Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಲ್ಲಡ್ಕ, ಸೂಲಿಬೆಲೆ, ಮುತಾಲಿಕ್ ಗೆ ಮಂಡ್ಯ ಪ್ರವೇಶ ನಿರ್ಬಂಧಿಸಿ: ಪ್ರಗತಿಪರರ ಆಗ್ರಹ

ಮಂಡ್ಯ ತಾಲ್ಲೂಕಿನ ಕೆರಗೋಡು ಧ್ವಜ ವಿವಾದದ ಹಿನ್ನೆಲೆಯಲ್ಲಿ ಕೋಮು ಪ್ರಚೋದನೆಗೆ ಮುಂದಾಗಿರುವ ಕೋಮು, ಪ್ರಚೋದನಕಾರಿ ಭಾಷಣಕಾರರಾದ ಕಲ್ಲಡ್ಕ ಪ್ರಭಾಕರ್ ಭಟ್, ಪ್ರಮೋದ್ ಮುತಾಲಿಕ್ ಹಾಗೂ ಚಕ್ರವರ್ತಿ ಸೂಲಿಬೆಲೆ ಮಂಡ್ಯ ಜಿಲ್ಲೆಗೆ ಪ್ರವೇಶಿಸಿದಂತೆ ನಿರ್ಬಂಧಿಸಬೇಕು ಎಂದು ಪ್ರಗತಿಪರರು ಸಚಿವ ಚಲುವರಾಯಸ್ವಾಮಿ ಅವರನ್ನು ಒತ್ತಾಯಿಸಿದರು.

ಸಮಾನ ಮನಸ್ಕರ ವೇದಿಕೆ ನೇತೃತ್ವದಲ್ಲಿ ಪ್ರಗತಿಪರ ನಿಯೋಗ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಜಿಲ್ಲಾಧಿಕಾರಿ ಡಾ. ಕುಮಾರ ಅವರು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕೆರಗೋಡು ಧ್ವಜ ವಿವಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರಕ್ಷುದ್ಧ ವಾತಾವರಣ ನಿರ್ಮಾಣವಾಗಿದೆ, ಇಂತಹ ಸ್ಥಿತಿಗೆ ಆರ್ ಎಸ್ ಎಸ್ ನೇತೃತ್ವದ ಸಂಘ ಪರಿವಾರ ಕಾರಣವಾಗಿದ್ದು, ಪರಿಸ್ಥಿತಿಯನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲು ಹವಣಿಸುತ್ತಿದೆ, ಜಿಲ್ಲೆಯ ಸರ್ಕಾರಿ ಕಚೇರಿ, ವ್ಯಾಪಾರದ ಸ್ಥಳ ಹಾಗೂ ಸಾರ್ವಜನಿಕ ಸ್ಥಳಗಳನ್ನು ದುರ್ಬಳಕೆ ಮಾಡಿಕೊಂಡು ಅನ್ಯ ಧರ್ಮದ ವಿರುದ್ಧ ದ್ವೇಷ ಹರಡುವ ಹಾಗೂ ಅವರ ವಿರುದ್ಧ ಬಹು ಸಂಖ್ಯಾತ ಧಾರ್ಮಿಕ ನಂಬಿಕೆಯುಳ್ಳ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಆ ಹಿನ್ನೆಲೆಯಲ್ಲಿ ಜಿಲ್ಲೆಯ ಸೌಹಾರ್ದ ಪರಂಪರೆಯನ್ನು ರಕ್ಷಿಸಲು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಹಾಗಾಗಿ ಕೆರಗೋಡು ಗ್ರಾಮದಲ್ಲಿ ರಾಷ್ಟ್ರಧ್ವಜ ಮತ್ತು ನಾಡ ಧ್ವಜ ಹಾರಿಸಲು ಅನುಮತಿ ಪಡೆದು ಅನ್ಯ ಧ್ವಜ ಹಾರಿಸಿ ಕೋಮು ಭಾವನೆ ಕೆರಳಿಸಿದ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಧ್ವಜಸ್ತಂಬ ನಿರ್ಮಿಸಲು ಅಕ್ರಮವಾಗಿ ಅನುಮತಿ ನೀಡಿದ ಎಲ್ಲರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆದು ವ್ಯಾಪಾರ, ವಹಿವಾಟು ನಡೆಸುತ್ತಾ ಅಕ್ರಮವಾಗಿ ಒಂದು ಧರ್ಮದ ಹಾಗೂ ಜಾತಿಯ ಧ್ವಜ, ಬಂಟಿಂಗ್ಸ್ ಕಟ್ಟುವ ವ್ಯಾಪಾರಸ್ಥರ ಪರವಾನಿಗೆ ರದ್ದು ಮಾಡಬೇಕು ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ನಿರ್ದೇಶನ ನೀಡಬೇಕು, ಯಾವುದೇ ಕಾರ್ಯಕ್ರಮದ ಬ್ಯಾನರ್, ಬಂಟಿಂಗ್ಸ್ ಹಾಕಿದವರು ಕಾರ್ಯಕ್ರಮ ಮುಗಿದ 24 ತಾಸಿನೊಳಗೆ ಅವುಗಳನ್ನು ತೆರೆವುಗೊಳಿಸಬೇಕು ಎಂಬ ನಿರ್ಬಂಧನೆ ವಿಧಿಸಬೇಕು. ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಸಚಿವ ಚಲುವರಾಯಸ್ವಾಮಿ ಯಾವುದೇ ಕಾರಣಕ್ಕೂ ಬಂದ್ ಮಾಡಬೇಡಿ, ಯಾರು ಕೂಡ ಬಂದ್ ಮಾಡಬಾರದು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಮುಖಂಡರಾದ ಎ.ಎಲ್ ಕೃಷ್ಣೇಗೌಡ, ಎಂ.ಬಿ ನಾಗಣ್ಣಗೌಡ, ಸುನಂದ ಜಯರಾಮ್, ಲಕ್ಷ್ಮಣ್ ಚೀರನಹಳ್ಳಿ, ಸಿ.ಕುಮಾರಿ. ಎಂ.ವಿ ಕೃಷ್ಣ, ಟಿ.ಡಿ ನಾಗರಾಜ್, ಮುದ್ದೇಗೌಡ, ಬಿಎಸ್ಪಿ ಜಿಲ್ಲಾಧ್ಯಕ್ಷ ಶಿವಶಂಕರ್,ಮುಕುಂದಪ್ಪ, ಹುರುಗಲವಾಡಿ ರಾಮಯ್ಯ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!