Saturday, May 18, 2024

ಪ್ರಾಯೋಗಿಕ ಆವೃತ್ತಿ

ಕೃಷಿ ಪದ್ಧತಿಗೆ ವಿಜ್ಞಾನ- ತಂತ್ರಜ್ಞಾನದ ಅವಶ್ಯಕತೆ ಇದೆ: ಚಲುವರಾಯಸ್ವಾಮಿ

ಬದಲಾದ ಹವಾಮಾನ ಪರಿಸ್ಥಿತಿಯಲ್ಲಿ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು  ಜ್ಞಾನ, ವಿಜ್ಞಾನ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ  ಮಹಾವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರ ವಿ.ಸಿ ಫಾರಂ ಮಂಡ್ಯ ಇವರ ವತಿಯಿಂದ ವಿ.ಸಿ ಫಾರಂನಲ್ಲಿ ನಡೆದ ಕೃಷಿಮೇಳ-2023 ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲಘಟ್ಟದಲ್ಲಿ ಪ್ರಕೃತಿ ನಮ್ಮ ಮೇಲೆ ಕರುಣೆ ತೋರಿಸಿ ಸರಿಯಾದ ಸಮಯಕ್ಕೆ ಮಳೆ-ಬೆಳೆ ಆಗುತ್ತಿತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಹವಾಮಾನ ವ್ಯವಸ್ಥೆ ಬದಲಾಗಿದೆ. ಸಂಶೋಧಕರು ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಬೆಳೆಯಬೇಕಿರುವ ತಳಿಗಳ ಬಗ್ಗೆ ಸಹ ಮಾಹಿತಿ ನೀಡುತ್ತಿದ್ದಾರೆ. ಕೃಷಿಯಲ್ಲಿ ಆಧುನಿಕ ಕೃಷಿ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಬೆಳೆದ ಬೆಳೆ ಕೈ ಸೇರಿ ರೈತರು ಆರ್ಥಿಕವಾಗಿ ಸದೃಢರಾಗುತ್ತಾರೆ ಎಂದು ಹೇಳಿದರು.

nudikarnataka.com

ಮಂಡ್ಯ ಜಿಲ್ಲೆ ಎಂದರೆ ರೈತರ ನಾಡು. ಆದರೆ ನಮ್ಮ ಜಿಲ್ಲೆಯ ರೈತರಿಗಿಂತ ಮಹಾರಾಷ್ಟ್ರ, ಬೆಳಗಾವಿ ಭಾಗದ ರೈತರೆ ಕೃಷಿಯಲ್ಲಿ ಹೆಚ್ಚಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುಂದಿದ್ದಾರೆ, ಬೆಳಗಾವಿ ಭಾಗದ ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ 1 ಎಕರೆಗೆ 120 ಟನ್ ಕಬ್ಬು  ಬೆಳೆಯುತ್ತಾರೆ. ಮಂಡ್ಯ ಜಿಲ್ಲಾ ಭಾಗದ ರೈತರು ಎಕರೆಗೆ 60-70 ಟನ್ ಅಷ್ಟೇ ಬೆಳೆಯುತ್ತಾರೆ. ಜಿಲ್ಲೆಯ ರೈತರು ಎಕರೆಗೆ ಹೆಚ್ಚು ಇಳುವರಿ ಗಳಿಸುವ ಸಂಶೋಧನೆ ಅಥವಾ ಪದ್ಧತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಬಲಾಢ್ಯರಾಗಬೇಕು ಎಂದು ಸಲಹೆ ನೀಡಿದರು.

ಕೃಷಿ ವಿ.ವಿ ಹಾಗೂ ಕೃಷಿ ಸಂಶೋಧಕರು ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಸಂಶೋಧನೆಗಳ ಫಲವನ್ನು ರೈತ ಸಮುದಾಯಕ್ಕೆ ತಲುಪಿಸುವ ಕೆಲಸ ಆಗಬೇಕು. ಜೊತೆಗೆ ರೈತರಿಗೆ ಮಾರ್ಗದರ್ಶನ ನೀಡಬೇಕು. ಈ ಸಂಬಂಧ ಕೃಷಿ ವಿ.ವಿ ಹಾಗೂ ಸಂಶೋಧಕರಿಗೆ ಸರ್ಕಾರದಿಂದ ನೆರವು ನೀಡಲಾಗುವುದು ಎಂದು ಹೇಳಿದರು.

ಕೃಷಿ ವಿ.ವಿ ಹಾಗೂ ಸಂಶೋಧಕರು ಮಂಡ್ಯ ಜಿಲ್ಲೆಯ ವಾತಾವರಣ, ನೀರು ಹಾಗೂ ಮಣ್ಣಿನ ಗುಣಮಟ್ಟದ ಅವಲೋಕನ ಮಾಡಿ. ರೈತರು ಕೃಷಿಯಲ್ಲಿ ಏನನ್ನು ಅಳವಡಿಸಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿ.  ರೈತರು ಬೆಳೆ ಬೆಳೆದು ನೆಮ್ಮದಿಯ ಜೀವನ ಮಾಡುವ ಸಲಹೆ ಕೊಡಬೇಕು. ನಮ್ಮ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲೂ  ಒಂದೊಂದು ಪದ್ದತಿ ಇದೆ. ಇದರ ಬಗ್ಗೆ ಅಧ್ಯಯನ ಮಾಡಿ ಸಂಶೋಧಕರು ತಿಳಿಸಬೇಕು ಎಂದರು.

ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಅವರು ಮಾತನಾಡಿ ಜಿಲ್ಲೆಯ ಒಟ್ಟಾರೆ ಭೂಭಾಗದಲ್ಲಿ ಶೇ. 45 ರಷ್ಟು ಭಾಗ ಮಳೆಯ ಆಶ್ರಿತ ಪ್ರದೇಶವಾಗಿದೆ. ಕಬ್ಬು, ಭತ್ತ, ರಾಗಿ, ಹುರುಳಿ ಧಾನ್ಯಗಳನ್ನು ಬೆಳೆಯುತ್ತಾರೆ. ಇತ್ತೀಚಿಗೆ ಅಡಿಕೆಯನ್ನು ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಕೃಷಿ ಇಲಾಖೆ ಹಾಗೂ ಕೃಷಿ ವಿವಿ ಗಳು ರೈತರಿಗೆ ನೆರವಾಗಬೇಕು. ಜೊತೆಗೆ ಯಾವ ಮಣ್ಣಿನಲ್ಲಿ ಯಾವ ಬೆಳೆದರೆ ಸೂಕ್ತ ಎಂದು ರೈತರಿಗೆ ಸಲಹೆ ನೀಡುವ ಕೆಲಸವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕೃಷಿ ವಿವಿ ಕುಲಪತಿಗಳಾದ ಡಾ.ಎಸ್.ವಿ ಸುರೇಶ್ ಜಿಲ್ಲಾಧಿಕಾರಿ ಡಾ.ಕುಮಾರ, ಕೃಷಿ ವಿವಿ ವ್ಯಾವಸ್ಥಾಪಕ ಮಂಡಳಿ ಸದಸ್ಯರಾದ ಬಿಎಸ್ ಉಲ್ಲಾಶ್, ಎನ್.ದಿನೇಶ್, ಡಾ.ಎಂ ಚಂದ್ರೇಗೌಡ, ಜಿಲ್ಲಾ ಪಂಚಾಯತ ಸಿಇಒ ಶೇಖ್ ತನ್ವೀರ್ ಆಸಿಫ್, ವಿ.ಸಿ ಫಾರಂನ ಡೀನ್ ಪ್ರಕಾಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!