Friday, September 20, 2024

ಪ್ರಾಯೋಗಿಕ ಆವೃತ್ತಿ

ಮಹಾಧರಣಿ| ದುಡಿಯುವ ಜನರ ಸಮಸ್ಯೆ ಆಲಿಸಲು ಸಿಎಂ ಸಭೆ: ಸಚಿವ ಕೃಷ್ಣಭೈರೇಗೌಡ

ಧರಣಿನಿರತರ ಹಕ್ಕೊತ್ತಾಯಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚಿಸಲು ಒಪ್ಪಿದ್ದಾರೆ. ಶೀಘ್ರದಲ್ಲೇ ಹೋರಾಟಗಾರರೊಂದಿಗೆ ಸಭೆ ನಡೆಸಲು ದಿನಾಂಕ ನಿಗದಿ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ದುಡಿಯುವ ಜನರ ಮಹಾಧರಣಿ ಸ್ಥಳಕ್ಕೆ ಬಂದು ಹೋರಾಟಗಾರರ ಹಕ್ಕೊತ್ತಾಯಗಳನ್ನು ಆಲಿಸಿ, ಅವರು ಮಾತನಾಡಿದರು. “ಮುಖ್ಯಮಂತ್ರಿಗಳು ಜನತಾ ದರ್ಶನ ಕಾರ್ಯಕ್ರಮದಲ್ಲಿದ್ದಾರೆ. ಇಲ್ಲಿನ ಹೋರಾಟದ ಬಗ್ಗೆ ಅವರಿಗೆ ಅರಿವಿದೆ. ಅವರ ಪರವಾಗಿ ನನ್ನನ್ನು ಕಳಿಸಿದ್ದಾರೆ. ಹೋರಾಟಗಾರರು ಮುಂದಿಟ್ಟಿರುವ ಎಲ್ಲ ಹಕ್ಕೊತ್ತಾಯಗಳ ಬಗ್ಗೆ ಚರ್ಚಿಸಲು ಸಮಯ ಕೊಡುತ್ತೇನೆಂದು ಹೇಳಿದ್ದಾರೆ” ಎಂದರು.

“ಹೋರಾಟಗಾರರು 18 ಹಕ್ಕೊತ್ತಾಯಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಇವುಗಳಲ್ಲಿ ಮೂರು ಕಂದಾಯ ಇಲಾಖೆಗೆ ಸಂಬಂಧಿಸಿದ ವಿಚಾರಗಳೂ ಇವೆ. ಮಂಗಳವಾರ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಸಭೆ ಇದೆ. ಅಲ್ಲಿ, ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಯ ನಿಗದಿ ಮಾಡಿಸಲು ನಾನು ಒತ್ತುಕೊಡುತ್ತೇನೆ. ಶೀಘ್ರದಲ್ಲೇ ಹೋರಾಟಗಾರರೊಂದಿಗಿನ ಸಭೆಯನ್ನು ನಿಗದಿ ಮಾಡಿಸುತ್ತೇನೆ” ಎಂದು ಸಚಿವರು ಹೇಳಿದ್ದಾರೆ.

“ಕಾರ್ಮಿಕರು, ಭೂಮಿ ರಹಿತರು ಸೇರಿದಂತೆ ನಾನಾ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಬರ ಪರಿಹಾರಕ್ಕೆ ಅನುದಾನ ಕೇಂದ್ರದಿಂದ ಬಂದಿಲ್ಲ. ಅದರ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳು ದೆಹಲಿಗೆ ತೆರಳಲಿದ್ದಾರೆ. ಡಿಸೆಂಬರ್ 4ರಿಂದ ಅಧಿವೇಶನವೂ ಇದೆ. ಈ ಎಲ್ಲದರ ನಡುವೆ ಸಮಯವನ್ನು ನೋಡಿಕೊಂಡು, ಸಭೆ ನಿಗದಿ ಮಾಡಿಸುತ್ತೇನೆ. ಎಲ್ಲರ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ” ಎಂದಿದ್ದಾರೆ.

“ಹೋರಾಟಗಾರರು ಮುಂದಿಟ್ಟಿರುವ ಎಲ್ಲ ವಿಷಯಗಳು ಶ್ರಮಿಕರು, ಬಡವರ ಪರವಾಗಿವೆ. ಅವುಗಳೆಲ್ಲವನ್ನೂ ನಾವು ಈಡೇರಿಸಲು ಸಾಧ್ಯವಾಗುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ಬಡವರು, ರೈತರು, ಕಾರ್ಮಿಕರ ಪರವಾಗಿ ನಡೆಯುತ್ತಿರುವ ಹೋರಾಟ ಸ್ವಾಗತಾರ್ಹ. ಸಾಮಾನ್ಯ ಜನರ ವಿಷಯಗಳು ಚರ್ಚೆಯಾಗಬೇಕು. ಜೀವನಾಧಾರ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕು. ಅದಕ್ಕಾಗಿ, ಎಲ್ಲ ಹಕ್ಕೊತ್ತಾಯಗಳ ಬಗ್ಗೆ ಖಂಡಿತವಾಗಿಯೂ ಚರ್ಚಿಸುತ್ತೇನೆ. ಸಭೆ ಕರೆಯುತ್ತೇವೆ” ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!