Friday, September 20, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಏಕಾಗ್ರತೆಯಿಂದ ವ್ಯಾಸಂಗ ಮಾಡಿದರೆ ಗುರಿ ಸಾಧನೆ : ಡಿ.ಬಿ ಸತ್ಯ

ವಿದ್ಯೆಯ ಜ್ಞಾನದ ಬೆಳಕಿನ ಶಕ್ತಿಯು ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ, ಆದ್ದರಿಂದ ವಿದ್ಯಾರ್ಥಿಗಳು ಏಕಾಗ್ರತೆ ಹಾಗೂ ಶ್ರದ್ಧಾಭಕ್ತಿಯಿಂದ ವ್ಯಾಸಂಗ ಮಾಡಿ ಗುರಿ ಸಾಧನೆ ಮಾಡಬೇಕು ಎಂದು ಕೃಷ್ಣರಾಜಪೇಟೆ ಕೆಪಿಎಸ್ ಸ್ಕೂಲ್ ಪ್ರಾಂಶುಪಾಲ ಡಿ.ಬಿ.ಸತ್ಯ ಹೇಳಿದರು.

ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿ ವಿಠಲಾಪುರ ಗ್ರಾಮದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ವಿದ್ಯೆಯ ಜ್ಞಾನದ ಬೆಳಕಿನ ಶಕ್ತಿಗೆ ಅಪಾರವಾದ ಬೇಡಿಕೆಯಿದೆ. ಸಾಮಾಜಿಕ ಅಸಮಾನತೆಯನ್ನು ಹೊಡೆದೋಡಿಸಿ ಸ್ವಾಭಿಮಾನದ ಜೊತೆಗೆ ಆತ್ಮವಿಶ್ವಾಸವನ್ನು ತುಂಬುವ ವಿದ್ಯೆಗೆ ಜ್ಞಾನದ ಹಸಿವನ್ನು ತುಂಬುವ ಶಕ್ತಿಯಿದೆ. ವಿದ್ಯಾರ್ಥಿಗಳು ತಲೆಬಗ್ಗಿಸಿ ಪಾಠ ಪ್ರವಚನಗಳನ್ನು ಅಭ್ಯಾಸ ಮಾಡಿದರೆ ಜೀವನ ಪರ್ಯಂತ ತಲೆಎತ್ತಿ ಜೀವನ ನಡೆಸುವಂತಹ ಶಕ್ತಿಯನ್ನು ವಿದ್ಯೆಯು ನೀಡುತ್ತದೆ. ಆದ್ದರಿಂದ ಯುವಜನರು ಮೊಬೈಲ್ ಫೋನುಗಳು, ಫೇಸ್‌ಬುಕ್, ವ್ಯಾಟ್ಸಫ್, ಚಾಟಿಂಗ್‌ನಿಂದ ದೂರವಿದ್ದು ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದಿ ಜ್ಞಾನವಂತರಾಗಬೇಕು ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಮೋಹನ್ ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕೆ ವಿಠಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ತಾಲೂಕಿನಲ್ಲಿಯೇ ಮಾದರಿ ಕಾಲೇಜಾಗಿದೆ. ಇಲ್ಲಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂಧಿಗಳು ಗುಣಾತ್ಮಕ ಕಲಿಕೆಗೆ ಒತ್ತು ನೀಡುವ ಜೊತೆಗೆ
ಅತ್ಯುತ್ತಮವಾದ ಫಲಿತಾಂಶವನ್ನು ಕಾಲೇಜಿಗೆ ತಂದು ಕೊಡುತ್ತಿದ್ದಾರೆ. ಇಂದಿನ ಸ್ಪರ್ಧಾ ಪ್ರಪಂಚದಲ್ಲಿಯೂ
ಗ್ರಾಮೀಣ ಪ್ರದೇಶದಲ್ಲಿರುವ ಕಾಲೇಜಿಗೆ ವಿದ್ಯಾರ್ಥಿಗಳು ಪೈಪೋಟಿಯ ಮೇರೆಗೆ ದಾಖಲಾಗಿ ಒಳ್ಳೆಯ ಫಲಿತಾಂಶ
ತಂದು ಕೊಡುತ್ತಿದ್ದಾರೆಂದರೆ ಇಲ್ಲಿನ ಶೈಕ್ಷಣಿಕ ವಾತಾವರಣ ಹಾಗೂ ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದರು.

ವಿಠಲಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹರಿಹರಪುರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಶಫೀಅಹಮದ್, ಉಪನ್ಯಾಸಕರಾದ ಡಿ.ಎಂ.ವಿನಾಯಕ, ಆರ್.ಬಿ.ಪದ್ಮನಾಭ, ಟಿ.ವೈ.ಪುಷ್ಪ, ಶಕುಂತಲಾ ಮಂಜುನಾಥ್, ಪ್ರಗತಿಪರ ಕೃಷಿಕರಾದ ವಿಠಲಾಪುರ ಸುಬ್ಬೇಗೌಡ, ಡಾ.ಕೆ.ಕಾಳೇಗೌಡ, ಮತ್ತಿಘಟ್ಟ ಚಂದ್ರಶೇಖರ್ ಸೇರಿದಂತೆ ತಾಲೂಕಿನ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು. ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ಅತೀ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!