Saturday, May 18, 2024

ಪ್ರಾಯೋಗಿಕ ಆವೃತ್ತಿ

ಮೋದಿ 3D ಸೆಲ್ಫಿ ಬೂತ್‌ ನಿರ್ಮಾಣ ವೆಚ್ಚದ ಮಾಹಿತಿ ನೀಡಿದ ಅಧಿಕಾರಿ ದಿಢೀರ್‌ ವರ್ಗಾವಣೆ !

ರೈಲ್ವೆ ನಿಲ್ದಾಣಗಳಲ್ಲಿ ಮೋದಿ ಪೋಟೋ ಇರುವ 3D ಸೆಲ್ಫಿ ಬೂತ್‌ ನಿರ್ಮಾಣದ ವೆಚ್ಚದ ವಿವರಗಳನ್ನು ನೀಡಿದ ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವರಾಜ್ ಮನಸ್ಪುರೆ ಅವರನ್ನು ಹಠಾತ್ತನೆ ವರ್ಗಾವಣೆ ಮಾಡಲಾಗಿದೆ.

2023ರ ಡಿ.29ರಂದು ಶಿವರಾಜ್ ಮನಸ್ಪುರೆ ಅವರನ್ನು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ. ಅವರನ್ನು ಈ ಹುದ್ದೆಗೆ ನೇಮಿಸಿದ 7 ತಿಂಗಳಲ್ಲೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಮನಸ್ಪುರೆ ಅವರನ್ನು ಯಾವುದೇ ಕಾರಣ ನೀಡದೆ ಅಥವಾ ಮುಂದಿನ ಪೋಸ್ಟಿಂಗ್ ಎಲ್ಲಿ ಎಂದು ತಿಳಿಸದೆ ವರ್ಗಾಯಿಸಲಾಗಿದೆ.

ಮನಸ್ಪುರೆ ಬದಲಿಗೆ ಸ್ವಪ್ನಿಲ್ ಡಿ.ನೀಲಾ ಅವರನ್ನು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ನೇಮಿಸಲಾಗಿದೆ. ಈ ಬಗ್ಗೆ ಸ್ವಪ್ನಿಲ್ ಡಿ.ನೀಲಾ ಪ್ರತಿಕ್ರಿಯಿಸಿಲು ನಿರಾಕರಿಸಿದ್ದಾರೆ. ಆದರೆ ಇದು ಉನ್ನತ ಮಟ್ಟದ ನಿರ್ಧಾರ ಎಂದು ಇತರ ಅಧಿಕಾರಿಗಳು ತಿಳಿಸಿದ್ದಾರೆ.

ಸೆಲ್ಫಿ ಬೂತ್‌ ಬಗ್ಗೆ ಮಾಹಿತಿ ಕೇಳಿದ್ದ ಅಜಯ್ ಬೋಸ್

ರೈಲ್ವೆ ನಿಲ್ದಾಣಗಳಲ್ಲಿ ಮೋದಿ ಪೋಟೋ ಇರುವ  3D ಸೆಲ್ಫಿ ಬೂತ್‌ ನಿರ್ಮಾಣದ ಬಗ್ಗೆ ಅಮರಾವತಿ ಮೂಲದ ಸಾಮಾಜಿಕ ಕಾರ್ಯಕರ್ತ ಅಜಯ್ ಬೋಸ್ ಅವರು ಮಾಹಿತಿ ಹಕ್ಕು ಕಾಯಿದೆಯಡಿ ಕೇಂದ್ರ ರೈಲ್ವೆ, ಪಶ್ಚಿಮ, ದಕ್ಷಿಣ, ಉತ್ತರ ಮತ್ತು ವಾಯುವ್ಯ ರೈಲ್ವೇಗಳ 5 ವಲಯಗಳೊಂದಿಗೆ ಸೆಲ್ಫಿ ಬೂತ್‌ಗಳಿಗೆ ಸಂಬಂಧಿಸಿದ ವೆಚ್ಚಗಳ ವಿವರಗಳನ್ನು ಕೇಳಿದ್ದರು. ನಿರ್ದಿಷ್ಟ ವೆಚ್ಚಗಳ ಕುರಿತಾದ ಪ್ರಶ್ನೆಗೆ ಕೇಂದ್ರ ರೈಲ್ವೆಯು ಮಾತ್ರ ಪ್ರತಿಕ್ರಿಯಿಸಿತ್ತು. ಕೇಂದ್ರ ರೈಲ್ವೇ ವಲಯವೊಂದರಲ್ಲೇ ಸುಮಾರು 20 ಶಾಶ್ವತ ಸೆಲ್ಫಿ ಬೂತ್‌ಗಳನ್ನು ತಲಾ 6.25 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಅದರ ಒಟ್ಟು ವೆಚ್ಚ 1.25 ಕೋಟಿ ರೂ. ಎಂದು ಹೇಳಲಾಗಿತ್ತು. ಇನ್ನು 32 ತಾತ್ಕಾಲಿಕ ಸೆಲ್ಫಿ ಬೂತ್‌ಗಳನ್ನು ತಲಾ 1.25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರ ಒಟ್ಟು ವೆಚ್ಚ 40 ಲಕ್ಷ ರೂ. ಎಂದು ಹೇಳಿದ್ದರು.

“>

ನಿವೃತ್ತ ರೈಲ್ವೇ ಅಧಿಕಾರಿ ಅಜಯ್ ಬೋಸ್ ಅವರು ಆರ್‌ಟಿಐ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಸೆಂಟ್ರಲ್ ರೈಲ್ವೇ ಡೆಪ್ಯುಟಿ ಜನರಲ್ ಮ್ಯಾನೇಜರ್ ಅಭಯ್ ಮಿಶ್ರಾ ಅವರು ಪ್ರತಿಕ್ರಿಯಿಸಿದ್ದು, ಮೋದಿ ಅವರ 3ಡಿ ಸೆಲ್ಫಿ ಬೂತ್‌ಗಳನ್ನು ಮುಂಬೈ, ಭೂಸಾವಲ್, ನಾಗಪುರ, ಪುಣೆ ಮತ್ತು ಸೊಲ್ಲಾಪುರಗಳ 50 ರೈಲು ನಿಲ್ದಾಣಗಳಲ್ಲಿ ಸ್ಥಾಪಿಸಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಕಲ್ಯಾಣ್, ನಾಗ್ಪುರ ಮತ್ತು ಬೇತುಲ್ ಸೇರಿದಂತೆ 30 ಕೆಟಗರಿ ಎ ಸ್ಟೇಷನ್‌ಗಳಲ್ಲಿ ತಾತ್ಕಾಲಿಕ ಬೂತ್‌ಗಳನ್ನು ಸ್ಥಾಪಿಸಿದರೆ, ಕರ್ಜತ್, ಲಾತೂರ್ ಮತ್ತು ಕೋಪರ್‌ಗಾಂವ್ ಸೇರಿದಂತೆ 20 ನಿಲ್ದಾಣಗಳಲ್ಲಿ ಶಾಶ್ವತ ಬೂತ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ್ದರು.

ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ 3D ಸೆಲ್ಫಿ ಬೂತ್‌ಗಳ ತಾತ್ಕಾಲಿಕ ಸ್ಥಾಪನೆಗೆ 1.25 ಲಕ್ಷ ಮತ್ತು  ಶಾಶ್ವತ ಸ್ಥಾಪನೆಗೆ 6.25 ಲಕ್ಷ ದರಗಳನ್ನು ಅನುಮೋದಿಸಿದೆ ಎಂದು RTI ಮಾಹಿತಿಯು ಹೇಳಿತ್ತು.

ಕೇಂದ್ರ ರೈಲ್ವೇಯಲ್ಲಿನ ತಾತ್ಕಾಲಿಕ ಮತ್ತು ಶಾಶ್ವತ ಮೋದಿ ಪೋಟೋ ಇರುವ ಬೂತ್‌ಗಳ ನಿರ್ಮಾಣಕ್ಕೆ ಒಟ್ಟು ವೆಚ್ಚ 1.62 ಕೋಟಿ ಆಗಲಿದೆ. ಇದರಲ್ಲಿ ಶಾಶ್ವತ ಪೋಟೋ ಬೂತ್‌ಗಳಿಗೆ 1.25 ಕೋಟಿ ಮತ್ತು ತಾತ್ಕಾಲಿಕವಾಗಿ ಸ್ಥಾಪಿಸಲು 37.5 ಲಕ್ಷ ರೂ.ಆಗಲಿದೆ ಎಂದು ಆರ್‌ಟಿಐ ಮಾಹಿತಿ ಬಹಿರಂಗಪಡಿಸಿದೆ.

ಸೆಲ್ಫಿ ಬೂತ್‌ ಬಗ್ಗೆ ಟೀಕಿಸಿದ್ದ ಖರ್ಗೆ

ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಸೆಲ್ಫಿ ಬೂತ್‌ಗಳನ್ನು ರೈಲ್ವೇ ನಿಲ್ದಾಣಗಳಲ್ಲಿ ಸ್ಥಾಪಿಸುವ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಸೆಲ್ಫಿ ಬೂತ್‌ಗಳ ಸ್ಥಾಪನೆ ಮೂಲಕ ತೆರಿಗೆದಾರರ ಹಣದ ದುರ್ಬಳಕೆ ಮಾಡಲಾಗುತ್ತಿದೆ. ಮೋದಿ ಸರ್ಕಾರದ ಸ್ವಯಂ ಗೀಳಿನ ಪ್ರಚಾರಕ್ಕೆ ಯಾವುದೇ ಮಿತಿಯಿಲ್ಲ. ಮೋದಿ ಸರ್ಕಾರವು ರಾಜ್ಯಗಳಿಗೆ ಬರ ಮತ್ತು ಪ್ರವಾಹ ಪರಿಹಾರವನ್ನು ಒದಗಿಸಿಲ್ಲ. ವಿರೋಧ ಪಕ್ಷದ ಆಡಳಿತದ ರಾಜ್ಯಗಳಿಗೆ MGNREGA ಯೋಜನೆಯ ಹಣದ ಪಾವತಿ ಬಾಕಿ ಉಳಿದಿವೆ. ಆದರೆ ಈ ಕೀಳು ಮಟ್ಟದ ಚುನಾವಣಾ ಪ್ರಚಾರಕ್ಕೆ ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಲಾಗುತ್ತಿದೆ ಎಂದು ಟೀಕಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!