Thursday, September 19, 2024

ಪ್ರಾಯೋಗಿಕ ಆವೃತ್ತಿ

ಹೆಣ್ಣುಭ್ರೂಣ ಹತ್ಯೆ ಪ್ರಕರಣದ ಹಿಂದೆ ಸ್ಥಳೀಯ ಆಯುರ್ವೇದಿಕ್ ವೈದ್ಯರ ಕೈವಾಡ ?

ಮಂಡ್ಯ ತಾಲೂಕಿನ ಹಾಡ್ಯ- ಹುಳ್ಳೇನಹಳ್ಳಿ ನಡುವೆ ಇರುವ ಆಲೆಮನೆಯಲ್ಲಿ ಅಮಾನುಷವಾಗಿ ನಡೆದ ಸಾವಿರಾರು ಹೆಣ್ಣು ಭ್ರೂಣಗಳ ಹತ್ಯೆ ಪ್ರಕರಣದ ಹಿಂದೆ ಸ್ಥಳೀಯ ಆಯುರ್ವೇದಿಕ್ ವೈದ್ಯರ ಕೈವಾಡವಿದೆ ಎಂದು ಮಂಡ್ಯದ ಹಲವು ಸ್ವಯಂ ಸೇವಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ.

ಮಂಡ್ಯ ಜಿಲ್ಲೆಯ ವಿವಿಧ ಭಾಗದಲ್ಲಿ ಆರೋಗ್ಯ ಸಂಬಂಧಿತ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾಗ ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದ್ದರು, ಈ ಬಗ್ಗೆ ನಾವು ಕಳೆದ 2 ವರ್ಷಗಳ ಹಿಂದೆಯೇ ಅಂದಿನ ವೈದ್ಯಕೀಯ ಸಚಿವ ಡಾ.ಸುಧಾಕರ್ ಸೇರಿದಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ದೂರು ನೀಡಿದ್ದರೂ, ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದು ಸಾವಿರಾರು ಹೆಣ್ಣುಭ್ರೂಣ ಹತ್ಯೆಗಳು ನಡೆದು ಹೋಗಿವೆ ಎಂದು ವಿಮೋಚನಾ ಸ್ವಯಂ ಸೇವಾ ಸಂಸ್ಥೆಯ ಜನಾರ್ಧನ್ ನುಡಿಕರ್ನಾಟಕ.ಕಾಂ ಗೆ ತಿಳಿಸಿದ್ದಾರೆ.

ಆಯುರ್ವೇದಿಕ್ ವೈದ್ಯರು ಭಾಗಿ

ಹೆಣ್ಣುಭ್ರೂಣ ಹತ್ಯೆ ಪ್ರಕರಣದಲ್ಲಿ ಮೇಲ್ನೋಟಕ್ಕೆ ಸಿಕ್ಕಿಬಿದ್ದಿರುವ ಎಲ್ಲ ವೈದ್ಯರು ಆಯುರ್ವೇದಿಕ್ ಹಿನ್ನೆಲೆಯವರು, ಹಾಗಾಗಿ ಈ ಪ್ರಕರಣದಲ್ಲಿ ಮಂಡ್ಯ ತಾಲ್ಲೂಕಿನ ಶಿವಳ್ಳಿಯ ಆಯುರ್ವೇದಿಕ್ ವೈದ್ಯರೊಬ್ಬರು ಭಾಗಿಯಾಗಿರುವ ಬಗ್ಗೆ ತಮಗೆ ಸ್ಥಳೀಯ ಜನರಿಂದ ಮಾಹಿತಿ ಲಭ್ಯವಾಗಿದೆ, ಈ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಿದ್ದಲ್ಲಿ, ಇಂತಹ ಹಲವು ಮಾಹಿತಿಗಳು ಹೊರ ಬೀಳಲಿವೆ ಎಂದು ಜರ್ನಾಧನ್ ವಿವರಿಸಿದರು.

ಡಿಎಚ್ಓಗೆ ದೂರು

ಕಳೆದ 2 ವರ್ಷಗಳ ಹಿಂದೆಯೇ ಹಾಡ್ಯ-ಹುಳ್ಳೇನಹಳ್ಳಿ ಭಾಗದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಬಗ್ಗೆ ಜನಸಾಮಾನ್ಯರಿಂದ ಮಾಹಿತಿ ಸಿಕ್ಕಿತ್ತು, ಇದನ್ನು ಮಂಡ್ಯ ಡಿಎಚ್ಓ ಅವರ ಗಮನಕ್ಕೆ ಮೌಖಿಕವಾಗಿ ತಂದರೂ ಅವರು ಯಾವ ಕ್ರಮವನ್ನು ಕೈಗೊಳ್ಳಲಿಲ್ಲ, ಆದರೆ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಪ್ರಕರಣದ ಬೆನ್ನು ಹತ್ತಿದ್ದ ನಂತರ ಡಿಎಚ್ಓ ಸೇರಿದಂತೆ ಎಲ್ಲಾ ಅಧಿಕಾರಿಗಳು ನಾಮಕಾವಸ್ಥೆಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸುತ್ತಿದ್ದಾರೆ. ಆದರೆ ಇಡೀ ಪ್ರಕರಣದ ತನಿಖೆಯನ್ನು ಸರಿಯಾದ ರೀತಿಯಲ್ಲಿ ನಡೆಸಬೇಕಾದ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ, ಹಾಗೇ ಮಾಡಿದರೆ ಇದರಲ್ಲಿ ಭಾಗಿಯಾಗಿರುವವರ ಮುಖವಾಡ ಬಯಲಾಗಲಿದೆ ಎಂದು ಜನಾರ್ಧನ್ ತಿಳಿಸಿದ್ದಾರೆ.

ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (RCH) ಪೋರ್ಟಲ್ ಅಧ್ಯಕ್ಷರ ನಾಮಕಾವಸ್ಥೆ ಭೇಟಿ

ಭ್ರೂಣ ಹತ್ಯೆ ನಡೆಯುತ್ತಿದ್ದ ಹಾಡ್ಯ- ಹುಳ್ಳೇನಹಳ್ಳಿ ಅಲೆಮನೆಗೆ ಬುಧವಾರ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (RCH) ಪೋರ್ಟಲ್ ಅಧ್ಯಕ್ಷ ಡಾ.ಶ್ರೀನಿವಾಸ್ ಸೇರಿದಂತೆ ಅವರ ತಂಡ ನಾಮಕಾವಸ್ಥೆಗೆ ಭೇಟಿ ಪರಿಶೀಲನೆ ನಡೆಸಿತು, ಈ ತಂಡ ಸ್ಥಳೀಯ ಎನ್.ಜಿ.ಓ ಹಾಗೂ ಸಂಘ ಸ್ಥಂಸ್ಥೆಗಳ ಮುಖ್ಯಸ್ಥರ ಬಳಿ ಇದ್ದ  ಮಾಹಿತಿಯನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಅತ್ಯಾಚಾರ ಆಂದೋಲನ ವಿರೋಧಿ ಸಮಿತಿ ಮುಖ್ಯಸ್ಥೆ ಪೂರ್ಣಿಮಾ ದೂರಿದ್ದಾರೆ.

ಹೆಣ್ಣು ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ನೀಡುವ ಉದ್ದೇಶದಿಂದ ನಾವು ಸ್ಥಳಕ್ಕೆ ತೆರಳಿದ್ದೇವು, ಆದರೆ ಡಾ.ಶ್ರೀನಿವಾಸ್ ನೇತೃತ್ವದ ತಂಡಕ್ಕೆ, ಯಾವ ಸ್ವಯಂ ಸೇವಾ ಸಂಘಟನೆಯ ಮುಖ್ಯಸ್ಥರಿಂದ ಮಾಹಿತಿ ಪಡೆಯುವ ಇಚ್ಚಾಶಕ್ತಿಯಾಗಲಿ, ತಾಳ್ಮೆಯಾಗಲಿ ಇರಲಿಲ್ಲ, ಅವರು ನಾಮಾಕಾಸ್ಥೆಗೆ ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಕಿಡಿಕಾರಿದರು.

ಹೆಣ್ಣುಭ್ರೂಣ ಹತ್ಯೆ ಪ್ರಕರಣದ ಬಗ್ಗೆ 2 ವರ್ಷಗಳ ಹಿಂದೆಯೇ ಡಿಎಚ್ಓ ಗಮನಕ್ಕೆ ತಂದಿದ್ದೇವು ಎಂದು ತಿಳಿಸಲು ಹೋರಾಟಾಗ ಈ ಬಗ್ಗೆ ಮೇಲಿನ ಅಧಿಕಾರಿಗಳ ಗಮನಕ್ಕೆ ಏಕೆ ತರಲಿಲ್ಲ ಎಂದು ಅವರು ತಮ್ಮನ್ನೇ ಮರು ಪ್ರಶ್ನೆ ಮಾಡಿದರು, ಅಲ್ಲದೇ ಉಡಾಫೆಯಿಂದ ಮಾತನಾಡಿದರು, ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯವದಾನವಾಗಲಿ, ಸಹನೆಯಾಗಲಿ ಅವರಲ್ಲಿ ಇರಲಿಲ್ಲ ಎಂದು ಪೂರ್ಣಿಮಾ ದೂರಿದ್ದಾರೆ.

ಈ ಸಂದರ್ಭದಲ್ಲಿ ಡಿಎಚ್ಓ ಡಾ.ಮೋಹನ್, ಟಿಎಚ್ಓ ಜವರೇಗೌಡ, ಡಾ.ಸೋಮಶೇಖರ್, ಡಾ.ಆಶಾಲತಾ, ಅತ್ಯಾಚಾರ ವಿರೋಧಿ ಆಂದೋಲನದ  ಶಿಲ್ಪ, ವಿಮೋಚನಾ ಸಂಸ್ಥೆಯ ಇಂಪನಾ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!