ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಹಗುರವಾಗಿ ಮಾತನಾಡಿರುವ ಸಂಸದ ಅನಂತಕುಮಾರ್ ಹೆಗಡೆ ಕೂಡಲೆ ಕ್ಷಮೆಯಾಚಿಸಬೇಕು ಎಂದು ಜಿಲ್ಲಾ ಕುರುಬರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಮಂಡ್ಯ ಜಿಲ್ಲಾಧ್ಯಕ್ಷ ಕೆ.ಹೆಚ್. ನಾಗರಾಜು ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೆದ ನಾಲ್ಕು ವರ್ಷದಿಂದ ಅವಿತು ಕುಳಿತಿದ್ದ ಸಂಸದ ಅನಂತಕುಮಾರ್ ಹೆಗಡೆಗೆ ಚುನಾವಣೆ ಹೊಸ್ತಿಲಲ್ಲಿ ಧೈರ್ಯ ಬಂದಂತಾಗಿದೆ.ಕೇಂದ್ರದ ನಾಯಕರನ್ನು ಮೆಚ್ಚಿಸಲು ಸಿದ್ಧರಾಮಯ್ಯ ವಿರುದ್ಧ ಅಸಂಬದ್ಧ ಪದ ಬಳಕೆ ಮಾಡುತ್ತಿದ್ದಾರೆ. ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅವರು ಸಂಸದರಾಗಿದ್ದರೂ ಮಾತಿನ ಮೇಲೆ ಹಿಡಿತವಿಲ್ಲದೆ ಕೀಳುಮಟ್ಟದ ಪದಬಳಕೆ ಮಾಡಿದ್ದಾರೆ.ಇದು ಅವರ ಪಕ್ಷದ ಸಂಸ್ಕೃತಿ ತೋರಿಸುತ್ತದೆ. ಸಿದ್ದರಾಮಯ್ಯರವರು ರಾಜ್ಯದ ಅಹಿಂದ ನಾಯಕರಾಗಿದ್ದು, ಅಂಬೇಡ್ಕರ್ ತತ್ವ,ಸಿದ್ಧಾಂತ ಅಳವಡಿಸಿಕೊಂಡು ಅಧಿಕಾರ ನಡೆಸುತ್ತಿದ್ದಾರೆ.ಇವರ ವಿರುದ್ಧ ಮಾತನಾಡಿರುವುದು ಸರಿಯಲ್ಲ.
ರಾಜ್ಯದ ಇಡೀ ಕುರುಬ ಸಮುದಾಯ ಸಿದ್ದರಾಮಯ್ಯ ಬೆಂಬಲಕ್ಕಿದೆ. ಮುಂಬರುವ ಚುನಾವಣೆಯಲ್ಲಿ ಅಹಿಂದ ಮತದಾರರು ಯಾವ ರೀತಿ ಪಾಠ ಕಲಿಸಬೇಕು ಎಂಬುದು ಗೊತ್ತಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ನಾಯಕರು ಅಭಿವೃದ್ಧಿ ವಿಚಾರ ಇಟ್ಟುಕೊಂಡು ಚುನಾವಣೆ ಎದುರಿಸಲು ಸಾಧ್ಯವಿಲ್ಲದೆ, ಜಾತಿ, ಧರ್ಮದ ಮೇಲೆ ರಾಜಕೀಯ ಮಾಡಿ ಅಪೂರ್ಣ ರಾಮಮಂದಿರ ಉದ್ಘಾಟನೆ ನೆಪದಲ್ಲಿ ಲೋಕಸಭೆ ಚುನಾವಣೆಗೆ ಹೊರಟಿದ್ದಾರೆ. ಮತದಾರರು ಪ್ರಬುದ್ಧರಾಗಿದ್ದು, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮನೆಯಲ್ಲಿ ಕೂರಿಸಲು ಸಿದ್ಧರಾಗಿದ್ದಾರೆ.ಸಿಎಂ ವಿರುದ್ಧ ಮಾತನಾಡಲು ಬಿಜೆಪಿಯ ಯಾವ ನಾಯಕನಿಗೂ ನೈತಿಕತೆ ಇಲ್ಲ. ಇದನ್ನು ಕುರುಬ ಸಮುದಾಯ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.




