Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಮರ ವ್ಯಾಪಾರವಾದ ದಿನಗಳು

✍️ ಹರೀಶ್ ಗಂಗಾಧರ್

ಮಾಡಲು ಎಷ್ಟೆಲ್ಲಾ
ಕೆಲಸಗಳಿವೆ ಇಂದು
ನೆನಪುಗಳ ಕೊಂದು
ನೋವುಗಳ ಕೊಂದು
ಹೃದಯವನು ಕಲ್ಲು ಮಾಡಿಕೊಳ್ಳಬೇಕಿದೆ
ಮತ್ತೆ ಬದುಕಲು ಸಿದ್ಧಳಾಗಬೇಕಿದೆ.
– ಅನ್ನಾ ಆಕ್ಮತಾವೊ

ಇವು ರಷ್ಯನ್ ಕವಿಯತ್ರಿ ಅನ್ನಾ ಆಕ್ಮತಾವೊ ಬರೆದ ರೆಕ್ವೆಯಮ್ ವಿಲಾಪ ಕವಿತೆಯ ಸಾಲುಗಳು. 1935-1961ರ ಸ್ಟಾಲಿನ್ ಯುಗದಲ್ಲಿ ನಡೆದ ಮಹಾ ಶುದ್ದೀಕರಣದ ಕ್ರೌರ್ಯವನ್ನ ತಾಯ್ನೋಟದ ಮೂಲಕ ಲೋಕಕ್ಕೆ ಪರಿಚಯಿಸಿದವಳು ಅನ್ನಾ. ಹೊರ ಜಗತ್ತಿಗೆ ಸ್ಟಾಲಿನ್ ಠೀವಿ, ದಕ್ಷತೆ, ನಯವಾದ ಮಾತುಗಳು, ಕ್ರಾಂತಿಯ ಕಿಚ್ಚು ಮಾತ್ರ ಕಾಣಿಸುತ್ತಿದ್ದಾಗ, ಅನ್ನಾ ಸ್ಟಾಲಿನ್ ಆಳ್ವಿಕೆಯಲ್ಲಿದ್ದ ದರ್ಪ, ಸ್ವಪ್ರತಿಷ್ಠೆ, ಪರರ ಬಗೆಗಿನ ಭೀತಿ, ನ್ಯಾಯಾಂಗ ಸಮ್ಮತ್ತಿಯಿಲ್ಲದ ಕಗ್ಗೊಲೆಗಳು ಮತ್ತು ಬಡವರನ್ನ ಮಾನವೀಯತೆಯಿಂದ, ಮಾತಾಡಿಸುತ್ತಲೇ ಅವರನ್ನ ಸುಲಿದು ಹಾಕುವ, ಬಂಧಿಸಿ ಸೈಬೀರಿಯಗಟ್ಟುವ ಭೀಕರ ದಿನಗಳನ್ನ ತನ್ನ ಕವಿತೆಯಲ್ಲಿ ಹಿಡಿದಿಟ್ಟಿದ್ದಳು.

ಅಂದಿನ ದಿನಗಳಲ್ಲಿ ಸೆರೆಮನೆಯ ಮುಂದೆ ಸಾಲುಗಟ್ಟಿ ಗಂಡ ಮತ್ತು ಮಕ್ಕಳಿಗಾಗಿ ತಿಂಗಳಗಟ್ಟಲೆ ಕಾಯುವುದು ರಷ್ಯನ್ ಹೆಣ್ಣು ಮಕ್ಕಳಿಗೆ ದೈನಂದಿನ ಕೆಲಸವಾಗಿತ್ತು. ಅನ್ನಾ ಕೂಡ ಈ ಸಾಲುಗಳಲ್ಲಿ ಹದಿನೇಳು ತಿಂಗಳು ಕಾದಿದ್ದಳು ಆದರೂ ಅವಳ ಗಂಡ ಮತ್ತು ಮಗ ಇಬ್ಬರು ಉಳಿಯಲಿಲ್ಲ.

ರೆಕ್ವೆಯಮ್ ಕವಿತೆಯಲ್ಲಿ ಮುಖ್ಯ ಪಾತ್ರದಾರಿ ಪ್ರತಿ ಹಂತದಲ್ಲೂ ಹೊಸ ನೋವು ಯಾತನೆಯನ್ನ ಅನುಭವಿಸುತ್ತಾಳೆ. ಮೂಕ ವೇದನೆ, ವೇದನೆ ತನ್ನೊಡನೆ ತರುವ ಅಪನಂಬಿಕೆ, ವೇದನೆಯ ತರ್ಕಬದ್ಧಗೊಳಿಸುವುದು, ಹಸಿಯ ಗಾಯದಂತೆ ಚುಚ್ಚುವ ದುಃಖ ಮತ್ತು ಉಕ್ಕಿನ ಸಂಕಲ್ಪಗಳ ಆವೃತ್ತಿ ಅನ್ನಾ ಕವಿತೆಯಲ್ಲಿದೆ. ಈ ಅನುಭವ ಆವೃತ್ತಿ ಅವಳದ್ದು ಮಾತ್ರವಲ್ಲದೆ ರಷ್ಯಾದ ಬಹುತೇಕ ಹೆಂಗಳೆಯರ ಅನುಭವವಾಗುತ್ತದೆ.

ವೇದನೆಯಾಗಲಿ, ಯಾತನಾ ಶಿಬಿರಗಳಾಗಲಿ, ವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಕಣ್ಮರೆಯಾಗುವುದುದಾಗಲಿ, ರಾಜಕೀಯ ಪ್ರೇರಿತ ಕಗ್ಗೊಲೆಗಳಾಗಲಿ ರಷ್ಯಾಕ್ಕೆ ಹೊಸದೇನಲ್ಲ. ರಷ್ಯಾವನ್ನು ಪಾಶ್ಚತ್ಯಿಕರಿಸಿದ ಪೀಟರ್ ಮಹಾಶಯ ವಿಶಾಲ ದೇಶವನ್ನ ಬಿಗಿಮುಷ್ಟಿಯಲ್ಲಿಡಿದು ಅಳುವುದನ್ನೂ ತನ್ನ ಉತ್ತರಾಧಿಕಾರಿಗಳಿಗೆ ಕಲಿಸಿಕೊಟ್ಟಿದ್ದ. “ದೇಶದ ಹಿತಕ್ಕಾಗಿ” ಯುದ್ಧಗಳಲ್ಲಿ ಸೈನಿಕರನ್ನ ಬಲಿ ನೀಡುವುದು ಸರಿಯೆಂದು ನಂಬಿಸಿಬಿಟ್ಟಿದ್ದ. ಅಂದಿನಿಂದ ಇಂದಿನವರೆಗೆ ನಾಯಕರ ಗಂಭೀರ ನಿಲುವಿಗೆ ಅಂಜದ, ಅಧಿಕಾರವಾಣಿಗೆ ಬೆಚ್ಚಿ ಬೆವರದ ರಷ್ಯಾವನ್ನ ನಾವು ನೋಡೇ ಇಲ್ಲ.

ಕಳೆದ ಶತಮಾನದಲ್ಲಿ ರಷ್ಯಾದ ನಾಯಕರನ್ನ ಕಡೆಗಣಿಸಿ ಮಾಸ್ಕೋ ನಗರದ ಮೇಲೆ ದಂಡೆತ್ತಿ ಬಂದವರು ಇಬ್ಬರೇ- ನೆಪೋಲಿಯನ್ ಮತ್ತು ಹಿಟ್ಲರ್. ಇಬ್ಬರಿಗೂ ಈ ದಾಳಿ ಮಾರಕವಾಯಿತು. ಶೀತಲ ಸಮರ ಅಂತ್ಯವಾಗಿ ರಷ್ಯಾ ತನ್ನ ಅಧಿಪತ್ಯ, ಜಾಗತಿಕ ಪ್ರಭಾವ ಕಳೆದುಕೊಳ್ಳುವ ದಿನಗಳಲ್ಲಿ ಪುಟಿನ್ ರಾಷ್ಟ್ರಪತಿ ಗದ್ದುಗೆಯೇರಿದ ನಂತರವಂತೂ ಕ್ರೆಮ್ಲಿನ್ ಕಡೆ ಕಣ್ಣು ಮಾಡಿ ಕೂಡ ನೋಡುವ ಧೈರ್ಯ ಯಾರು ಮಾಡಿಲ್ಲ. ಆದರೆ ಇದೆಲ್ಲವೂ ಬದಲಾಗುವುದರಲ್ಲಿತ್ತು.

23 ಜೂನ್ 2023. ಯೆವ್ಗೇನಿ ಪ್ರಿಗೊಝಿನ್ ತನ್ನ ವಾಜ್ಞರ್ ಪಡೆಯೊಂದಿಗೆ ಮಾಸ್ಕೋ ನಗರದ ಮೇಲೆ ಸಮರ ಸಾರಿದ. ರಷ್ಯಾದ ರಕ್ಷಣಾ ಸಚಿವನಾದ ಸೆರ್ಗೆಯ್ ಶೊಯ್ಗುಗೆ ಬಹಿರಂಗವಾಗಿ ಮನಬಂದಂತೆ ಬೈದ. ಪಡೆ ಮುನ್ನಡೆದಂತೆ ಜನರು ಅವನನ್ನ ಹರ್ಷದಿಂದ ಬರಮಾಡಿಕೊಂಡರು. ಜಗತ್ತಿನಲ್ಲೆಲ್ಲಾ ಕುತೂಹಲ. ಅಷ್ಟಕ್ಕೂ ಪುಟಿನ್ ನಂತಹ ಸರ್ವಾಧಿಕಾರಿಯನ್ನ ಕೆಣಕಿದ ಈ ಪ್ರಿಗೊಝಿನ್ ಯಾರು? ವಾಜ್ಞರ್ ಪಡೆಯನ್ನ ಆತ ಕಟ್ಟಿದ್ದಾದರೂ ಹೇಗೆ?

ಪ್ರಿಗೊಝಿನ್ ಒಬ್ಬ ಅಪರಾಧಿ. ಸೇಂಟ್ ಪೀಟರ್ಸ್ ಬರ್ಗ್ ನಗರದ ಸೆರೆಮನೆಯ ಪರಿಚಯ ಒಡನಾಟ ಆತನಿಗೆ ಅತಿಯಾಗಿಯೇ ಇತ್ತು. ಸೆರೆಮನೆಯಿಂದ ಹೊರಬಂದ ಆತ ಹೋಟೆಲ್ ವ್ಯವಹಾರ ಶುರು ಮಾಡಿದ. ಲಾಭವಾಯಿತು. ಮತ್ತಷ್ಟು ಹೋಟೆಲ್ಗಳನ್ನ ತೆರೆದ. ಈ ಹೋಟೆಲ್ ಗಳಲ್ಲಿ ಒಂದಾದ “ದ ನ್ಯೂ ಐಲ್ಯಾಂಡ್” ಪುಟಿನ್ಗೆ ಅಚ್ಚುಮೆಚ್ಚು. ರುಚಿಕರ ತಿನಿಸುಗಳಿಂದ ಆರಂಭವಾದ ಸ್ನೇಹ ಪ್ರಿಗೊಝಿನ್ನನ್ನು ರಾಷ್ಟ್ರಪತಿಯ ಚೆಫ್ ಆಗಿ ಮಾಡಿತು. ಅಲ್ಲಿಂದ ಪ್ರಿಗೊಝಿನ್ ತಡೆಯುವವರು ಯಾರು ಇರಲಿಲ್ಲ. ಪುಟಿನ್ ಬಲಗೈ ಬಂಟನಾದ. ಪುಟಿನ್ ಅಧಿಕಾರಾವಧಿಯಲ್ಲಿ ಹಣ, ಐಶ್ವರ್ಯ ವೃದ್ಧಿ ಮಾಡಿಕೊಳ್ಳುತ್ತಿರುವ ರಷ್ಯನ್ ಎಲೀಟರಲ್ಲಿ ಅಗ್ರಗಣ್ಯನಾದ.

ಪ್ರಿಗೊಝಿನ್ಗೆ ರಷ್ಯನ್ ಸೇನೆ ಮತ್ತು ಬೇಹುಗಾರಿಕೆ ಸಂಸ್ಥೆಗಳೊಡನೆ ಅತ್ಯುತ್ತಮ ಸಂಬಂಧಗಳಿದ್ದವು. ಪ್ರಿಗೊಝಿನ್ ಕಟ್ಟಿದ ಕಂಪನಿ ವಾಗ್ನರ್ ಕುರಿತು ಹೇಳಲೇ ಬೇಕು. ವಾಗ್ನರ್ ಕಂಪನಿ ಯಾವುದೇ ದೇಶಕ್ಕೆ ಖಾಸಗಿ ಸೇನೆಯನ್ನ, ವಿದೇಶಿ ದಾಳಿಗಳಿಂದ, ಭಯೋತ್ಪಾದಕರಿಂದ ರಕ್ಷಣೆಯನ್ನ ಅಥವಾ ಇರುವ ಸರ್ಕಾರವನ್ನ ಅಸ್ಥಿರಗೊಳಿಸಲು ಹಣ ಪಡೆದು ಸೇವೆ ಒದಗಿಸುವ ಕಂಪನಿ! ಖಾಸಗಿ ಸೇನೆ ಬಗ್ಗೆ ನೀವೆಂದು ಕೇಳಿರಲಿಕ್ಕಿಲ್ಲ. ಕಾರ್ಪೊರೇಟ್ ದಾಹದಿಂದ, ಲಾಭದ ಅಮಲು ಯಾವ ಮಟ್ಟಕ್ಕೆ ತಲುಪಬಹುದೆಂಬುದರ ಸ್ಪಷ್ಟ ನಿದರ್ಶನ ವಾಗ್ನರ್.

ಜಗತ್ತಿನ ಯಾವ ದೇಶವು ತನ್ನ ಸೈನಿಕರು ಶವದ ಪೆಟ್ಟಿಗೆಯಲ್ಲಿ ಹಿಂದಿರುವುದನ್ನ ಸಹಿಸಲಾರದು. ಆದರೆ ಎಲ್ಲಾ ದೇಶಗಳಿಗೂ ದಾಳಿ ಮಾಡುವ, ಭೂಮಿ, ಸಂಪನ್ಮೂಲಗಳನ್ನ ಆಕ್ರಮಿಸುವ ಹಂಬಲವಂತು ಅತಿಯಾಗಿಯೇ ಇರುತ್ತದೆ. ಬೇರೆ ನೆಲದಲ್ಲಿ ತನ್ನ ನೆರಳು ಬೀರುವ ತವಕವಿರುತ್ತದೆ. ಈ ದ್ವಂದ್ವದಿಂದ ಹೊರಬರಲು ಪುಟಿನ್ ನಂತಹ ಮಹತ್ವಾಕಾಂಕ್ಷೆಯ ನಾಯಕನಿಗೆ ನೆರವಾಗಿದ್ದು ವಾಗ್ನರ್ನಂತಹ ಕಂಪನಿ. ವಾಗ್ನರ್ ಕಂಪನಿ ಸೈನಿಕರಾಗಿ ಸೇರಿಕೊಂಡವರು ರಷ್ಯನ್ ಸೆರೆಮನೆಯಲ್ಲಿ ಕೊಳೆಯುತ್ತಿದ್ದ ಅಪಾಯಕಾರಿ ಅಪರಾಧಿಗಳು.

ಪ್ರಿಗೊಝಿನ್ ರಷ್ಯನ್ ಸೆರೆಮನೆಗಳಿಗೆ ಭೇಟಿಕೊಟ್ಟು ಅಲ್ಲಿನ ಖೈದಿಗಳಿಗೆ ಒಂದು ಆಫರ್ ಇಡುತ್ತಾನೆ. ವಾಗ್ನರ್ ಸೇನೆ ಸೇರಿ, ಆರು ತಿಂಗಳು ಸಮರದಲ್ಲಿ ಭಾಗವಹಿಸಿ ನಂತರ ಸ್ವತಂತ್ರವಾಗಿ ಮನೆಗೆ ಹೋಗಿ. ಈ ಆಫರ್ ನಿರಾಕರಿಸುವ ಆಯ್ಕೆ ಅವರಿಗಿರಲಿಲ್ಲ. ಆಫರ್ ನಿರಾಕರಿಸಿದ, ವಾಗ್ನರ್ ಸೇನೆಯಿಂದ ಪಲಾಯನಗೈಯ್ಯಲು ಯತ್ನಿಸಿದವರನ್ನ ಸುತ್ತಿಗೆಯಿಂದ ಚಚ್ಚಿ ಕೊಂದ ವಿಡಿಯೋಗಳನ್ನ ಪ್ರಿಗೊ ವೈರಲ್ ಮಾಡಿದ್ದ! ಇಂತಹ ನಿರ್ದಯ ವಾಗ್ನರ್ ಪಡೆಗೆ ತರಬೇತಿ ನೀಡಲು ಮುಂದಾಗಿದ್ದು ರಷ್ಯನ್ ಸೇನೆಯಿಂದ ಹೊರಬಿದ್ದಿದ್ದ ಅಗ್ನಿವೀರರು!

ಕ್ರಿಮಿಯಾ ಯುದ್ಧದಲ್ಲಿ ಭಾಗವಹಿಸಿದ್ದರೂ ವಾಗ್ನರ್ ಸೇನೆ ಜಗತ್ತಿಗೆ ಪರಿಚಯವಾಗುವಂತೆ ಗೋಚರವಾಗಿದ್ದು ಸಿರಿಯಾ ಯುದ್ಧದಲ್ಲಿ. ಅಮೇರಿಕಾ ಐಸಿಸ್/ಐಸಿಲ್ ಬಗ್ಗುಬಡಿಯುವ ನೆಪದಲ್ಲಿ ತೈಲ ಶ್ರೀಮಂತ ರಾಷ್ಟ್ರವಾದ ಸಿರಿಯಾದೊಳಗೆ ಆಂತರಿಕ ಯುದ್ಧಕ್ಕೆ ಕುಮ್ಮಕ್ಕು ನೀಡಿ, ದೇಶವನ್ನು ಅಸ್ಥಿರಗೊಳಿಸಿ ರಾಷ್ಟ್ರಪತಿ ಬಷರ್ ಆಲ್ ಅಸಾದ್ ಆಡಳಿತ ಅಂತ್ಯಗೊಳಿಸಲು ಮುಂದಾದಾಗ ರಷ್ಯಾ ಅಸಾದ್ ಪರಿವಾಗಿ ನಿಂತಿತು. ರಷ್ಯನ್ ವಾಯುಪಡೆ ನಿರಂತರ ದಾಳಿಗಳನ್ನ ನೆಡೆಸಿದರು ಕಾಲಾಳುಗಳಾಗಿ ಕದನ ನೆಡೆಸಿದವರು ವಾಗ್ನರ್ ಸೇನೆಯೇ!

ವಾಗ್ನರ್ ರೋಚಕ ಇತಿಹಾಸದಲ್ಲಿ ತುಂಬ ನಿರ್ಣಾಯಕವಾದಂತಹ ತಿರುವು ಬಂದದ್ದು ಸಿರಿಯಾದಲ್ಲಿ ಬರಿಯ ಕದನ ಮಾತ್ರದಲ್ಲಿ ತೊಡಗದೆ, ಆರ್ಥಿಕ ಒಪ್ಪಂದಗಳಿಗೂ ಸಹಿ ಹಾಕಲು ಆರಂಭಿಸಿದಾಗ. ತೈಲ, ಅನಿಲ ಪ್ರದೇಶ, ಫಾಸ್ಫೇಟ್ ಗಣಿಗಳಿಂದ ಸಿರಿಯಾಕ್ಕೆ ಸಿಗುತ್ತಿದ್ದ ಹೇರಳ ಸಂಪತ್ತಿನಲ್ಲಿ ಶೇಕಡಾ 25ರಷ್ಟು ವಾಗ್ನರ್ ಪಡೆಯತೊಡಗಿದಾಗ. ತೈಲ ಬಾವಿಗಳ ರಕ್ಷಣಾ ಕಾರ್ಯಕ್ಕೆ ತಗಲುವ ವೆಚ್ಚವಿದು ಎಂಬುದು ವಾಗ್ನರ್ ಸಮಜಾಯಿಷಿ.

ಅರಾಜಕತೆ ತಾಂಡವವಾಡುತ್ತಿರುವ, ವಿಫಲ ದೇಶಗಳಿಂದ, ಅಂತರಿಕ ಸಂಘರ್ಷಗಳಿಂದ ಬಸವಳಿದ ನಾಡಿನಿಂದ, ಜನಾಂಗೀಯ ಕಲಹದಿಂದ ತತ್ತರಿಸಿದ ರಾಷ್ಟ್ರಗಳಿಂದ, ಭ್ರಷ್ಟ ರಾಜಕಾರಣಿಗಳೊಂದಿಗೆ ವ್ಯವಹರಿಸುವುದರಿಂದ ಆಗುವ ಆರ್ಥಿಕ ಅನುಕೂಲಗಳ ಕುರಿತು ವಾಗ್ನರ್ ಬಹುಬೇಗ ಕಲಿಯಿತು. ವಾಗ್ನರ್ ಹೆಜ್ಜೆಯ ಗುರುಗಳು ಬರಿಯ ಸಿರಿಯಾಕ್ಕೆ ಸೀಮಿತವಾಗದೆ ಬರ್ಕಿನೋ ಫಾಸೊ, ಮಾಲಿ, ಸೂಡಾನ್, ಲಿಬಿಯಾ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಮೊಜಾಂಬಿಕ್, ಘಾನಾ, ನೈಜೀರಿಯಾದಲ್ಲೂ ಕಾಣಸಿಗುತ್ತದೆ. ತೈಲ, ಅನಿಲ ವ್ಯವಹಾರದಲ್ಲಿ ಬಿಲಿಯನ್ ಗಟ್ಟಲೆ ಹಣ ಮಾಡಿದ ವಾಗ್ನರ್ ಆಫ್ರಿಕಾ ದಯೆಯಿಂದ ಚಿನ್ನ ಮತ್ತು ವಜ್ರ ವ್ಯಾಪಾರಕ್ಕೂ ಕೈ ಹಾಕಿತು. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ದೇಶದ ನದಸ್ಸಿಮ ಗಣಿಯಿಂದ ಎಂಟು ವರ್ಷಗಳಲ್ಲಿ 1.4 ಮಿಲಿಯನ್ ಔನ್ಸ್ ಗಳಷ್ಟು ಚಿನ್ನ ತನ್ನದಾಗಿಸಿಕೊಂಡು ಸುಮಾರು ಮೂರೂ ಬಿಲಿಯಾನ್ ಡಾಲರ್ಗಳಷ್ಟು ಲಾಭ ಮಾಡಿಕೊಳ್ಳವ ಇರಾದೆ ವಾಗ್ನರ್ ಸಂಸ್ಥೆಗಿತ್ತು!

ಜೋಸೆಫ್ ಕಾನ್ರಾಡ್ “ಹಾರ್ಟ್ ಆಫ್ ಡಾರ್ಕ್ನೆಸ್” ಕಾದಂಬರಿಯ ಮಿಸ್ಟರ್ ಕರ್ಟ್ಜ್ (Kurtz) ಮತ್ತು ಫೋರ್ಡ್ ಕಪ್ಪೋಲನ “ಅಪೋಕ್ಯಾಲಿಪ್ಸ್ ನೌ” ಚಿತ್ರದ ಯುದ್ಧ ದಾಹಿ ಬಿಲ್ ಕಿಲ್ ಗೋರ್ ಛಾಯೆ ರಷ್ಯಾದ ಪ್ರಿಗೋಝಿನನಲ್ಲಿ ಕಾಣುತ್ತದೆ. ತನ್ನ ಒಡೆಯನ ಅಧೀನದಲ್ಲಿರಲು ಒಪ್ಪದೆ ದಂಗೆಯೇಳುವ ಕರ್ಟ್ಜ್ ಧೈರ್ಯ ಪ್ರಿಗೋಝಿನನಲ್ಲಿದೆ, ಮಾರಣಹೋಮವನ್ನು ಬಿಟ್ಟು ಬದುಕಲಾಗದ, ಯುದ್ಧದ ಜೊತೆಗಿನ ನಂಟು ಬಿಡಲಾಗದ, ರಾಷ್ಟ್ರದ ಒಳಿತಿಗಾಗಿ ಕಗ್ಗೊಲೆಗಳು, ನರಮೇಧಗಳು ಅತ್ಯಾವಶ್ಯಕವೆಂದು ನಂಬಿದ ಬಿಲ್ ಕಿಲ್ ಗೋರ್ ತಿಕ್ಕಲುತನ ಕೂಡ ಪ್ರಿಗೋಝಿನನಲ್ಲಿದೆ!

ಪ್ರಿಗೋಝಿನ್ ಮಾಡಿದ್ದು ದಂಗೆಯಲ್ಲ ಎಂದು ವಾದಿಸುವವರೂ ಇದ್ದಾರೆ. ಆಧುನಿಕ ರಷ್ಯಾದ ಪ್ರಶ್ನಾತೀತ ನಾಯಕ ಪುಟಿನ್. ದಶಕಗಳ ಕಾಲ ಪುಟಿನ್ ಅಧಿಕಾರ ಗಟ್ಟಿಯಾಗಿ ಉಳಿಯಲು ಆತನ ಬಿಗಿಯಾದ ಆಡಳಿತ ಎಷ್ಟು ಕಾರಣವೋ, ರಷ್ಯಾದ ಎಲೈಟ್ ಗಳು ಅವನ ಪರವಾಗಿ ನಿಂತಿರುವುದು ಕೂಡ ಪ್ರಮುಖ ಕಾರಣಗಳಲ್ಲೊಂದು. ಈ ಎಲೈಟ್ ಗಳು ಪುಟಿನ್ ಪಕ್ಕ ನಿಂತು “ಜೀ ಹುಜೂರ್” ಎನ್ನುತ್ತಲೇ ತಮ್ಮ ಕೀಸೆ ತುಂಬಿಸಿಕೊಳ್ಳುವ ಕೆಲಸಗಳನ್ನು ಮಾಡುತ್ತಾರೆ. ಆದರೆ ಆಗಾಗ ಈ ಎಲೈಟ್ ಗಳ ನಡುವೆಯೇ ಪೈಪೋಟಿ ಉಂಟಾಗುತ್ತದೆ. ಅಸೂಯೆಯ ನಂಜು ಅವರ ನಡುವೆ ಹರಡುತ್ತದೆ. ಕಾದಾಟಕ್ಕೆ ವೇದಿಕೆ ಸಜ್ಜಾಗುತ್ತದೆ.

ಅಂತಹ ಒಂದು ಕಾದಾಟ ಪ್ರಿಗೋಝಿನ್ ಮತ್ತು ರಕ್ಷಣಾ ಸಚಿವ ಸೆರ್ಗೆ ಸೀಗು ನಡುವೆ ನಡೆಯುತ್ತಲೇ ಇತ್ತು. ಆ ಕಾದಾಟದ ಅಂತಿಮ ಘಟ್ಟ ಪ್ರಿಗೋಝಿನ್ ಮಾಸ್ಕೋ ನಗರದ ಮೇಲೆ ದಾಳಿಯಿಡಲು ಮುಂದಾಗಿದ್ದು. ಈ ಕಾದಾಟದಲ್ಲಿ ಪುಟಿನ್ ಸೀಗು ಪರವಾಗಿ ನಿಂತಾ. ಆಶ್ಚರ್ಯವೆಂಬಂತೆ ಪ್ರಿಗೋಝಿನ್ ಕದನ ವಿರಾಮ ಘೋಷಿಸಿ ಕ್ರೆಮ್ಲಿನ್ ಜೊತೆಗೆ ಮಾತುಕತೆಗೆ ಸಿದ್ದನಾದ. ಪ್ರಿಗೋಝಿನನ್ನು ಪುಟಿನ್ ಕ್ಷಮಿಸಿದ ಆದರೆ ಪ್ರಿಗೋಝಿನ್ ಪ್ರಯಾಣಿಸುತ್ತಿದ್ದ ವಿಮಾನ ಆಗಸದಲ್ಲೇ ಸ್ಫೋಟಗೊಂಡಿತು. ಸಹಪ್ರಯಾಣಿಕನಾದ ಡಿಮಿಟ್ರೀ ಉಟ್ಕಿನ್ ಕೂಡ ಹತನಾದ. ಸ್ಪೋಟಕ್ಕೆ ಕಾರಣವೇನೆಂದು ತನಿಖೆಯಿಂದ ತಿಳಿಯಬೇಕಿದೆ ಎಂದು ಕ್ರೆಮ್ಲಿನ್ ತಿಳಿಸಿದೆ. ಪುಟಿನ್ ಆಡಳಿತಾವಧಿಯಲ್ಲಿ ಹತ್ತಾರು ಉದ್ಯಮಿಗಳು, ಬಂಡುಕೋರರು, ಮೇಲಾಧಿಕಾರಿಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ಪುಟಿನ್ ನಿರಂಕುಶಾಧಿಕಾರಿ ಎನ್ನುವುದರಲ್ಲಿ ಯಾವ ಅನುಮಾನಗಳೂ ಉಳಿದಿಲ್ಲ. ಆದರೆ ಅಮೆರಿಕಾದ ಸಾಮ್ರಾಜ್ಯಶಾಹಿ ನೀತಿಗಳಿಗೆ ತಡೆಯೊಡ್ಡುವ ನಾಯಕ ಪುಟಿನ್ ಮತ್ತು ಝೀ ಝಿನ್ಗ್ ಪಿಂಗ್ ಅನ್ನುವುದರಲ್ಲೂ ಯಾವ ಅನುಮಾನಗಳು ಉಳಿದಿಲ್ಲ. ಜಾಗತಿಕ ರಾಜಕೀಯದಲ್ಲಿ ಪುಟಿನ್ ಮತ್ತು ಝೀ ಅವರ ಪಾತ್ರದ ಅಧ್ಯಯನ ಹಾಗು ವಿಶ್ಲೇಷಣೆಯ ಅಗತ್ಯವಿದೆ. ವಾಗ್ನರ್ ಪಡೆಯಂತಹ ಖಾಸಗಿ ಸೇನೆಯೊಂದು ಹಣಕ್ಕಾಗಿ ನಾನಾ ದೇಶಗಳಲ್ಲಿ ಸಮರ ನೆಡೆಸಿದ್ದು, ಸರ್ಕಾರಗಳನ್ನು ಅಸ್ಥಿರಗೊಳಿಸಲು, ಪ್ರಾಕ್ಸಿ ಯುದ್ಧ ಮಾಡಲು ಸೇನಾ ಸೇವಾ ಕೊಡುವ ಕಾರ್ಪೊರೇಟು ಹುಟ್ಟಿಕೊಂಡಿದ್ದು ಈ ದಶಕದ ಸೋಜಿಗಗಳಲ್ಲೊಂದು.

ಜರ್ಮನಿಯ ನಾಟ್ಝೀ ಆಡಳಿತದಲ್ಲಿ “ಡ್ಯೂಯಲ್ ಸ್ಟೇಟ್” ಎಂಬ ನೀತಿ ಜಾರಿಯಲ್ಲಿತ್ತು. ಈ ಡ್ಯೂಯಲ್ ಸ್ಟೇಟ್ ನಲ್ಲಿ ಹಿಟ್ಲರ್ ಮತ್ತವನ ಪಾರ್ಟಿಗೆ ಅಪರಿಮಿತ ವಿಶೇಷ ಅಧಿಕಾರಗಳಿದ್ದವು. ದೇಶದ ಬಿಕ್ಕಟ್ಟುಗಳಿಗೆ ಹಿಟ್ಲರ್ “ಪರಿಹಾರ” ಸೂಚಿಸುತ್ತಿದ್ದ. ಆತ ಸ್ವೇಚ್ಛಾನುಸಾರ ಹಿಂಸೆಯಲ್ಲಿ ತೊಡಗಬಹುದಿತ್ತು. ಸಣ್ಣ ಪುಟ್ಟ ವ್ಯಾಜ್ಯ, ಸಮಸ್ಯೆಗಳನ್ನು ಪರಿಹರಿಸಲು ಮಾತ್ರ ನ್ಯಾಯಾಂಗವಿತ್ತು. ಇಂದಿಗೂ ಡ್ಯೂಯಲ್ ಸ್ಟೇಟ್ ಉಳಿಸಿಕೊಂಡಿರುವ ರಾಷ್ಟ್ರಗಳ ಪಟ್ಟಿ ದೊಡ್ಡದಿದೆ ರಷ್ಯಾ, ಚೀನಾ, ಟರ್ಕಿ, ಅರಬ್ ರಾಷ್ಟ್ರಗಳು, ಆಫ್ರಿಕನ್ ರಾಷ್ಟ್ರಗಳು, ಕೆಲ ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳು, ಇಂಡೋನೇಷ್ಯಾ… ಪಟ್ಟಿ ದೊಡ್ಡದಿದೆ.

ಆತಂಕದ ವಿಷಯವೆಂದರೆ ಜಗತ್ತಿನ ಶ್ರೇಷ್ಠ ಪ್ರಜಾಪ್ರಭುತ್ವಗಳು ಕೂಡ ಇಂದು ನಿಧಾನವಾಗಿ ಡ್ಯೂಯಲ್ ಸ್ಟೇಟುಗಳೆಡೆಗೆ ಆಕರ್ಷಿತವಾಗುತ್ತಿವೆ. ಚುನಾಯಿತ ನಾಯಕರು ಅಧಿಕಾರ ಉಳಿಸಿಕೊಳ್ಳಲಿಕ್ಕೆ ಈ ಮಾದರಿಗಳನ್ನು ಅನುಸರಿಸುತ್ತಿದ್ದಾರೆ. ಫ್ಯಾಸಿಸಂ ಅನ್ನುವುದು ದಿನಂಪ್ರತಿ ವಿಕಸನಗೊಳ್ಳುತ್ತಿದೆ. ಪ್ರತಿ ರಾಷ್ಟ್ರವು ತನಗೆ ಅರ್ಹವಾದ ಫ್ಯಾಸಿಸಂ ಆವೃತ್ತಿ ಅಳವಡಿಸಿಕೊಳ್ಳುತ್ತಲೇ ಇದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!