Friday, September 20, 2024

ಪ್ರಾಯೋಗಿಕ ಆವೃತ್ತಿ

ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಷಡ್ಯಂತ್ರ ನಡೆಸಿದೆ: ಡಿ ಕೆ ಶಿವಕುಮಾರ್

“ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸಿಬಿಐ ತನಿಖೆ ಅನುಮತಿಯನ್ನು ಹಿಂಪಡೆದಿದ್ದರೂ ನನಗೆ ಕಿರುಕುಳ ಮುಂದುವರಿಸಲಾಗಿದೆ. ರಾಜಕೀಯವಾಗಿ ನನ್ನನ್ನು ಮುಗಿಸಲು ಬಿಜೆಪಿ ನಾಯಕರಿಂದ ದೊಡ್ಡ ಷಡ್ಯಂತ್ರ ನಡೆಯುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕೇರಳ ಮೂಲದ ಜೈಹಿಂದ್ ಚಾನೆಲ್ ಎಂಡಿ ಹಾಗೂ ತಮಗೆ ಸಿಬಿಐ ನೋಟಿಸ್ ಜಾರಿ ಮಾಡಿರುವ ಬಗ್ಗೆ ಮಾಧ್ಯಮಗಳು ಸದಾಶಿವನಗರ ನಿವಾಸದ ಬಳಿ ಸೋಮವಾರ ಪ್ರಶ್ನಿಸಿದಾಗ ಅವರು ಉತ್ತರಿಸಿದರು.

“ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದ ನಂತರವೂ ಸಿಬಿಐನವರು ಸಬ್ ರಿಜಿಸ್ಟ್ರಾರ್ ಕಚೇರಿ, ಸರ್ಕಾರಿ ಕಚೇರಿ, ಸಹಕಾರಿ ಸೊಸೈಟಿ, ನಾನು ಅಧ್ಯಕ್ಷನಾಗಿರುವ ಸಂಸ್ಥೆ, ಸೇರಿದಂತೆ ಅನೇಕರಿಗೆ ನೋಟಿಸ್ ಕೊಟ್ಟಿದ್ದಾರೆ. ಯಾವ ಲೆಕ್ಕಾಚಾರದ ಮೇಲೆ ಈ ನೋಟಿಸ್ ಕೊಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಅವರ ಉದ್ದೇಶ ಏನು ಎಂಬುದು ಗೊತ್ತಿಲ್ಲ. ಆದರೆ ಮೇಲ್ನೋಟಕ್ಕೆ ಅವರು ನನಗೆ ಹಾಗೂ ಪಕ್ಷಕ್ಕೆ ತೊಂದರೆ ನೀಡಲು ದೊಡ್ಡ ಷಡ್ಯಂತ್ರ ರೂಪಿಸುತ್ತಿದ್ದಾರೆ.

ಸಿಬಿಐ ತನಿಖೆಯನ್ನು ರಾಜ್ಯ ಸರ್ಕಾರ ಲೋಕಾಯುಕ್ತಕ್ಕೆ ಹಸ್ತಾಂತರ ಮಾಡಿದೆ. ಸಿಬಿಐಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಹೈಕೋರ್ಟ್ ಒಪ್ಪಿದ್ದರೂ ಸಿಬಿಐ ಯಾಕೆ ನೋಟಿಸ್ ನೀಡುತ್ತಿದೆ ಎಂಬುದು ಗೊತ್ತಿಲ್ಲ. ಅವರ ಬಳಿ ನನ್ನ ಎಲ್ಲಾ ದಾಖಲೆಗಳು ಇವೆ. ಲೋಕಾಯುಕ್ತಕ್ಕೆ ಪ್ರಕರಣ ಹಸ್ತಾಂತರವಾಗಿರುವ ಹಿನ್ನೆಲೆಯಲ್ಲಿ ಈ ಎಲ್ಲ ದಾಖಲೆಗಳನ್ನು ಸಿಬಿಐ, ಲೋಕಾಯುಕ್ತಕ್ಕೆ ನೀಡಬೇಕಿದೆ ಎಂಬುದು ನನಗಿರುವ ಕಾನೂನಿನ ಅರಿವು.

“ನನ್ನ ಸಂಸ್ಥೆ, ನನ್ನ ಹೆಂಡತಿ, ಮಕ್ಕಳು, ಕುಟುಂಬ ಸದಸ್ಯರು, ನನ್ನ ಸ್ನೇಹಿತರು ಸೇರಿದಂತೆ ಹಲವರಿಂದ ಮಾಹಿತಿ ಕೇಳುತ್ತಿದ್ದಾರೆ. ಮೊದಲು ಈ ರೀತಿ ಮಾಡಿ ನಂತರ ಅವರು ನನಗೆ ನೇರವಾಗಿ ನೋಟಿಸ್ ನೀಡುತ್ತಾರೆ. ಅವರು ಏನು ಬೇಕಾದರೂ ಮಾಡಲಿ. ನನ್ನನ್ನು ಜೈಲಿಗೆ ಕಳಿಸುವ ಬಗ್ಗೆ ಅನೇಕ ಬಿಜೆಪಿ ನಾಯಕರು ಹಿಂದೆ ಹೇಳಿದ್ದರು. ಬಹಳಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಲು ಆಹ್ವಾನ ನೀಡಿದ್ದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಅವರು ಏನಾದರೂ ಮಾಡಿಕೊಳ್ಳಲಿ. ನನಗೆ ಎಲ್ಲಿ ನ್ಯಾಯ ಸಿಗಬೇಕೋ ಅಲ್ಲಿ ಸಿಗುತ್ತದೆ” ಎಂದು ತಿಳಿಸಿದರು.

“ಸಿಬಿಐ ಅಧಿಕಾರಿಗಳಿಗೆ ನಾನು ಎಲ್ಲ ದಾಖಲೆ ನೀಡಿದ್ದೆ. ಅವರು 10% ಕೂಡ ತನಿಖೆ ಮಾಡಿರಲಿಲ್ಲ. ಆದರೆ ನ್ಯಾಯಾಲಯದಲ್ಲಿ 90% ತನಿಖೆ ಮುಗಿದಿದೆ ಎಂದು ಹೇಳಿದ್ದರು. ಯಾವ ಲೆಕ್ಕಾಚಾರದಲ್ಲಿ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಅವರು ಏನಾದರೂ ಮಾಡಲಿ. ನನ್ನನ್ನು ಒಳಗೆ ಹಾಕಿಸುವ ಆಸೆ ಇದ್ದರೆ ಹಾಕಿಸಲಿ. ನಾನು ಸಿದ್ಧನಿದ್ದೇನೆ” ಎಂದು ತಿಳಿಸಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ರೀತಿ ಮಾಡಲಾಗುತ್ತಿದೆಯೇ ಎಂದು ಕೇಳಿದಾಗ, “ಅಹ್ಮದ್ ಪಟೇಲ್ ಅವರ ರಾಜ್ಯಸಭೆ ಚುನಾವಣೆ ಕಾರಣ ನನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಅಹ್ಮದ್ ಪಟೇಲ್ ಅವರೇ ಇಂದು ನಮ್ಮ ಜತೆ ಇಲ್ಲ. ಆದರೂ ನನಗೆ ಕಿರುಕುಳ ಮುಂದುವರೆಸಿದ್ದಾರೆ. ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದು ಗೊತ್ತು. ಕಾನೂನು ಇದೆ, ನನ್ನ ಕೊನೆಯುಸಿರು ಇರುವವರೆಗೂ ಹೋರಾಟ ಮಾಡುತ್ತೇನೆ” ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಸಚಿವರ ಸ್ಪರ್ಧೆಗೆ ನಾನು ಮಾಡಿದ್ದ ಶಿಫಾರಸ್ಸಿಗೆ ಹೈಕಮಾಂಡ್ ಒಪ್ಪಿಗೆ ನೀಡಿಲ್ಲ ಎಂಬ ಮಾಧ್ಯಮಗಳಲ್ಲಿ ಬಂದ ವರದಿ ಬಗ್ಗೆ ಕೇಳಿದಾಗ, “ಅದೆಲ್ಲವೂ ಸುಳ್ಳು. ನಾನು ಯಾವುದೇ ಸಚಿವರನ್ನು ಅಭ್ಯರ್ಥಿ ಮಾಡಿ ಎಂದು ವರದಿ ಕೊಟ್ಟಿಲ್ಲ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಹೈಕಮಾಂಡ್ ನನಗೆ ವರದಿ ಕೇಳಿದ್ದು, ನಾನು ಇನ್ನೂ ವರದಿಯನ್ನೇ ನೀಡಿಲ್ಲ. ಇದೇ 4 ರಂದು ದೆಹಲಿಯಲ್ಲಿ ಸಭೆ ಕರೆದಿದ್ದಾರೆ. ಯಾವುದೇ ಸಚಿವರ ಸ್ಪರ್ಧೆ ಬಗ್ಗೆ ಸೂಚನೆ ನೀಡಿಲ್ಲ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಕೆಲವು ಸಚಿವರು ನಿಲ್ಲುವ ಪರಿಸ್ಥಿತಿ ಬರಬಹುದು, ಬಾರದೆಯೂ ಇರಬಹುದು. ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ” ಎಂದು ಸ್ಪಷ್ಟಪಡಿಸಿದರು.

ಕೃಪೆ:ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!