Saturday, May 18, 2024

ಪ್ರಾಯೋಗಿಕ ಆವೃತ್ತಿ

ನಾಳೆ ವಿಧಾನಸಭೆ ಮತಎಣಿಕೆ: ತೆಲಂಗಾಣಕ್ಕೆ ‘ಟ್ರಬಲ್ ಶೂಟರ್’ ಡಿ ಕೆ ಶಿವಕುಮಾರ್

ತೆಲಂಗಾಣ ವಿಧಾನಸಭಾ ಫಲಿತಾಂಶ ಭಾನುವಾರ ಪ್ರಕಟಗೊಳ್ಳಲಿದ್ದು, ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ ಎಂದು ‘ಎಕ್ಸಿಟ್‌ ಪೋಲ್‌’ ಸಮೀಕ್ಷೆಗಳು ತಿಳಿಸಿವೆ. ಈ ನಡುವೆ ಹ್ಯಾಟ್ರಿಕ್ ಕನಸಿನಲ್ಲಿರುವ ಬಿಆರ್​ಎಸ್​ ಪಕ್ಷಕ್ಕೆ ಮತ್ತೆ ಅಧಿಕಾರ ಸಿಗುವುದು ಅನುಮಾನ ಎನ್ನಲಾಗುತ್ತಿದ್ದರೂ, ಕೆಲವರು ಅತಂತ್ರ ಫಲಿತಾಂಶ ಬರುವ ಸಾಧ್ಯತೆಯೂ ಇದೆ ಎಂದು ವಿಶ್ಲೇಷಿಸುತ್ತಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಫಲಿತಾಂಶಕ್ಕೂ ಮುನ್ನ ಶಾಸಕರ ಕುದುರೆ ವ್ಯಾಪಾರ ನಡೆಯುವ ಅನುಮಾನಗಳು ದಟ್ಟವಾಗಿದೆ. ಒಂದು ವೇಳೆ ಕಾಂಗ್ರೆಸ್‌ಗೆ ಬಹುಮತ ಬಂದರೆ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಬೇಕಾಗಿರುವುದರಿಂದ ಕಾಂಗ್ರೆಸ್‌ನ ‘ಟಬ್ರಲ್‌ ಶೂಟರ್‌’ ಎಂದೇ ಖ್ಯಾತಿ ಗಳಿಸಿರುವ, ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ತೆಲಂಗಾಣಕ್ಕೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

‘ಸದ್ಯ ಡಿ ಕೆ ಶಿವಕುಮಾರ್ ಅವರು ಕನಕಪುರದಲ್ಲಿದ್ದು, ಸಂಜೆಯ ವೇಳೆಗೆ ಬೆಂಗಳೂರಿಗೆ ಬಂದು ಅಲ್ಲಿಂದ ವಿಮಾನದ ಮೂಲಕ ಹೈದರಾಬಾದ್‌ಗೆ ತೆರಳಲಿದ್ದಾರೆ’ ಎಂದು ಡಿಕೆ ಶಿವಕುಮಾರ್‌ ಅವರ ಆಪ್ತ ಮೂಲಗಳು ತಿಳಿಸಿದೆ.

ಸಮೀಕ್ಷೆಗಳು ಕೈ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳು ಸಿಗಬಹುದು ಎಂದು ವರದಿ ಮಾಡುತ್ತಿದ್ದಂತೆ ಕಾಂಗ್ರೆಸ್​ ಹೈ ಅಲರ್ಟ್​ ಆಗಿದ್ದು, ಫಲಿತಾಂಶ ಹೊರ ಬೀಳುತ್ತಿದ್ದಂತೆ ಗೆದ್ದ ಶಾಸಕರನ್ನು ‘ಸೇಫ್’ ಮಾಡಲು ಭಾರೀ ಪ್ಲಾನ್ ಮಾಡಿಕೊಳ್ಳುತ್ತಿದೆ. ಹಾಗಾಗಿ, ಇದರ ಜವಾಬ್ದಾರಿಯನ್ನು ಡಿ ಕೆ ಶಿವಕುಮಾರ್ ಅವರ ಹೆಗಲಿಗೆ ನೀಡಲಾಗಿದೆ ಎಂದು ಕಾಂಗ್ರೆಸ್‌ ವಲಯದಲ್ಲಿ ಚರ್ಚೆಯಾಗುತ್ತಿದೆ.

ತೆಲಂಗಾಣದಲ್ಲಿ ಫಲಿತಾಂಶ ಪ್ರಕಟವಾಗುವ ಮುನ್ನವೇ ಭಾರತ್ ರಾಷ್ಟ್ರ ಸಮಿತಿ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶನಿವಾರ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅವರು ತೆಲಂಗಾಣಕ್ಕೆ ತೆರಳಲಿದ್ದಾರೆ.

‘ಬಿಆರ್‌ಎಸ್‌ನ ಕೆ ಚಂದ್ರಶೇಖರ್‌ ರಾವ್‌ ಅವರು ನಮ್ಮ ಶಾಸಕರಿಗೆ ಬಲೆ ಬೀಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ನಮ್ಮ ಅಭ್ಯರ್ಥಿಗಳು ನಮಗೆ ಸಿಎಂ (ಕೆಸಿಆರ್) ಅವರೇ ಸಂಪರ್ಕಿಸಿದ್ದಾರೆ ಎಂದು ನಮಗೆ ತಿಳಿಸಿದ್ದಾರೆ. ರಾಜ್ಯದಲ್ಲಿ ಪಕ್ಷ ಸರಳ ಬಹುಮತವನ್ನು ಪಡೆಯುವ ವಿಶ್ವಾಸವಿದೆ’ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.

‘ಇದು ನನ್ನ ಪಕ್ಷದ ಕೆಲಸ ಹಾಗಾಗಿ ನಾನು ಅಲ್ಲಿಗೆ ಹೋಗುತ್ತಿದ್ದೇನೆ. ಕರ್ನಾಟಕ ಚುನಾವಣೆಯ ಸಮಯದಲ್ಲಿ ಇಡೀ ತೆಲಂಗಾಣ ತಂಡ ನಮ್ಮೊಂದಿಗೆ ಇತ್ತು. ಅದಕ್ಕಾಗಿಯೇ ನಾನು ಸಹ ಹೋಗುತ್ತಿದ್ದೇನೆ. ಫಲಿತಾಂಶದ ನಂತರ ಏನಾಗುತ್ತದೆ ಎಂಬುದನ್ನು ನಾವು ನೋಡುತ್ತೇವೆ. ಯಾವುದೇ ತೊಂದರೆ ಇಲ್ಲ. ಯಾವುದೇ ಬೆದರಿಕೆ ಇಲ್ಲ, ನಮಗೆ ವಿಶ್ವಾಸವಿದೆ, ನಮ್ಮ ಪಕ್ಷ ಆರಾಮವಾಗಿ ಗೆಲ್ಲುತ್ತದೆ’ ಎಂದು ಅವರು ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಚನೆ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆ ಆಗದ ನಿಟ್ಟಿನಲ್ಲಿ ಎಚ್ಚರಿಕೆ ವಹಿಸುವಂತೆ ರಾಜ್ಯ ತೆಲಂಗಾಣದ ನಾಯಕರಿಗೂ ಸೂಚನೆಯನ್ನು ನೀಡಿದ್ದಾರೆ. ಜೊತೆಗೆ ತೆಲಂಗಾಣಕ್ಕೆ ತೆರಳುವಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಇವರ ಜೊತೆಗೆ ಸಚಿವ ಬೋಸರಾಜ್ ಕೂಡ ತೆರಳಲಿದ್ದಾರೆ ಎಂದು ವರದಿಯಾಗಿದೆ.

ಡಿಕೆಶಿ ಈಗಾಗಲೇ ತೆಲಂಗಾಣ ಚುನಾವಣೆಯಲ್ಲಿ ಕರ್ನಾಟಕದ ಕಾಂಗ್ರೆಸ್‌ ಗ್ಯಾರಂಟಿಗಳ ಪ್ರಯೋಜನಗಳನ್ನು ತೆಲಂಗಾಣದ ಜನರಿಗೆ ತಿಳಿಸುವ ಮೂಲಕ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಫಲಿತಾಂಶ ಹೊರಬಿದ್ದು ಕಾಂಗ್ರೆಸ್ ಸರ್ಕಾರ ರಚನೆಯಾಗುವವರೆಗೂ ಅವರೇ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳಬಹುದು ಎನ್ನಲಾಗುತ್ತಿದೆ.

2014 ಮತ್ತು 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪರವಾಗಿ ಗೆದ್ದಿದ್ದ ಶಾಸಕರು ಬಿಆರ್‌ಎಸ್‌ ಸೇರಿದ್ದರು. ಹಾಗಾಗಿ ಬಹುಮತ ಬಂದರೂ ಮತ್ತೆ ಇದೇ ಬಿಆರ್​ಎಸ್​ಗೆ ಹೋಗುವ ಅಥವಾ ಅವರನ್ನು ಸೆಳೆಯುವ ಸಾಧ್ಯತೆ ಇದೆ ಅನ್ನುವುದು ಕಾಂಗ್ರೆಸ್‌ಗೆ ಆತಂಕ ಉಂಟು ಮಾಡಿದೆ. ಹಾಗಾಗಿಯೇ ಚುನಾವಣಾ ಫಲಿತಾಂಶಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!