Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರಸ್ತುತ ಪರಿಸರ ಮಾಲಿನ್ಯ ತಡೆಗೆ ಪ್ರಾಮುಖ್ಯತೆ ಕೊಡುತ್ತಿಲ್ಲ: ಎಸ್.ಎಂ ಕೃಷ್ಣ

ಅತ್ಯಂತ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ಪರಿಸರ ಮಾಲಿನ್ಯ ತಡೆಗೆ ಸಮಾಜ ಕೊಡಬೇಕಾದಷ್ಟು ಪ್ರಾಮುಖ್ಯತೆಯನ್ನು ಕೊಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಪದ್ಮವಿಭೂಷಣ ಎಸ್.ಎಂ.ಕೃಷ್ಣ ಕಳವಳ ವ್ಯಕ್ತಪಡಿಸಿದರು.

ಮಂಡ್ಯ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಶಿವಲಿಂಗಯ್ಯ ಅಭಿನಂದನಾ ಸಮಿತಿ ಆಯೋಜಿಸಿದ್ದ ಡಾ.ಬಿ.ಶಿವಲಿಂಗಯ್ಯ ಗೌರವ ಗ್ರಂಥ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು.

ಇತ್ತೀಚೆಗೆ ನೈಸರ್ಗಿಕವಾಗಿ ಹಲವು ಬದಲಾವಣೆಗಳು ತೀವ್ರ ಗತಿಯಲ್ಲಿ ನಡೆದಿವೆ. ಅಕಾಲಿಕ ಮಳೆ, ಬರ, ಪ್ರವಾಹ ಮುಂತಾದ ವೈರುಧ್ಯಗಳನ್ನು ಕಾಣುತ್ತಿದ್ದೇವೆ. ಇದೆಲ್ಲಕ್ಕೂ ಪ್ರಮುಖ ಕಾರಣವೆಂದರೆ ನಾವು ಪ್ರಕೃತಿಯನ್ನು ನಿರ್ಲಕ್ಷಿಸಿರುವುದು ಸರಿಯಲ್ಲ ಎಂದರು.

ಡಾ.ಬಿ.ಶಿವಲಿಂಗಯ್ಯ ಅವರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರಾಗಿ ಬರುವವರೆಗೂ ಯಾರಿಗೂ ಅಷ್ಟಾಗಿ ಈ ನಿಯಂತ್ರಣ ಮಂಡಳಿಯ ಚಟುವಟಿಕೆ ಏನೆಂಬುದೇ ತಿಳಿದಿರಲಿಲ್ಲ. ಗ್ರಾಮೀಣ ಪ್ರದೇಶವಿರಲಿ, ನಗರ ಪ್ರದೇಶದಲ್ಲೂ ಕೂಡ ಮಾಲಿನ್ಯ ನಿಯಂತ್ರಣದ ಜಾಗೃತಿಯೇ ಮೂಡಿರಲಿಲ್ಲ ಎಂದು ಸ್ಮರಿಸಿದರು.

ಬಿ.ಶಿವಲಿಂಗಯ್ಯ ಅವರು ಮಾಲಿನ್ಯ ನಿಯಂತ್ರಣದ ಅಗತ್ಯತೆ ಕುರಿತು ಗಮನ ಸೆಳೆದರು. ನಮ್ಮ ಪರಿಸರದ ಮೇಲೆ ಆಗುತ್ತಿರುವ ಆಘಾತ ಮತ್ತು ಒತ್ತಡವನ್ನು ನಾವುಗಳ್ಯಾರೂ ಗಮನಿಸುತ್ತಿಲ್ಲ. ನಮ್ಮ ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆ ತರದ ಹೊರತು ಪರಿಸರವನ್ನು ನೈಸರ್ಗಿಕವಾಗಿ ಬೆಳೆಸಲು ಸಾಧ್ಯವಾಗದು. ಪರಿಸರವನ್ನು ಹೀಗೇ ನಿರ್ಲಕ್ಷಿಸಿದರೆ ಮುಂದೆ ದೊಡ್ಡ ಅನಾಹುತ ಸಂಭವಿಸಬಹುದು. ಹಾಗೆ ಆಗದ ರೀತಿಯಲ್ಲಿ ನಾವು ಪ್ರಕೃತಿಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಈ ಹಿನ್ನೆಲೆಯಲ್ಲಿ ಡಾ.ಶಿವಲಿಂಗಯ್ಯ ಅವರು ಮಾಡಿರುವ ಪ್ರಾಮಾಣಿಕ ಕೆಲಸ ಮತ್ತು ಸಾಧನೆಗಳು ಹಾಗೂ ಜಾಗೃತಿ ಕಾರ್ಯಕ್ರಮಗಳು ಅವರನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿದೆ, ಅವರನ್ನು ಗೌರವಿಸುವಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ‘ಹೃದಯಿ ಶಿವ’ ಗೌರವ ಗ್ರಂಥ ಕುರಿತು ಮಾತನಾಡಿದ ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅವರು, ಮಂಡ್ಯದ ಕ್ರಿಯಾಜ್ಞಾನಕ್ಕೆ ಬಿ.ಶಿವಲಿಂಗಯ್ಯ ಅವರು ನಿದರ್ಶನ. ಸಮಾಜಕ್ಕೆ ಅವರು ನೀಡಿರುವ ಕೊಡುಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿದೆ. ಅವರು ರಚಿಸಿರುವ `ಕಾವೇರಿ ಪ್ರಕೃತಿಯ ಪ್ರಸಾದ-ಮನುಷ್ಯರ ವಿವಾದ’ ಓದುಗರಿಗೆ ಅನೇಕ ಮಾಹಿತಿಗಳನ್ನು ನೀಡುತ್ತವಲ್ಲದೆ, ಜ್ಞಾನದ ಕಣಜವಾಗಿ ಕಂಡುಬರುತ್ತದೆಂದು ಬಣ್ಣಿಸಿದರು.

ಮಳೆ ನೀರಿನಿಂದ ಉಂಟಾಗುವ ಪ್ರವಾಹ ನಿರ್ವಹಣೆ ಹೇಗೆ ಎಂಬ ಕುರಿತು ಡಾ.ಬಿ.ಶಿವಲಿಂಗಯ್ಯ ಅವರು 1980ರಲ್ಲೇ ಕೆನಡಾದಲ್ಲಿ ಪ್ರಬಂಧ ಮಂಡಿಸಿದ್ದರು ಎಂಬುದು ಎಲ್ಲರಿಗೂ ಅಚ್ಚರಿಯ ಸಂಗತಿ. ಇಂದು ಬೆಂಗಳೂರು, ಚೈನ್ಯ ನಂತಹ ನಗರಗಳಲ್ಲಿ ಮಳೆ ನೀರಿನ ಪ್ರವಾಹ ಜನಜೀವನವನ್ನೇ ಸ್ತಬ್ಧಗೊಳಿಸುತ್ತಿವೆ. ಈಗ ಸರ್ಕಾರಗಳು ಇದರ ನಿರ್ವಹಣೆ ಹೇಗೆ ಎಂದು ತಲೆಕೆಡಿಸಿಕೊಂಡಿದ್ದರೆ, ಶಿವಲಿಂಗಯ್ಯ ಅವರು 40 ವರ್ಷಗಳ ಹಿಂದೆಯೇ ಆ ಬಗ್ಗೆ ಅಧ್ಯಯನ ನಡೆಸಿದ್ದರೆಂದರೆ ಅವರ ಕ್ರಿಯಾಶಕ್ತಿಯನ್ನು ನಾವು ಅರಿಯಬಹುದು. ಹಾಗಾಗಿ ಅವರಿಗೆ ಸಾಕಷ್ಟು ಅವಕಾಶಗಳು ಸಿಗಬೇಕಿತ್ತು. ಎಸ್.ಎಂ.ಕೃಷ್ಣ ಅವರಿಗೇ ಪ್ರಧಾನಮಂತ್ರಿಯಾಗುವ ಅವಕಾಶ ಬಂದಿತ್ತು. ಆದರೆ ಕೈ ತಪ್ಪಿತಲ್ಲ. ಹಾಗೆ ಶಿವಲಿಂಗಯ್ಯ ಅವರಿಗೂ ಅವಕಾಶಗಳು ಕೈತಪ್ಪಿವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯವಹಿಸಿದ್ದರು, ಪ್ರಧಾನ ಕಾರ್ಯದರ್ಶಿ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ವಿಧಾನಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪಿ.ರವಿಕುಮಾರಗೌಡ ಗಣಿಗ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಎಸ್‌ಬಿಇಟಿ ಕಾರ್ಯದರ್ಶಿ ಮೀರಾಶಿವಲಿಂಗಯ್ಯ, ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ರಾಮಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಗಣ್ಯರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ವೇದಿಕೆಯಲ್ಲಿ ಡಾ.ಬಿ.ಶಿವಲಿಂಗಯ್ಯ ಅವರು ಬೆಳೆದುಬಂದ ಹಾದಿ, ಸಾಧನೆಗಳು ಮತ್ತು ಸಂದ ಗೌರವಗಳ ಕುರಿತು ಕಿರುಚಿತ್ರ ಪ್ರದರ್ಶನ ನಡೆಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!