ಬೆಂಗಳೂರಿನಲ್ಲಿ ಕನ್ನಡ ನಾಮಫಲಕಕ್ಕಾಗಿ ಹೋರಾಟ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಅವರ ಬಂಧನವನ್ನು ಖಂಡಿಸಿ ಕರವೇ ಕಾರ್ಯಕರ್ತರು ಮಳವಳ್ಳಿ ಪಟ್ಟಣದಲ್ಲಿ ಬುಧವಾರ ಸಂಜೆ ಪಂಜಿನ ಮೆರವಣಿಗೆ ನಡೆಸಿದರು.
ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಕರವೇ ಅಧ್ಯಕ್ಷ ಅಪ್ಪೇಗೌಡ ನೇತೃತ್ವದಲ್ಲಿ ಪಂಜನ್ನು ಹಿಡಿದ ಕಾರ್ಯಕರ್ತರು, ಸರ್ಕಾರ ವಿರುದ್ದ ಘೋಷಣೆ ಕೂಗುತ್ತಾ ಅನಂತರಾಂ ವೃತ್ತದಲ್ಲಿ ಕೆಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಅಪ್ಪೇಗೌಡ ಮಾತನಾಡಿ, ವಾರದ ಹಿಂದೆಯೇ ಕ.ರ.ವೇ ಸದಸ್ಯರು ವಾಣಿಜ್ಯ ಸಂಸ್ಥೆಗಳ ಸೂಚನಾ ಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿರುವ ಕುರಿತು ಪ್ರತಿಭಟನೆ ಹಾಗೂ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದರು. ಇದರಂತೆ ಕನ್ನಡ ನಾಮಫಲಕಕ್ಕಾಗಿ ಹೋರಾಟ ಮಾಡಿದ ನಮ್ಮ ನಾಯಕ ನಾರಾಯಣಗೌಡರನ್ನು ಬಂಧಿಸಿರುವುದು ಖಂಡನೀಯ, ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಅಧ್ಯಕ್ಷೆ ಹೆಚ್.ಈ.ವಿಜಯ, ಹಲಗೂರು ಅಧ್ಯಕ್ಷ ಗಂಗರಾಜು, ಮಲ್ಲಿಕ್, ನಾಗರಾಜು ಸೇರಿದಂತೆ ಹಲವರಿದ್ದರು.




