Thursday, September 19, 2024

ಪ್ರಾಯೋಗಿಕ ಆವೃತ್ತಿ

ಫೆ.7ರ ಮಂಡ್ಯ ಬಂದ್: 7 ಷರತ್ತುಗಳನ್ನು ವಿಧಿಸಿದ ಪೊಲೀಸ್ ಇಲಾಖೆ

ಮಂಡ್ಯ ಜಿಲ್ಲೆಯಲ್ಲಿ ಕೋಮು ಭಾವನೆಗಳನ್ನು ಕೆರಳಿಸಿ, ಶಾಂತಿ ಕದಡುವುದನ್ನು ಖಂಡಿಸಿ ಮಂಡ್ಯ ಜಿಲ್ಲಾ ಸಮಾನ ಮನಸ್ಕರ ವೇದಿಕೆಯು ಫೆ.7ರಂದು ಮಂಡ್ಯ ಬಂದ್ ನಡೆಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಒಟ್ಟು ಏಳು ಷರತ್ತುಗಳನ್ನು ವಿಧಿಸಿ ವೇದಿಕೆಯ ಮುಖಂಡರಿಗೆ ನೋಟೀಸ್ ನೀಡಿದೆ.

ಷರತ್ತುಗಳಲ್ಲೇನಿದೆ…

1.ಪ್ರತಿಭಟನೆ ನಿರತರು ಸ್ಥಳದಲ್ಲಿ ಧ್ವನಿವರ್ಧಕದ ಬಳಸಿದಲ್ಲಿ ಪ್ರತ್ಯೇಕವಾಗಿ ಪರವಾನಗಿಯನ್ನು ಪಡೆಯುವುದು ಮತ್ತು ಧ್ವನಿವರ್ಧಕ ಪರವಾನಿದಾರರು ಷರತ್ತುಗಳಿಗೆ ಬದ್ಧರಾಗಿರುವುದು.

2.ಪ್ರತಿಭಟನೆ ಸಮಯದಲ್ಲಿ, ಪ್ರತಿಭಟನಾ ಕಾರರು ಯಾವುದೇ ಇತರ ಧಾರ್ಮಿಕ, ರಾಜಕೀಯ, ಸಾಮಾಜಿಕ, ಭಾಷಾ ಅಥವಾ ಸಾಂಸ್ಕೃತಿಕ ಗುಂಪುಗಳಿಗೆ ಕಿರಿಕಿರಿ/ಭಾವನೆಗಳಿಗೆ ನೋವು ಉಂಟುಮಾಡುವ ಘೋಷಣೆಗಳನ್ನು ಕೂಗಬಾರದು. ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ವಹಿಸುವುದು. ಅಲ್ಲದೇ ಬಲವಂತವಾಗಿ ಬಂದ್ ಮಾಡಲು ಒತ್ತಾಯ ಮಾಡುವಂತಿರಬಾರದು.

3. ಸಂಘಟಕರು ಪ್ರತಿಭಟನೆ ಸ್ಥಳದ ಬಗ್ಗೆ ಸಂಬಂಧಿಸಿದ ಪ್ರಾಧಿಕಾರದಿಂದ ಸೂಕ್ತ ಪರವಾನಗಿ ಪಡೆಯುವುದು. ಮತ್ತು ಪರವಾನಿಗೆಯಲ್ಲಿ ಸೂಚಿಸಲಾದ ಷರತ್ತುಗಳಿಗೆ ಮತ್ತು ನಿಗಧಿಪಡಿಸಿದ ಸಮಯಕ್ಕೆ ಬದ್ಧರಾಗಿರಬೇಕು.

4. ಸಂಘಟಕರು ಪ್ರತಿಭಟನೆ ವ್ಯವಸ್ಥಿತವಾಗಿ ನಡೆಸಲು ವ್ಯವಸ್ಥೆ ಮಾಡಬೇಕು ಮತ್ತು ಸಂಘಟನೆಯ ಜವಾಬ್ದಾರಿಯುತ ಸದಸ್ಯರು/ಅರ್ಜಿದಾರರು ಧರಣಿಯಲ್ಲಿ ಹಾಜರಿರಬೇಕು ಮತ್ತು ಇದನ್ನು ಖಚಿತಪಡಿಸಿಕೊಳ್ಳಬೇಕು.

5. ಪರವಾನಗಿಯ ಆದೇಶ ಆಥವಾ ಷರತ್ತುಗಳ ಯಾವುದೇ ನಿಬಂಧನೆಯ ಉಲ್ಲಂಘನೆಯ ಸಂದರ್ಭದಲ್ಲಿ, ಸಂಘಟಕರು ಕಾನೂನು ಕ್ರಮಕ್ಕೆ ಜವಾಬ್ದಾರರಾಗಿರುತ್ತಾರೆ. Q

6. ಲೈಸೆನ್ಸ್ ಪ್ರಾಧಿಕಾರವು ಯಾವುದೇ ಸಂದರ್ಭದಲ್ಲಿ, ಅಗತ್ಯತೆ ಅಥವಾ ಅವರು ಸ್ವೀಕರಿಸಿದ ಒಳಹರಿವಿನ ಆಧಾರದ ಮೇಲೆ ಅಥವಾ ಸಾರ್ವಜನಿಕ ಮತ್ತು ಸುವ್ಯವಸ್ಥೆಗೆ ಅಡ್ಡಿಪಡಿಸುವ ಯಾವುದೇ ಸಮಂಜಸವಾದ ಆತಂಕವಿದ್ದಲ್ಲಿ, ಅವರು ಯಾವುದೇ ಸಮಯದಲ್ಲಿ ಅನುಮತಿಯನ್ನು ಹಿಂಪಡೆಯಬಹುದು ಅಥವಾ ಸಂಘಟಕರಿಗೆ ನಿರ್ದೇಶಿಸಬಹುದು ( ಎಸ್) ಈ ನಿಟ್ಟಿನಲ್ಲಿ ಮಾಡಲಾಗುತ್ತಿರುವ ಸಿದ್ಧತೆಗಳನ್ನು ನಿಲ್ಲಿಸಲು ಬದ್ಧರಾಗಿರಬೇಕು.

7. ಜಿಲ್ಲಾ ದಂಡನಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲೆ ಮಂಡ್ಯ ರವರು ಹೊರಡಿಸಿರುವ ಕಲಂ 144 ಸಿಆರ್‌ಪಿಸಿ ನಿಷೇದಾಜ್ಞೆ ಉಲ್ಲಂಘನೆಯಾಗದಂತೆ ಕ್ರಮ ವಹಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ ಎಂದು ಪೊಲೀಸ್ ಇಲಾಖೆಯು ಷರತ್ತು ವಿಧಿಸಿದೆ.

ಸಮಾನ ಮನಸ್ಕರ ವೇದಿಕೆಯ ನಿಲುವೇನು ?

ಮಂಡ್ಯ ಜಿಲ್ಲೆಯಲ್ಲಿ ಕೋಮುವಾದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಳ್ಳಲು ಹವಣಿಸುತ್ತಿರುವ ಬಿಜೆಪಿ ಮತ್ತು ಸಂಘ ಪರಿವಾರದ ನಿಲುವನ್ನು ವಿರೋಧಿಸಿ ಮಂಡ್ಯ ಜಿಲ್ಲಾ ಸಮಾನ ಮನಸ್ಕರ ವೇದಿಕೆಯು ಮಂಡ್ಯ ಬಂದ್ ಕರೆ ನೀಡಿದೆ ಎಂದು ವೇದಿಕೆ ಮುಖಂಡರಾದ ಲಕ್ಷ್ಮಣ್ ಚೀರನಹಳ್ಳಿ ಹಾಗೂ ನಾಗಣ್ಣಗೌಡ ತಿಳಿಸಿದ್ದಾರೆ.

ಇತ್ತೀಚೆಗೆ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು, ಬಂದ್ ಕೈ ಬಿಡುವಂತೆ ತಮ್ಮಲ್ಲಿ ಮನವಿ ಮಾಡಿದ್ಧಾರೆ. ಮತ್ತೊಂದೆಡೆ ಮಂಡ್ಯ ಜಿಲ್ಲಾಡಳಿತವು ಫೆ.7 ಹಾಗೂ ಫೆ.9ರ ಬಂದ್ ಗಳಿಗೂ ಅವಕಾಶ ನೀಡುವುದಿಲ್ಲ, 144 ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ಹೇರಲಾಗುವುದು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಬಂದ್ ನಡೆಸುವ ಬಗ್ಗೆ ಪುನರ್ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಬಿಜೆಪಿ, ಸಂಘ ಪರಿವಾರದ ನಿಲುವೇನು ?

ಕೆರಗೋಡು ಧ್ವಜ ವಿವಾದದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಫೆ.9ರ ಮಂಡ್ಯ ಬಂದ್ ಗೆ ಕರೆ ನೀಡಿತ್ತು, ಆದರೆ ಈ ಬಗ್ಗೆ ಇನ್ನೂ ಖಚಿತವಾದ ತೀರ್ಮಾನಕ್ಕೆ ಬಂದಿಲ್ಲ, ಈ ನಡುವೆ ಪಗ್ರತಿಪರರು ಫೆ.7 ಬಂದ್ ಕರೆ ನೀಡಿರುವುದರಿಂದ, ಸದ್ಯದಲ್ಲೇ ತಮ್ಮ ಪಕ್ಷದ ಹಿರಿಯರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದೆಂದು ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಇಂದ್ರೇಶ್ ತಿಳಿಸಿದ್ದಾರೆ.

nudikarnataka.com

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!