೃಷ್ಣಪ್ರಕಾಶ್, ಕನ್ನಡ ಸೇನೆ ಮಂಜುನಾಥ್, ನಾರಾಯಣ, ಅಂಬುಜಮ್ಮ ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!