ಇತ್ತೀಚೆಗೆ ಮಂಡ್ಯ ತಾಲ್ಲೂಕಿನ ದುದ್ದ ಹೋಬಳಿ ಹಾಡ್ಯ ಗ್ರಾಮದಲ್ಲಿ ಕಾನೂನಿನ ಕಣ್ಣಿಗೆ ಮಣ್ಣೆರೆಚಿ, ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಪರೀಕ್ಷೆ ನಡೆಸಿ, ಬೇರೆ ಬೇರೆ ಸ್ಥಳಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡಿರುವ ಘಟನೆಯಿಂದ ಎಚ್ಚೆತ್ತಿರುವ ಮಂಡ್ಯ ಜಿಲ್ಲಾಡಳಿತವು ಕೊನೆಗೂ ತಾಲ್ಲೂಕು, ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಮಟ್ಟದಲ್ಲಿ ಜಾಗೃತ ಸಮಿತಿ ರಚಿಸಿದೆ.
ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಣ್ಣುಭ್ರೂಣ ಪತ್ತೆ-ಹತ್ಯೆ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿ ಕೆಲವು ದುಷ್ಟರು ಸ್ಥಳೀಯರ ಸಹಕಾರ ಪಡೆದು, ಮುಚ್ಚಿಹೋಗಿರುವ ಅಲೆಮನೆಯಲ್ಲಿ ರಹಸ್ಯವಾಗಿ ಗರ್ಭಿಣಿಯರನ್ನು ಕರೆತಂದು ಭ್ರೂಣ ಲಿಂಗ ಪತ್ತೆ ಹಚ್ಚಿ, ಹೆಣ್ಣು ಭ್ರೂಣ ಹತ್ಯೆಗೆ ಕಾರಣಕರ್ತರಾಗಿರುತ್ತಾರೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಇದು ಜಿಲ್ಲಾಡಳಿತಕ್ಕೆ ಮುಜುಗರ ಉಂಟು ಮಾಡುವಂತಹ ವಿಷಯವಾಗಿದೆ. ಆದ್ದರಿಂದ ಹೆಣ್ಣು ಭ್ರೂಣಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆಯಂತಹ ಪ್ರಕರಣಗಳು ನಡೆಯದಂತೆ ತೀವ್ರ ನಿಗಾ ವಹಿಸಲು ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತ ದಳ ರಚಿಸಿ ಜಿಲ್ಲಾಧಿಕಾರಿ ಡಾ. ಕುಮಾರ ಆದೇಶ ಹೊರಡಿಸಿದ್ದಾರೆ.
ತಾಲೂಕು ಮಟ್ಟದ ಜಾಗೃತ ದಳ
ಈ ದಳದಲ್ಲಿ ತಹಸಶೀಲ್ದಾರ್ ಅಧ್ಯಕ್ಷರಾಗಿ, ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಸಹ ಅಧ್ಯಕ್ಷರಾಗಿ, ಶಿಶು ಅಭಿವೃದ್ಧಿ ಅಧಿಕಾರಿ, ಆರಕ್ಷಕ ವೃತ್ತ ನಿರೀಕ್ಷಕರು, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸದಸ್ಯರಾಗಿ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಗ್ರಾಮ ಪಂಚಾಯಿತಿ ಮಟ್ಟದ ಜಾಗೃತ ದಳ
ಈ ದಳದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಧ್ಯಕ್ಷರಾಗಿ, ಉಪ ತಹಶೀಲ್ದಾರ್ ಸಹ ಅಧ್ಯಕ್ಷರಾಗಿ, ರಾಜಸ್ವ ನಿರೀಕ್ಷಕರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಸ್ಥಳೀಯ ಶಾಲಾ ಮುಖ್ಯೋಪಾಧ್ಯರು, ಗ್ರಾಮ ಗಸ್ತು ಸಿಬ್ಬಂದಿ (ಪೊಲೀಸ್ ಇಲಾಖೆ), ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸದಸ್ಯರಾಗಿ ಹಾಗೂ ಸಮುದಾಯ ಆರೋಗ್ಯ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಗ್ರಾಮ ಮಟ್ಟದ ಸಮಿತಿ
ಈ ಸಮಿತಿಯಲ್ಲಿ ರಾಜಸ್ವ ನಿರೀಕ್ಷಕರು ಅಧ್ಯಕ್ಷರಾಗಿ, ಗ್ರಾಮ ಆಡಳಿತ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಗಸ್ತು ಸಿಬ್ಬಂದಿ (ಪೊಲೀಸ್ ಇಲಾಖೆ) ಹಾಗೂ ಗ್ರಾಮ ಸಹಾಯಕರು ಸದಸ್ಯರುಗಳಾಗಿರುತ್ತಾರೆ.
ರಚಿಸಲಾಗಿರುವ ಸಮಿತಿ, ಜಾಗೃತ ದಳ ತಮ್ಮ ವ್ಯಾಪ್ತಿಯಲ್ಲಿ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಕಾರ್ಯಗಳು ನಡೆಯದಂತೆ ತೀವ್ರ ನಿಗಾವಹಿಸಬೇಕು.ಗ್ರಾಮ ಪಂಚಾಯತಿ ಸದಸ್ಯರ ಸಹಕಾರ ಪಡೆದು ಭ್ರೂಣ ಲಿಂಗ ಪತ್ತೆ ಅಪರಾಧವೆಂಬುದರ ಬಗ್ಗೆ ಗ್ರಾಮಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಎಂದು ಸೂಚಿಸಲಾಗಿದೆ.
ಸ್ಥಳೀಯ ಮುಖಂಡರು, ಜನ ಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ನಕಲಿ ವೈದ್ಯರು ಇರುವ ಬಗ್ಗೆ ಗೌಪ್ಯ ಸ್ಥಳಗಳಲ್ಲಿ ಅಕ್ರಮ ಮತ್ತು ಅಕ್ಷಮ್ಯ ಅಪರಾಧ ಎಸಗುತ್ತಿರುವವರನ್ನು ಪತ್ತೆ ಹಚ್ಚುವುದು. ಪಿ.ಸಿ ಮತ್ತು ಪಿ.ಎನ್ ಡಿ.ಟಿ ಕಾಯ್ದೆಯಂತೆ ರಚಿಸಿರುವ ಜಿಲ್ಲಾಮಟ್ಟದ ಸಮಿತಿಯೊಂದಿಗೆ ಸಮನ್ವಯ ಸಾಧಿಸಿ ಮಾಹಿತಿ ನೀಡುವುದು. ಪೊಲೀಸ್ ಇಲಾಖೆಯ ಸಹಕಾರ ಪಡೆಯುವುದು ಹಾಗೂ ಗುಪ್ತಚರ ದಳ ಅಧಿಕಾರಿಗಳೊಂದಿಗೆ ತಾಲ್ಲೂಕು ಮಟ್ಟದ ಸಮಿತಿ ಸಮನ್ವಯ ಸಾಧಿಸುವುದು. ಆಸ್ಪತ್ರೆ, ಕ್ಲಿನಿಕ್, ಲ್ಯಾಬ್ ಮತ್ತು ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಆಗಿಂದಾಗ್ಗೆ ಭೇಟಿ ಕೊಟ್ಟು, ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಎಂದು ತಿಳಿಸಲಾಗಿದೆ.
ಸಂಶಯ ಉಂಟಾದಲ್ಲಿ ಪರಿಶೀಲನೆ
ಭ್ರೂಣ ಲಿಂಗ ಪತ್ತೆಯಂತಹ ಘಟನೆಗಳ ಬಗ್ಗೆ ಸಂಶಯ ಉಂಟಾದಲ್ಲಿ ಕೂಲಂಕಷವಾಗಿ ಪರಿಶೀಲಿಸಿ ವರದಿ ಮಾಡುವುದು. ಗ್ರಾಮ ಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಗ್ರಾಮದ ಹೆಣ್ಣು ಮಕ್ಕಳ ರಕ್ಷಣೆ ದೃಷ್ಟಿಯಿಂದ ಜಾಗೃತರಾಗಿ ವಿಶೇಷ ಆಸಕ್ತಿ ವಹಿಸಿ ಕೆಲಸ ನಿರ್ವಹಿಸುವುದು.
ಒಂದು ಅಥವಾ ಎರಡು ಹೆಣ್ಣುಮಕ್ಕಳಿರುವ ಪೋಷಕರೊಂದಿಗೆ ಸಮನ್ವಯ ಸಾಧಿಸಿ, ಹೆಣ್ಣು ಮತ್ತು ಗಂಡು ಈ ಸಮಾಜದಲ್ಲಿ ಸಮಾನರು ಎಂಬುದರ ಬಗ್ಗೆ ಅರಿವು ಮೂಡಿಸುವುದು.
ಪ್ರತಿ ಗ್ರಾಮದ ಗರ್ಭಿಣಿ ಮಹಿಳೆಯರ ಮಾಹಿತಿಯನ್ನು ಆರೋಗ್ಯ ಇಲಾಖೆಯ PORTAL ನಿಂದ ಪಡೆದುಕೊಂಡು ಅವರ ಸ್ಥಿತಿಗತಿ, ಚಲನ-ವಲನಗಳ ಬಗ್ಗೆ ಗಮನ ಹರಿಸುವುದು, ಸದರಿ ಮಾಹಿತಿಯನ್ನು ತಾಲ್ಲೂಕು ಆರೋಗ್ಯಾಧಿಕಾರಿಯವರು ತಂಡಗಳಿಗೆ ನೀಡುವುದು.
ವಿಶೇಷವಾಗಿ ಸ್ತ್ರೀ ಶಕ್ತಿ, ಸ್ವಸಹಾಯ ಗುಂಪುಗಳ ಮೂಲಕ ಸಭೆ ನಡೆಸಿ ಅರಿವು ಮೂಡಿಸಿ ಭ್ರೂಣ ಹತ್ಯೆ ಕೃತ್ಯಗಳ ಬಗ್ಗೆ ಅನುಮಾನಗಳಿದ್ದಲ್ಲಿ ಕೂಡಲೇ ವರದಿ ಮಾಡುವುದು.
ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ, ತೆಗೆದುಕೊಂಡ ಕ್ರಮಗಳ ಬಗ್ಗೆ ಆಯಾ ಉಪವಿಭಾಗಾಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸುವುದು.
3 ಜಾಗೃತದಳ ತಂಡದವರು ಯಾವುದೇ ಲೋಪಕ್ಕೆ ಆಸ್ಪದ ನೀಡದಂತೆ ಕಾರ್ಯನಿರ್ವಹಿಸುವುದು, ಒಂದು ವೇಳೆ ಕರ್ತವ್ಯ ನಿರ್ಲಕ್ಷ್ಯತೆ ಕಂಡುಬಂದರೆ ತಂಡದ ಸದಸ್ಯರ ವಿರುದ್ಧ ಗಂಭೀರವಾಗಿ ಪರಿಗಣಿಸಿ ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




