ರೋಗ ನಿರೋಧಕ ಶಕ್ತಿಯು ಹೆಚ್ಚಾಗಿರುವ ಸಿರಿಧಾನ್ಯವು ಹಲವು ಕಾಯಿಲೆಗಳಿಗೆ ರಾಮಬಾಣವಾಗಿದ್ದು, ರುಚಿಕರ ಹಾಗೂ ಆರೋಗ್ಯಕರವಾಗಿದ್ದು, ಇದನ್ನು ಜನತೆ ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕೆಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಸಿರಿಧಾನ್ಯಮೇಳದಲ್ಲಿ ಸಿರಿಧಾನ್ಯ ಗೀತೆ ಬಿಡುಗಡೆ ಮಾಡಿ ಮಾತನಾಡಿದ ಅವರು, 2017ರಲ್ಲಿ ಮೊಟ್ಟ ಮೊದಲ ಬಾರಿ ಆಗಿನ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಿರಿಧಾನ್ಯ ಹಾಗೂ ಸಾವಯವ ಕೃಷಿಗೆ ಗೆ ಒತ್ತು ನೀಡಲಾಯಿತು, 2018ರಲ್ಲಿ ಸಿರಿಧಾನ್ಯ ಕುರಿತು ಅಂತರಾಷ್ಟೀಯ ಸಮ್ಮೇಳನ ನಡೆಸಲಾಯಿತು, ನಂತರ ಕೋವಿಡ್ ಬಂದಿದ್ದರಿಂದ ಅಡಚಣೆಯಾಗಿತ್ತು. ಆದರೆ ಈಗಿನ ನಮ್ಮ ಸರ್ಕಾರ ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹಿಸುವ ಉದ್ಧೇಶದಿಂದ ಪ್ರತಿ ಹೆಕ್ಟೇರ್ ಗೆ 10,000 ಸಾವಿರ ರೂ. ಸಹಾಯಧನವನ್ನು ರೈತರಿಗೆ ನೀಡುತ್ತಿದೆ ಎಂದು ಹೇಳಿದರು.
ಇದೇ ಜ.5,6,7ರಂದು ಬೆಂಗಳೂರು ಅರಮನೆಯ ತ್ರಿಪುರವಾಸಿನಿ ಸಭಾಂಗಣದಲ್ಲಿ ಸಿರಿಧಾನ್ಯ ಕುರಿತು ಅಂತರಾಷ್ಟ್ರೀಯ ಸಮ್ಮೇಳನ ನಡೆಸುತ್ತಿದ್ದೇವೆ, ಇಲ್ಲಿನ ಬೇರೆ ಬೇರೆ ರಾಷ್ಟ್ರದಿಂದ ಬಂದ ತಜ್ಞರು ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ನಮ್ಮ ಸರ್ಕಾರವು ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹ ನೀಡುವುದ ಜೊತೆಗೆ ಅದರ ರಫ್ತು ಹೆಚ್ಚಿಸಲು ಕ್ರಮ ಕೈಗೊಳ್ಳಲಿದೆ ಎಂದರು.
ಸಮಾರಂಭದಲ್ಲಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರವಿಕುಮಾರ್, ಕೆ.ಎಂ.ಉದಯ್, ರಮೇಶ್ ಬಾಬು ಬಂಡಿಸಿದ್ದೇಗೌಡ, ಹೆಚ್.ಟಿ.ಮಂಜು, ಮರೀತಿಬ್ಬೇಗೌಡ, ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.




