ಮಳವಳ್ಳಿ ತಾಲ್ಲೂಕಿನಲ್ಲಿ ನಡೆದಿರುವ ಅಕ್ರಮ ಭೂ ಕಬಳಿಕೆ ವಿರುದ್ದ ಶಾಸಕ ನರೇಂದ್ರಸ್ವಾಮಿ ಅವರು ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ, ಈಗಾಗಲೇ ಅಕ್ರಮವಾಗಿ ಸರ್ಕಾರಿ ಭೂಮಿ ಪರಭಾರೆಯಾಗಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಇದರಲ್ಲಿ ಯಾವುದೇ ಪಕ್ಷ ಮುಖಂಡರಾಗಲಿ ಅಥವಾ ಪ್ರಬಲ ವ್ಯಕ್ತಿ ಭಾಗಿಯಾಗಿದ್ದರೂ ಶಿಕ್ಷೆಯಾಗಲಿದೆ, ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ ದೇವರಾಜು ತಿಳಿಸಿದರು.
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕರು ಸುದ್ದಿಗೋಷ್ಠಿಯಲ್ಲಿ ಶಾಸಕರ ಎಡ ಬಲ ಇದ್ದವರಿಗೆ ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಖಾತೆ ಮಾಡಲಾಗಿದೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾಗಿದ್ದು, ಮಾಜಿ ಶಾಸಕರ ಎಡಬಲದ ಮುಖಂಡರು ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಖಾತೆ ಮಾಡಿಸಿಕೊಂಡಿದ್ದಾರೆಂದು ಆರೋಪಿಸಿದರು.
ಚೊಟ್ಟನಹಳ್ಳಿ ವ್ಯಾಪ್ತಿಯ ಸರ್ವೆ ನಂ 103ರಲ್ಲಿ 24 ಎಕರೆ ಸರ್ಕಾರಿ ಭೂಮಿಯನ್ನು 5 ಮಂದಿಗೆ ತಲಾ 4 ಎಕರೆಯಂತೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿರುವ ಮಾಹಿತಿ ಸಿಕ್ಕಿದ ಕೂಡಲೇ ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರು, ಸದನಕ್ಕೆ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಅಲ್ಲದೇ ಕೂಡಲೇ ಅಕ್ರಮವೆಸಗಿದ್ದ ಅಧಿಕಾರಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಅಮಾನತುಗೊಳಿಸಿದ್ದಾರೆ. ಜೊತೆಗೆ ಪ್ರಕಾಶ್ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ, ಯಾರೇ ಅಧಿಕಾರಿ ತಪ್ಪು ಮಾಡಿದರೂ ಅವರ ವಿರುದ್ದ ಶಾಸಕರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಜೆಡಿಎಸ್ ಪಕ್ಷದ ಮಳವಳ್ಳಿ ಪಟ್ಟಣದ ಪ್ರಬಲ ಮುಖಂಡರೊಬ್ಬರು ಸೇರಿದಂತೆ ಮಾಜಿ ಶಾಸಕರ ಹಿಂಬಾಲಕರಿಗೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿ ಖಾತೆ ಮಾಡಿರುವ ಭೂಮಿ ಶಾಖೆಯ ರಾಜಸ್ವ ನಿರೀಕ್ಷಕರಾಗಿದ್ದ ಪ್ರಕಾಶ್ ಅವರನ್ನು ಈಗಾಗಲೇ ಅಮಾನತುಗೊಳಿಸಿದ್ದು, ಅಕ್ರಮ ಪರಭಾರೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಕ್ಕೆ ಶಾಸಕ ಪಿಎಂ ನರೇಂದ್ರಸ್ವಾಮಿ ಕ್ರಮ ಕೈಗೊಳ್ಳಲಿದ್ದಾರೆ ಅಕ್ರಮ ಭೂ ಕಬಳಿಕೆಗೆ ಸಹಕರಿಸಿದ ಮತ್ತೊಬ್ಬ ತಾಲ್ಲೂಕು ಕಚೇರಿಯ ಸಿಬ್ಬಂದಿಯನ್ನು ಅಮಾನತುಗೊಳ್ಳಲಿದ್ದಾರೆ, ಅಕ್ರಮವಾಗಿ ಭೂ ಕಬಳಿಕೆಯ ಬಗ್ಗೆ ಸಮಗ್ರವಾಗಿ ತನಿಖೆಯಾಗಲಿ ಎನ್ನುವುದು ಶಾಸಕರ ಒತ್ತಾಯವು ಆಗಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಮಲ್ಲಯ್ಯ, ಜಿ.ಪಂ. ಮಾಜಿ ಸದಸ್ಯ ಆರ್.ಎನ್ ವಿಶ್ವಾಸ್, ತಾ. ಪಂ. ಮಾಜಿ ಅಧ್ಯಕ್ಷ ಚಿಕ್ಕಲಿಂಗಯ್ಯ, ಪ್ರಭುಲಿಂಗು, ಪುಟ್ಟಸ್ವಾಮಿ, ಪ್ರಕಾಶ್, ಕೆಪಿಸಿಸಿ ಸದಸ್ಯ ಸಿದ್ದೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಷ್, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಮುಖಂಡರಾದ ಬಂಕ್ ಮಹದೇವು, ಶಿವಮಾದೇಗೌಡ, ಪ್ರಕಾಶ್, ರವೀಂದ್ರ, ಹುಸ್ಕೂರು ಕೃಷ್ಣಮೂರ್ತಿ, ಸಿ.ಪಿ ರಾಜು, ಕಿರಣ್ಶಂಕರ್, ಲಿಂಗರಾಜು, ಸೆಪಿವುಲ್ಲಾ, ದಿಲೀಪ್, ಅಯೂಬ್ ಪಾಷಾ.ದೊರೇಸ್ವಾಮಿ, ಶಿವಕುಮಾರ್, ಬಸಪ್ಪ, ದಯಾಶಂಕರ್ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.




