ಇಂದು ಅಧಿಕ ಇಳುವರಿ ಪಡೆಯಲು ಅತಿ ಹೆಚ್ಚಿನ ರಾಸಾಯನಿಕ ಗೊಬ್ಬರವನ್ನು ಮಣ್ಣಿಗೆ ಹಾಕುತ್ತಿದ್ದು, ಇದರಿಂದ ಭೂಮಿಯ ಫಲವತ್ತತೆ ನಾಶವಾಗುತ್ತಿದೆ.ಪರಿಸ್ಥಿತಿ ಇದೇ ರೀತಿ ಮುಂದುವರೆದರೆ,ಈ ಹಿಂದೆ ಎಪ್ಪತ್ತರ ದಶಕದಲ್ಲಿ ಕಾಡಿದಂತಹ ಆಹಾರ ಕ್ಷಮ 2040-50ರ ಸುಮಾರಿಗೆ ಕಾಡ ಬಹುದು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಮಂಡ್ಯ ತಾಲ್ಲೂಕಿನ ವಿ.ಸಿ.ಫಾರಂನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರ ಮಂಡ್ಯ ವತಿಯಿಂದ ನಡೆದ ಕೃಷಿಮೇಳ-2023 ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದು ಅಧಿಕ ಇಳುವರಿಗಾಗಿ ಭೂಮಿಗೆ ಹೆಚ್ಚು ರಾಸಾಯನಿಕಗಳನ್ನು ಹಾಕುತ್ತಿದ್ದೇವೆ. ಈ ಹಿಂದೆ 60-70ರ ದಶಕದಲ್ಲಿ ಆಹಾರದ ಕೊರತೆಯಾಗಿ ಆಹಾರ ಕ್ಷಾಮ ತಲೆದೋರಿತ್ತು.ನಾವು ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡದಿದ್ದರೆ ಇನ್ನು 2040- 50ರ ಸುಮಾರಿಗೆ ಮತ್ತೆ ಆಹಾರದ ಸಮಸ್ಯೆ ತಲೆದೋರಿ, ಆಹಾರ ಕ್ಷಾಮ ಮತ್ತೆ ನಮ್ಮನ್ನು ಕಾಡಬಹುದು ಎಂಬ ಬಗ್ಗೆ ಈಗಾಗಲೇ ಕೃಷಿ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೃಷಿ ತಜ್ಞರು, ಸಂಶೋಧಕರು ಈ ಬಗ್ಗೆ ರೈತರಿಗೆ ತಿಳುವಳಿಕೆ ನೀಡಬೇಕಿದೆ ಎಂದರು.
ನಾವು ಸಾವಯವ ಗೊಬ್ಬರ ಬಳಸಿ ವ್ಯವಸಾಯ ಮಾಡಿದರೆ ಹೆಚ್ಚಿನ ಇಳುವರಿ ಮತ್ತು ಆದಾಯ ಇಲ್ಲವೆಂದು ಇಂದಿನ ರೈತರು ಭಾವಿಸಿದ್ದಾರೆ. ಕ್ರಿಮಿನಾಶಕ, ರಸಗೊಬ್ಬರಗಳ ಹೆಚ್ಚು ಹೆಚ್ಚು ಬಳಕೆಯಿಂದ ಜಾಗತಿಕ ತಾಪಮಾನ ಹೆಚ್ಚಾಗಿ ಪರಿಸರಕ್ಕೆ ಧಕ್ಕೆ ಬಂದಿದೆ. ರಾಸಾಯನಿಕಗಳ ಹೆಚ್ಚು ಹೆಚ್ಚು ಬಳಕೆಯಿಂದ ಆಹಾರ ವಿಷವಾಗುತ್ತಿದ್ದು,ಕೃಷಿ ಸಂಶೋಧಕರು ಕಡಿಮೆ ಹಾನಿಕಾರಕ ಗೊಬ್ಬರ ಬಳಸಿಕೊಂಡು ಹೆಚ್ಚು ಇಳುವರಿ ಪಡೆಯುವ ನಿಟ್ಟಿನಲ್ಲಿ ಸಂಶೋಧನೆ ಮುಂದುವರಿಸಿದಾಗ ಕೃಷಿ ಉಳಿಯಲಿದೆ.ಈ ನಿಟ್ಟಿನಲ್ಲಿ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಆಹಾರ, ಆರೋಗ್ಯ, ಆದಾಯಕ್ಕಾಗಿ ಸಿರಿಧಾನ್ಯ ಎಂಬ ಘೋಷವಾಕ್ಯದಂತೆ ಸಿರಿಧಾನ್ಯ ಹಾಗೂ ಸಾವಯವ ಕೃಷಿ ಹೆಚ್ಚಾಗಬೇಕು.ನಾವು ಹಲವಾರು ವಸ್ತುಗಳಿಲ್ಲದೆ ಜೀವಿಸಬಹುದು. ಆದರೆ ಆಹಾರವಿಲ್ಲದೇ ಮನುಷ್ಯ ಪ್ರತಿನಿತ್ಯದ ಕೆಲಸ ಮಾಡಲು ಹಾಗೂ ಜೀವಿಸಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಜಗತ್ತಿನಲ್ಲಿ ಕೃಷಿಗೆ ಪ್ರಥಮ ಸ್ಥಾನ ನೀಡಲಾಗಿದೆ. ಕೆಲವು ದಶಕಗಳ ಹಿಂದೆ ಭಾರತದಲ್ಲಿ ಆಹಾರದ ಕೊರತೆ ಇತ್ತು .ಇಂದು ಆಹಾರ ಮಟ್ಟ ಸುಧಾರಿಸಿದ್ದು, ಬೇರೆ ದೇಶಗಳಿಗೂ ಆಹಾರ ಪದಾರ್ಥಗಳನ್ನು ರಫ್ತು ಮಾಡುವ ಮಟ್ಟಕ್ಕೆ ಭಾರತ ದೇಶ ಬೆಳೆದಿದೆ. ಇದಕ್ಕೆ ಕಾರಣ ರೈತರು, ಕೃಷಿ ಸಂಶೋಧನಾ ಕೇಂದ್ರಗಳು ಹಾಗೂ ಕೃಷಿ ವಿಜ್ಞಾನಿಗಳು ಎಂದರು.
ರೈತರು ತಾವು ಬೆಳೆದ ಬೆಳೆಗೆ ಹೆಚ್ಚಿನ ಲಾಭ ಗಳಿಸಲು ದ್ವಿತೀಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಕೃಷಿ ಮೇಳದಲ್ಲಿ ಇದಕ್ಕೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ, ಕಾರ್ಯಾಗಾರ ಹಾಗೂ ಸಂವಾದಕ್ಕೆ ಅವಕಾಶವಿರುತ್ತದೆ. ರೈತರು ಕೃಷಿ ಮೇಳವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮಕ್ಕೂ ಮೊದಲು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ವಿವಿಧ ಬಗೆಯ ಕೃಷಿ ಮೇಳವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿವಿ ಕುಲಪತಿಗಳಾದ ಡಾ.ಎಸ್.ವಿ ಸುರೇಶ್ ಜಿಲ್ಲಾಧಿಕಾರಿ ಡಾ.ಕುಮಾರ, ಕೃಷಿ ವಿವಿ ವ್ಯಾವಸ್ಥಾಪಕ ಮಂಡಳಿ ಸದಸ್ಯರಾದ ಬಿಎಸ್ ಉಲ್ಲಾಶ್, ಎನ್.ದಿನೇಶ್, ಡಾ.ಎಂ ಚಂದ್ರೇಗೌಡ, ಜಿಲ್ಲಾ ಪಂಚಾಯತ ಸಿಇಒ ಶೇಖ್ ತನ್ವೀರ್ ಆಸಿಫ್, ವಿ.ಸಿ ಫಾರಂನ ಡೀನ್ ಪ್ರಕಾಶ್ ಸೇರಿದಂತೆ ಇನ್ನಿತರಿದ್ದರು.
ಸುಧಾರಿತ ತಳಿಗಳು ಹಾಗೂ ಹೈಬ್ರಿಡ್ ತಳಿಗಳ ಪ್ರಾತ್ಯಕ್ಷಿಕೆ, ಏರೋಬಿಕ್ ಹಾಗೂ ಶ್ರೀ ಪದ್ಧತಿ ಭತ್ತದ ಬೇಸಾಯ ಪ್ರಾತ್ಯಕ್ಷಿಕೆ, ಡ್ರಂ ಸೀಡರ್ ಹಾಗೂ ಯಂತ್ರಚಾಲಿತ ನಾಟಿ ಪ್ರಾತ್ಯಕ್ಷಿಕೆ, ಭತ್ತದ ನೇರ ಬಿತ್ತನೆ ಪ್ರಾತ್ಯಕ್ಷಿಕೆ, ಸಿರಿಧಾನ್ಯ,ರಾಗಿ, ಸುಧಾರಿತ ಸಿರಿಧಾನ್ಯ ತಳಿಗಳ ಪ್ರಾತ್ಯಕ್ಷಿಕೆ ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ನೂತನ ರಾಗಿ ತಳಿಗಳ ಪ್ರಾತ್ಯಕ್ಷಿಕೆ, ಮುಸುಕಿನ ಜೋಳದ ಹೈಬ್ರಿಡ್ ತಳಿಗಳ ಪ್ರಾತ್ಯಕ್ಷಿಕೆ, ಮುಸುಕಿನ ಜೋಳದ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಸೇರಿದಂತೆ ವಿವಿಧ ನೀರು ನಿರ್ವಹಣಾ ತಂತ್ರಜ್ಞಾನದ ಪ್ರಾತ್ಯಕ್ಷಿಕೆಗಳು ರೈತರು ಹಾಗೂ ಸಾರ್ವಜನಿಕರ ಗಮನ ಸೆಳೆದವು.




