Friday, September 20, 2024

ಪ್ರಾಯೋಗಿಕ ಆವೃತ್ತಿ

ಸಚಿವರಿಂದ ನೀತಿ ಸಂಹಿತೆ ಉಲ್ಲಂಘನೆ: ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವಿಶಂಕರ್ ಜೊತೆಗೂಡಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಚಾರ ನಡೆಸಿರುವ ಉನ್ನತ ಶಿಕ್ಷಣ ಸಚಿವ ಅಶ್ವಥ್‌ ನಾರಾಯಣ್ ನೀತಿ ಸಂಹಿತೆ ಉಲ್ಲಂಘಿಸಿದ್ದು, ಅವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷದ ಮೈಸೂರು ವಿಭಾಗೀಯ ಮಾಧ್ಯಮ ಮುಖ್ಯಸ್ಥ ರಾಜು ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು,ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಹಾಗೂ ಬಿಜೆಪಿ ಮುಖಂಡರೊಂದಿಗೆ ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಪ್ರಚಾರ ನಡೆಸಿದ್ದಾರೆ. ಶಿಕ್ಷಣ ಸಂಸ್ಥೆಗಳು ಬಿಜೆಪಿ ಆಸ್ತಿನಾ ಎಂದು ಪ್ರಶ್ನಿಸಿದರು.

ಮೇ 16 ರಂದು ಉನ್ನತ ಶಿಕ್ಷಣ ಸಚಿವರು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದ್ದಾರೆ. ಈ ಸಂಬಂಧ ಮೇ 17 ರಂದು ದೂರು ನೀಡಿದ ಮೇರೆಗೆ ಪರಿಶೀಲಿಸಿದ್ದು, ಮೇಲ್ನೋಟಕ್ಕೆ ನೀತಿ ಸಂಹಿತೆ ಉಲ್ಲಂಘನೆ ಯಾಗಿರುವ ಬಗ್ಗೆ ಜಿ.ಪಂ‌.ಸಿಇಓ ವರದಿ ಸಲ್ಲಿಸಿದ್ದಾರೆ. ಆದರೂ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.

ಸಚಿವರಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಸಾಬೀತಾಗಿ ಐದು ದಿನಗಳಾದರೂ ಜಿಲ್ಲಾಡಳಿ ಮೌನವಹಿಸಿರುವುದೇಕೆ. ಇವರ ಮೇಲೂ ಪ್ರಭಾವ ಬೀರಿ ಒತ್ತಡ ಹೇರಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

ಯಾರು ತಪ್ಪು ಮಾಡಿದರೂ ಅದು ತಪ್ಪೇ. ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಅಶ್ವಥ್ ನಾರಾಯಣ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಶ್ವತ್ ನಾರಾಯಣ್ ಅವರೇ ನೀವು ಕ್ಯಾಬಿನೆಟ್ ಸಚಿವರು, ಕದ್ದು-ಮುಚ್ಚಿ ಬಂದು ಪ್ರಚಾರ ಮಾಡುವ ಅವಶ್ಯಕತೆ ಇಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿ ಮಾಡುವುದು ನಿಮ್ಮ ಘನತೆಗೆ ತಕ್ಕದ್ದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿಕ್ಷಣ ಉನ್ನತೀಕರಣಗೊ ಳಿಸುವ ಸಂಬಂಧ ನೀವು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದ್ದರೆ ನಮ್ಮದೇನು ಅಭ್ಯಂತರವಿಲ್ಲ. ಆದರೆ, ಕೊಟ್ಟ ಅಧಿಕಾರವನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುವುದು ಎಷ್ಟು ಸರಿ ಎಂದು ಕಿಡಿಕಾರಿದರು.

ಸರ್ಕಾರದ ಪ್ರತಿನಿಧಿ ಯಾಗಿ, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ನೀವು ಈ ರೀತಿ ನಡೆದುಕೊಳ್ಳುವುದರಿಂದ ಸಮಾಜಕ್ಕೆ ತಪ್ಪು ಮಾಹಿತಿ ಹೋಗುತ್ತದೆ. ರಾಜ್ಯದ ಜನತೆ ಕಣ್ಮುಚ್ಚಿ ಕುಳಿತಿಲ್ಲ. ಎಲ್ಲವನ್ನೂ ನೋಡು ತ್ತಿದ್ದಾರೆ, ಈ ದೇಶದ ಸಂವಿಧಾನ, ಕಾನೂನಿಗೆ ನಿಮ್ಮ ಸರ್ಕಾರದಲ್ಲಿ ಬೆಲೆ ಇಲ್ಲವೇ ಎಂದು ಹರಿಹಾಯ್ದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ, ಕಾನೂನು ಘಟಕದ ಜಿಲ್ಲಾಧ್ಯಕ್ಷ ಗೌರೀಶ್, ಸೇವಾದಳದ ಜಿಲ್ಲಾಧ್ಯಕ್ಷ ಗುರುರಾಜ್, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!