Saturday, November 21, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ವರದಕ್ಷಿಣೆಗೆ ಪೀಡಿಸಿ ದಾಂಧಲೆ: ಮೂವರಿಗೆ ನ್ಯಾಯಾಂಗ ಬಂಧನ

ವರದಿ : ಪ್ರಭು ವಿ.ಎಸ್ 

ಹೆಚ್ಚಿನ ವರದಕ್ಷಿಣೆಗಾಗಿ ಪತ್ನಿಯ ತವರು ಮನೆಯಲ್ಲಿ ಪತಿ ಮತ್ತು ಆತನ ಕುಟುಂಬಸ್ಥರು ದಾಂಧಲೆ ನಡೆಸಿ ಪತ್ನಿಯ ಸಹೋದರನ ಮೇಲೆ ಹಲ್ಲೆ ನಡೆಸಿರುವ ಘಟನೆ ಮದ್ದೂರು ತಾಲೂಕಿನ ಚನ್ನಸಂದ್ರ ಗ್ರಾಮದಲ್ಲಿ ಜರುಗಿದೆ.

ಬೆಂಗಳೂರು ನಾಗರಬಾವಿ ಬಡಾವಣೆಯ ಸತ್ಯಶ್ರೀ ಅವರ ಪತಿ ಸುನೀಲ್‌ಕುಮಾರ್, ನಾದಿನಿ ನೀತುಶ್ರೀ ಇವರ ಪತಿ ಜಗದೀಶ್ ಹಾಗೂ ಕಾರು ಚಾಲಕ ಹೇಮಂತ್ ವಿರುದ್ಧ ಪೊಲೀಸರು ವರದಕ್ಷಿಣೆ ನಿಷೇಧ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆರೋಪಿಗಳಿಂದ ಹಲ್ಲೆಗೊಳಗಾದ ಚನ್ನಸಂದ್ರ ಗ್ರಾಮದ ದಿ. ಪುಟ್ಟರಾಮು ಅವರ ಪುತ್ರ ಸಿ.ಪಿ.ನಾಗೇಂದ್ರ, ಪುತ್ರಿ ಸತ್ಯಶ್ರೀ ಹಾಗೂ ತಾಯಿ ಉಮಾ ಗಾಯಗೊಂಡು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಆರೋಪಿಗಳಾದ ಸುನೀಲ್‌ಕುಮಾರ್, ಜಗದೀಶ್ ಹಾಗೂ ಹೇಮಂತ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಮತ್ತೋರ್ವ ನೀತುಶ್ರೀಗೆ ಮಗು ಇರುವ ಕಾರಣ ನ್ಯಾಯಾಂಗ ಬಂಧನದಿಂದ ವಿನಾಯಿತಿ ನೀಡಲಾಗಿದೆ.

ಘಟನೆ ವಿವರ

ಚನ್ನಸಂದ್ರ ಗ್ರಾಮದ ಪುಟ್ಟರಾಮು ಅವರ ಪುತ್ರಿ ಸಿ.ಪಿ. ಸತ್ಯಶ್ರೀ ಅವರನ್ನು ಬೆಂಗಳೂರಿನ ನಾಗರಭಾವಿ ಬಡಾವಣೆಯ ಆರ್.ಸುನೀಲ್‌ಕುಮಾರ್ ಅವರಿಗೆ ಕಳೆದ ಮೂರು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು.

ವರದಕ್ಷಿಣೆ ರೂಪದಲ್ಲಿ 600 ಗ್ರಾಂ ಚಿನ್ನಾಭರಣ, ಬೆಳ್ಳಿ ಪದಾರ್ಥ, ಕಾರು ಖರೀದಿಗೆಂದು 15 ಲಕ್ಷ.ರೂ ಹಣವನ್ನು ನೀಡಿದ್ದರೂ, ಮದುವೆ ಬಳಿಕ ಪತಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಎನ್ನಲಾಗಿದ್ದು, ಬಾಣಂತನಕ್ಕೆ ಚನ್ನಸಂದ್ರದ ತವರಿಗೆ ಬಂದಿದ್ದ ಸತ್ಯಶ್ರೀ ಅವರ ಮನೆಗೆ ನುಗ್ಗಿದ ಪತಿ ಸುನೀಲ್‌ಕುಮಾರ್, ಭಾವ ಜಗದೀಶ್, ನಾದಿನಿ ನೀತುಶ್ರೀ ಮತ್ತು ಚಾಲಕ ಹೇಮಂತ್ ಎಂಬುವವರು ಸಹೋದರನ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿಯಲು ವಿಫಲ ಯತ್ನ ನಡೆಸಿದ್ದರು.

ಬಳಿಕ ಈತನ ರಕ್ಷಣೆಗೆ ಆಗಮಿಸಿದ ತಾಯಿ ಉಮಾ ಅವರನ್ನು ಅವ್ಯಾಚ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಲು ಯತ್ನಿಸಿದ್ದು, ತಮ್ಮ ಮನೆಯಲ್ಲಿ ದಾಂಧಲೆ ನಡೆಸಿದ್ದಾರೆಂದು ಸತ್ಯಶ್ರೀ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೃತ್ಯಕ್ಕೆ ಬಳಸಿದ ಕಾರು ಮತ್ತು ಅದರಲ್ಲಿದ್ದ ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ