Thursday, September 19, 2024

ಪ್ರಾಯೋಗಿಕ ಆವೃತ್ತಿ

ನೀರಿನ ಸಮಸ್ಯೆಗೆ ನದಿಗಳ ಜೋಡಣೆಯೊಂದೇ ಮಾರ್ಗೋಪಾಯ: ಕ್ಯಾ. ರಾಜಾರಾವ್

ಕಾವೇರಿ ನದಿ ನೀರಿನ ಸಮಸ್ಯೆ ಮಾತ್ರವಲ್ಲ, ದೇಶದ ಅಂತರ ರಾಜ್ಯ ನದಿ ನೀರಿನ ಸಮಸ್ಯೆಗೆ ನದಿಗಳ ಜೋಡಣೆಯೊಂದೇ ಭವಿಷ್ಯದ ಪರಿಹಾರದ ಮಾರ್ಗೋಪಾಯ ಆಗಿದೆ ಎಂದು ಜಲ ಸಂಪನ್ಮೂಲ ಇಲಾಖೆಯ ನಿವೃತ್ತ ಕಾರ್ಯದರ್ಶಿ ಕ್ಯಾ.ರಾಜಾರಾವ್ ಅಭಿಪ್ರಾಯಪಟ್ಟರು.

ಮಂಡ್ಯ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಸ್.ಬಿ.ಎಜುಕೇಷನ್ ಟ್ರಸ್ಟ್, ಮಾಂಡವ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ನಡೆದ ”ಕಾವೇರಿ: ಪ್ರಕೃತಿಯ ಪ್ರಸಾದ – ಮನುಷ್ಯರ ವಿವಾದ” ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಇನ್ನು ಮುಂದೆ ಕಾಲುವೆಗಳ ಮೂಲಕ ನೀರು ಹರಿಸುವಷ್ಟು ಸಂಪತ್ತನ್ನು ಪ್ರಕೃತಿ ಕರುಣಿಸುವುದಿಲ್ಲ. ಏನಿದ್ದರೂ ಪೈಪುಗಳ ಮೂಲಕವೇ ನೀರಾವರಿ ಮಾಡಬೇಕಾದ ಸನ್ನಿವೇಶ ಬಹಳ ದೂರವೇನೂ ಇಲ್ಲ. ಪ್ರತಿ ಬಾರಿ ಕಾವೇರಿ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ಸರ್ಕಾರ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗುವುದರಿಂದ ನಿರೀಕ್ಷಿತ ವೇಳೆಯಲ್ಲಿ ಪರಿಹಾರ ದೊರಕುವುದಿಲ್ಲ. ಆದ್ದರಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಯ ಪ್ರದತ್ತ ಅಧಿಕಾರದಲ್ಲಿ ವಿವಾದವನ್ನು ಏಕೆ ಬಗೆಹರಿಸಬಾರದು ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಈ ಬಗ್ಗೆ ಆದ್ಯ ಗಮನ ನೀಡಿ ಪ್ರಯತ್ನಿಸಿದರೆ ಸಂಕಷ್ಟ ಕಾಲದಲ್ಲಿ ಕಾವೇರಿ ಸಮಸ್ಯೆಯನ್ನು ಬಗೆಹರಿಸಿ ಎರಡೂ ರಾಜ್ಯಗಳ ರೈತರಿಗೆ ಅನುಕೂಲ ಮಾಡಿಕೊಡಬಹುದು ಎಂದರು.

ನಮ್ಮ ರಾಜ್ಯದಲ್ಲೇ ಬೀಳುವ ಸರಾಸರಿ 2 ಸಾವಿರ ಟಿಎಂಸಿ ನೀರು ವ್ಯರ್ಥವಾಗಿ ಹರಿದು ಬಂಗಾಳಕೊಲ್ಲಿ ಸೇರುತ್ತದೆ. ಇದನ್ನು ಹಿಡಿದಿಟ್ಟುಕೊಂಡು ಬಳಸಿಕೊಳ್ಳುವ ಸಾಮರ್ಥ್ಯ ತಮಿಳುನಾಡಿನಲ್ಲಿ ಇಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ತಮಿಳುನಾಡಿಗೆ ಯಾವುದೇ ನಿರ್ದೇಶನ ನೀಡದಿರುವುದು ದುರ್ದೈವ. ಮುಂದೆ ಕಾವೇರಿ ನದಿ ನೀರಿನ 2ನೇ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದರೆ ಉಳಿದ ಶೇ. 50ರಷ್ಟು ನೀರನ್ನು ಹಂಚಿಕೆ ಮಾಡಬೇಕಾದ ಅನಿವಾರ‍್ಯತೆ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ಮಾತನಾಡಿ, ತಮಿಳುನಾಡಿಗೆ ಕಳೆದ ವರ್ಷ 177 ಟಿಎಂಸಿ ನೀರು ಬಿಡಬೇಕಿತ್ತು, ಆದರೆ ಹೆಚ್ಚು ಮಳೆ ಬಂದು 660 ಟಿಎಂಸಿ ನೀರು ಹರಿದು ಹೋಗಿದೆ. ಇದನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ತಮಿಳು ನಾಡು ರೂಪಿಸಿಕೊಂಡಿಲ್ಲ ಎಂದು ದೂರಿದರು.

ಆಧುನಿಕ ತಾಂತ್ರಿಕತೆ ನದಿ ನೀರಿನ ಪ್ರಮಾಣವನ್ನು ಕುಳಿತಲ್ಲೇ ದೊರಕಿಸುವಂತಹ ಎಲ್ಲ ನೈಪುಣ್ಯವನ್ನು ಹೊಂದಿದ್ದು, ಇದರ ಸದ್ಬಳಕೆಯಿಂದ ನಮಗೆ ಲಭ್ಯವಾಗುವ ನೀರಿನ ಪ್ರಮಾಣವನ್ನು ಮೊದಲೇ ಪಡೆದುಕೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯಿಸಿದರು.

ಪ್ರಕೃತಿಯಲ್ಲಿ ಮಳೆ ನೀರು ವಾಡಿಕೆಯಷ್ಟೇ ಬೀಳುತ್ತದೆ. ಆದರೆ, ಜನಸಂಖ್ಯೆ ಹೆಚ್ಚಾದ ಪರಿಣಾಮ ನೀರಿನ ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ ಕುಡಿಯಲು ಕೃಷಿಗೆ, ಕೈಗಾರಿಕೆಗಳು ಸೇರಿದಂತೆ ಬಳಕೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಬೆಂಗಳೂರು ನಗರಕ್ಕೆ ಮಾತ್ರವೇ 60 ಟಿಎಂಸಿ ನೀರು ಕೊಡಿ ಎಂಬ ಬೇಡಿಕೆ ಬಂದಿದೆ. ಕೆ.ಆರ್.ಎಸ್. ಅಣೆಕಟ್ಟೆ ಸೇರಿದಂತೆ ಕಾವೇರಿ ಕೊಳ್ಳದಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣಕ್ಕೂ, ನೀರಿನ ಬೇಡಿಕೆಗೂ ಅಜಗಜಾಂತರ ವ್ಯತ್ಯಾಸವಾಗುತ್ತಿದೆ. ಪರಿಣಾಮ ವ್ಯವಸಾಯದಲ್ಲಿ ಬಳಸುತ್ತಿರುವ ನೀರಿನ ಪ್ರಮಾಣದಲ್ಲಿ ಶೇ. 10 ರಷ್ಟು ಉಳಿಸಿ ಕುಡಿಯುವ ನೀರಿಗೆ ದೊರಕಿಸಬೇಕಾದ ಸನ್ನಿವೇಶ ಎದುರಾಗಿದೆ. ಹೀಗಾಗಿ ಪ್ರಸ್ತುತ ಹನಿ ನೀರಾವರಿ ಹಳೇ ಪದ್ಧತಿಯಾಗಿದ್ದು, ಬಿಂದು ನೀರಾವರಿ ಪದ್ಧತಿ ಬರುತ್ತಿದೆ. ಇದು ನಮ್ಮ ದೇಶಕ್ಕೆ ಹೊಸದು. ಇಸ್ರೇಲ್ ದೇಶಕ್ಕೆ ಹಳೆಯದ್ದು ಎಂದು ವಿವರಿಸಿದರು.

ವಿಶ್ರಾಂತ ಪ್ರಾಂಶುಪಾಲ ಪ್ರೊ. ಎಂ.ಕೃಷ್ಣೇಗೌಡ ಪ್ರಾಸ್ತಾವಿಕ ನುಡಿ ನುಡಿದರು. ನಿವೃತ್ತ ಕುಲಪತಿ ಡಾ. ಚಂದ್ರಶೇಖರ್, ಜಲಸಂಪನ್ಮೂಲ ತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್, ರೈತ ಹೋರಾಟಗಾರ್ತಿ ಸುನಂದಾ ಜಯರಾಂ, ಪ್ರೊ. ಕೆ.ಸಿ. ಬಸವರಾಜು, ಡಾ. ಪಿ.ಎಸ್. ರಾವ್, ನಿವೃತ್ತ ಮುಖ್ಯ ಅಭಿಯಂತರ ರವಿಶಂಕರ್ ದೋಂತಿ, ಪ್ರಾಧ್ಯಾಪಕರಾದ ಪುಷ್ಪ ತುಪ್ಪದ್, ಶ್ಯಾಂಪ್ರಸಾದ್, ಎಸ್.ಬಿ. ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಡಾ. ಕೆ.ಸಿ. ಜಯರಾಂ, ಡಾ. ಎ. ಜಯರಾಂ, ಕೆ.ಸಿ. ಭವಾನಿ ಶಂಕರ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!