Friday, September 20, 2024

ಪ್ರಾಯೋಗಿಕ ಆವೃತ್ತಿ

ಮಗಳ ನೆನಪಲ್ಲಿ ರೌಗೌ ಪ್ರಶಸ್ತಿ ಪ್ರದಾನ ಶ್ಲಾಘನೀಯ: ಪದ್ಮಾಶೇಖರ್

ಸಾಹಿತಿ ರಾಗೌ ಅವರು ತಮ್ಮ ಮಗಳ ನೆನಪಲ್ಲಿ ಪ್ರಶಸ್ತಿ ನೀಡುವ ಮೂಲಕ ಸಾಹಿತ್ಯ ಕ್ಷೇತ್ರ ಬೆಳೆಸಲು ಹಾಗೂ ಮಗಳ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಸಾಗುತ್ತಿರುವುದು ಮೆಚ್ಚುವ ಕೆಲಸ ಎಂದು ವಿಶ್ರಾಂತ ಕುಲಪತಿ ಪದ್ಮಾ ಶೇಖರ್ ಶ್ಲಾಘಿಸಿದರು.

ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕವಿತಾ ಸ್ಮಾರಕ ಉಪನ್ಯಾಸ-14, ಕವಿತಾ ಸ್ಮಾರಕ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಅಪಾರವಾಗಿ ಪ್ರೀತಿಸುತ್ತಿದ್ದ ಮಗಳನ್ನು ರಾಗೌ ಅವರು ಕಳೆದುಕೊಳ್ಳುತ್ತಾರೆ. ಇದರ ಬೆನ್ನಲ್ಲೇ ಮಗನನ್ನೂ ಕಳೆದುಕೊಳ್ಳುತ್ತಾರೆ. ಅವರು ಯಾವ ರೀತಿ ಸಂಕಟವನ್ನು ನುಂಗಿದ್ದಾರೋ ಗೊತ್ತಿಲ್ಲ. ನಂಜುಂಡನ ರೀತಿ ನೋವು ನುಂಗಿರುವ ರಾಗೌ ಎಲ್ಲರಿಗೂ ಮಾದರಿಯಾಗಿದ್ದಾರೆ. ಕವಿತಾ ಎಂಬ ಮುದ್ದು ಮಗಳ ಹೆಸರಿನಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವುದು ಶ್ಲಾಘನೀಯವಾದದು’ ಎಂದು ತಿಳಿಸಿದರು.

ಕವಿತಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೆಂ. ವನಜಾ ‘ಹೆಣ್ಣು ಬ್ರೂಣ ಹತ್ಯೆ ನಿಲ್ಲಬೇಕು. ಹೆಣ್ಣು ಮಕ್ಕಳನ್ನು ಕಡೆಗಣಿಸುವುದು ಸಮಾಜದಲ್ಲಿ ನಿಲ್ಲಬೇಕು, ಮೊದಲು ಮನೆಯಲ್ಲಿಯೇ ಹೆಣ್ಣು ಬೇಕೆಂಬ ಹಟಕ್ಕಾದರೂ ಬೀಳುವ ಮನಸ್ಥಿತಿ ಹೆಣ್ಣಾದವಳಿಗೆ ಮೊದಲು ಬಂದರೆ ಮಾತ್ರ ಸಮಾಜದಲ್ಲಿ ಸ್ವಲ್ಪ ಸುಧಾರಣೆ ಆಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಅನುಸೂಯ ಹೊಂಬಾಳೆ ಕವಿತಾ ಸ್ಮಾರಕ ದತ್ತಿ ಉಪನ್ಯಾಸ ನೀಡಿದರು. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ವಿ.ಡಿ. ಸುವರ್ಣ, ಸಾಹಿತಿ ರಾಗೌ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ, ಸಹಾಯಕ ಪ್ರಾಧ್ಯಾಪಕಿ ಎಂ. ಕೆಂಪಮ್ಮ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!