Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಲೋಕಸಭೆಗೆ ನಿಖಿಲ್ ಸ್ಪರ್ಧಿಸುವುದಿಲ್ಲ: ಹೆಚ್.ಡಿ.ಕುಮಾರಸ್ವಾಮಿ

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ಜೆಡಿಎಸ್ ಹಾಗೂ ಬಿಜೆಪಿ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿದೆ. ಈ ನಡುವೆ ಸೀಟು ಹಂಚಿಕೆಯ ವಿಚಾರವು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಅದರಲ್ಲೂ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರ ಬದಲಿಗೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಸೀಟು ಸಿಗಲಿದೆ ಎಂಬ ಚರ್ಚೆಗಳು ನಡೆಯುತ್ತಿದ್ದವು. ಆದರೆ ಈ ಎಲ್ಲ ಊಹಾಪೋಹಗಳಿಗೆ ಹೆಚ್‌ ಡಿ ಕುಮಾರಸ್ವಾಮಿ ಇಂದು ತೆರೆ ಎಳೆದಿದ್ದಾರೆ.

ದೆಹಲಿಯಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜೆಡಿಎಸ್ ವರಿಷ್ಠ ಹೆಚ್‌ ಡಿ ದೇವೇಗೌಡ ಕುಟುಂಬ ಭೇಟಿ ಮಾಡಿ, ಮಾತುಕತೆ ನಡೆಸಿದೆ. ಈ ಭೇಟಿಯ ವೇಳೆ ಹೆಚ್‌ ಡಿ ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ, ಸಂಸದ ಪ್ರಜ್ವಲ್‌ ರೇವಣ್ಣ, ಶಾಸಕ ಸಿ.ಎನ್.‌ಬಾಲಕೃಷ್ಣ, ಮಾಜಿ ಸಂಸದ ಕುಪೇಂದ್ರ ರೆಡ್ಡಿ ಜತೆಯಲ್ಲಿದ್ದರು.

ಪ್ರಧಾನಿ ನರೇಂದ್ರ ಮೋದಿ ಭೇಟಿಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ, “ನಿಖಿಲ್ ಕುಮಾರಸ್ವಾಮಿ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧೆ ಮಾಡುವುದಿಲ್ಲ. ಆದರೆ, 28 ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಸ್ಪರ್ಧೆ ಮಾಡಲ್ಲ ಎಂದು ನಿಖಿಲ್ ಅವರೇ ಸ್ಪಷ್ಟಪಡಿಸಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ. ಆ ಮೂಲಕ ಮತ್ತೆ ಮಂಡ್ಯದಿಂದ ಸುಮಲತಾ ಅಂಬರೀಶ್ ಅವರೇ ಬಿಜೆಪಿಯ ಅಭ್ಯರ್ಥಿ ಆಗುವ ಎಲ್ಲ ಸಾಧ್ಯತೆಗಳಿವೆ.

“>

“ನನ್ನ ಮೇಲಿನ ಅಭಿಮಾನದಿಂದ ಕೆಲವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ನಮ್ಮ ಪಕ್ಷ ಮತ್ತು ಬಿಜೆಪಿಯಲ್ಲಿ ಕೆಲವರು ಅಭಿಪ್ರಾಯ ತಿಳಿಸುತ್ತಿದ್ದಾರೆ. ಮೋದಿಯವರ ನೇತೃತ್ವದಲ್ಲಿ ಮತ್ತೆ ಕೇಂದ್ರದಲ್ಲಿ ಸರ್ಕಾರ ಬಂದು, ನಾನು ಮಂತ್ರಿಯಾದರೆ ರಾಜ್ಯಕ್ಕೆ ಆದ್ಯತೆ ಸಿಗಬಹುದು ಎಂಬುದು ಅವರ ಅಭಿಪ್ರಾಯವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ತುದಿಗಾಲಲ್ಲಿ‌ ನಿಂತಿಲ್ಲ. ಆ ಬಗ್ಗೆ ತೀರ್ಮಾನವೂ ಮಾಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನನ್ನ ಆದ್ಯತೆ ಕರ್ನಾಟಕದ ರಾಜಕಾರಣವಾಗಿದೆ” ಎಂದು ಇದೇ ವೇಳೆ ಹೆಚ್‌ಡಿಕೆ ತಿಳಿಸಿದ್ದಾರೆ.

“ಸೀಟು ಹಂಚಿಕೆಯಲ್ಲಿ ಕೂಡ ಯಾವುದೇ ರೀತಿಯ ಸಮಸ್ಯೆ ಇಲ್ಲ. ಯಾವ ಕ್ಷೇತ್ರದಲ್ಲಿ ಯಾರು ನಿಲ್ಲಬೇಕು ಎಂಬ ಬಗ್ಗೆ ಅಂತಿಮ ನಿರ್ಣಯ ಮಾಡುತ್ತೇವೆ. ಎರಡು ಪಕ್ಷಗಳ ನಡುವೆ ವಿಶ್ವಾಸ ಮೂಡಬೇಕು. ಅದಕ್ಕೆ ನಾನು ಆದ್ಯತೆ ನೀಡುತ್ತಿದ್ದೇನೆ. ಸೀಟು ಹಂಚಿಕೆ ಆಮೇಲೆ ಆಗುತ್ತದೆ. ಜನವರಿ ಅಂತ್ಯದೊಳಗೆ ಎರಡೂ ಪಕ್ಷಗಳು ರಾಜ್ಯದ ಕಾಂಗ್ರೆಸ್‌ ಸರ್ಕಾರ ನಡೆಸುತ್ತಿರುವ ಲೂಟಿಗಳ ಬಗ್ಗೆ ಒಗ್ಗಟ್ಟಿನಿಂದ ಬಿಜೆಪಿ-ಜೆಡಿಎಸ್ ಕಾರ್ಯತಂತ್ರ ರೂಪಿಸಲಿದೆ” ಎಂದು ತಿಳಿಸಿದರು.

“ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಬಗ್ಗೆ ಯಾರಿಗೂ ಅಸಮಾಧಾನ ಇಲ್ಲ. ಬಿಜೆಪಿಯಲ್ಲಿ ಸಣ್ಣಪುಟ್ಟ ಸಮಸ್ಯೆ ಇರಬಹುದು. ದೆಹಲಿ ಮತ್ತು ರಾಜ್ಯ ನಾಯಕರಿಗೆ ಇದನ್ನು‌ ನಿಭಾಯಿಸುವ ಸಾಮರ್ಥ್ಯ ಇದೆ. ಚುನಾವಣೆ ಮೇಲೆ ಇದು ಪರಿಣಾಮ ಬೀರಲ್ಲ. ಇಂದು ಅಥವಾ ನಾಳೆ‌ ಅಮಿತ್ ಶಾ ಮತ್ತು ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದೇನೆ” ಎಂದು ದೆಹಲಿ ಪ್ರವಾಸದಲ್ಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!