Friday, September 20, 2024

ಪ್ರಾಯೋಗಿಕ ಆವೃತ್ತಿ

ಮಹಿಳೆ ಮೇಲೆ ಪೊಲೀಸರ ಹಲ್ಲೆ ಪ್ರಕರಣ| ಪೊಲೀಸ್ ಠಾಣೆ ಎದುರು ಪ್ರಗತಿಪರ ಮಹಿಳಾ ಸಂಘಟನೆಗಳ ಪ್ರತಿಭಟನೆ

ಮಂಡ್ಯನಗರದ ಪೂರ್ವ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಯ್ಯನ್ ಗೌಡ ಹಾಗೂ ಸಿಬ್ಬಂದಿ ಅಶೋಕ ನಗರದ ರೂಪ ಎಂಬ ಮಹಿಳೆಯನ್ನು ಠಾಣೆಗೆ ಕರೆದೊಯ್ದು ಮನಸೋ ಇಚ್ಚೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಆತನನ್ನು ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿ ವಿವಿಧ ಪ್ರಗತಿಪರ ಮಹಿಳಾ ಸಂಘಟನೆಗಳು ಪೂರ್ವ ಪೊಲೀಸ್ ಠಾಣೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಮನೆಯ ಮುಂದೆ ಕಟ್ಟಿದ್ದ ಕಾರಣವನ್ನು ನೆಪವಾಗಿ ಇಟ್ಟು ಕೊಂಡು ಮಹಿಳೆಗೆ ಅವ್ಯಾಚ ಶಬ್ದಗಳಿಂದ ಬೈದು ಪುರುಷ ಪೋಲಿಸರೆ ಮಹಿಳೆಯನ್ನು ಬಲವಂತವಾಗಿ, ಜೀಪ್ ಹತ್ತಿಸಿಕೊಂಡು ಠಾಣೆಗೆ ಕರೆದುಕೊಂಡು ಬಂದ ನಂತರ ಒಂದು ಕೋಣೆಯೊಳಗೆ ಲಾಕ್ ಮಾಡಿಕೊಂಡು ಅಯ್ಯನ್ ಗೌಡರ ಜೊತೆಗೆ ಹಲವು ಸಿಬ್ಬಂದಿಗಳು ಮಹಿಳಾ ಪೇದೆಯೂ ಒಳಗೊಂಡಂತೆ ಮನಸೋ ಇಚ್ಛೆ ಥಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

nudikarnataka.com

ಮಹಿಳೆಯನ್ನು ಪುರುಷ ಪೊಲೀಸರೇ ಬಂಧಿಸಿ ಕರೆತರಲು ಅವಕಾಶವಿದೆಯೇ ? ಮಹಿಳೆ ಮೇಲೆ ಪುರುಷ ಪೊಲೀಸರು ಹಲ್ಲೆ ನಡೆಸಲು ಅವಕಾಶವಿದೆಯೇ ? ಮಹಿಳೆ ಮೇಲೆ ಥಳಿಸಿದ್ದಲ್ಲದೇ, ಆಕೆಯ ಮೈಯನ್ನು ಸ್ಪರ್ಶಿಸಿದ್ದಾರೆ, ಇದಕ್ಕೆ ಅಧಿಕಾರಿ ನೀಡಿದರು ಯಾರು ? ಅಸಲಿ ದೂರುದಾರರು ಯಾರು ? ದೂರು ಇಲ್ಲದಿದ್ದರೆ ಸುಮೊಟೋ ಕೇಸ್ ದಾಖಲಿಸಲು ಅವಕಾಶವಿದೆಯೇ ? ಪೂರ್ವ ಪೊಲೀಸ್ ಠಾಣೆಯ ಪಕ್ಕದಲ್ಲೇ ಮಹಿಳಾ ಪೊಲೀಸ್ ಠಾಣೆ ಇದ್ದು, ಈ ಪ್ರಕರಣ ಅವರ ಗಮನಕ್ಕೆ ಬಂದಿಲ್ಲವೇ ? ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಇಲ್ಲದ ಕೊಠಡಿಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ, ಇದರ ಉದ್ದೇಶವೇನು ? ಸಿಸಿಟಿವಿ ಫೂಟೇಜ್ ಗಳನ್ನು ನೀಡಬೇಕೆಂದು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳನ್ನು ಪ್ರಗತಿಪರರ ಆಗ್ರಹಿಸಿದ್ದಾರೆ.

ಮಹಿಳೆಯನ್ನು ಕರೆತಂದ ನಂತರ ವಿವಿಧ ಪ್ರಗತಿಪರ ಸಂಘಟನೆಗಳು ಠಾಣೆಗೆ ಭೇಟಿ ನೀಡಿದಾಗ ಮಹಿಳೆಯ ಬಗ್ಗೆ ಯಾವ ದೂರು ಇಲ್ಲದೆ ವಿನಾಕಾರಣ ಮಹಿಳೆಯನ್ನು ಎಳೆದು ತಂದು ಮಾರಣಾಂತಿಕ ಹಲ್ಲೆ ನಡೆಸಿರುವುದು ಕಂಡು ಬಂದಿದೆ. ಪೊಲೀಸ್ ನವರ ಗೂಂಡಾ ವರ್ತನೆ ಬೆಳಕಿಗೆ ಬಂದಿದೆ. ಸಂವಿಧಾನ ವಿರೋಧಿ ಮತ್ತು ಮಾನವ ಹಕ್ಕುಗಳು ಹಾಗೂ ಮಹಿಳಾ ಹಕ್ಕುಗಳ ದಮನ ಮಾಡುತ್ತಾ ಕಾನೂನು ಬಾಹಿರವಾಗಿ ಪೊಲೀಸ್ ಇಲಾಖೆಯೇ ನಡೆದುಕೊಂಡಿರುವುದು ಖಂಡನೀಯ. ರಕ್ಷಣೆ ಕೊಡಬೇಕಾದ ಪೋಲಿಸ್ ನವರ ಈ ರೀತಿಯ ಗೂಂಡಾಗಿರಿ ನಡೆಸಿರುವುದು ಅಕ್ಷಮ್ಯ ಅಪರಾಧ. ಮಂಡ್ಯದ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ತಲೆ ತಗ್ಗಿಸುವಂತಹದ್ದು, ಮಹಿಳೆಯ ಘನತೆಗೆ ಕುಂದುಂಟು ಮಾಡಿ ಮನಸೋ ಇಚ್ಛೆ ದೇಹದ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆ ತಲೆತಗ್ಗಿಸುವಂತಹದ್ಧಾಗಿದೆ ಎಂದು ಪ್ರಗತಿಪರ ಸಂಘಟನೆಗಳು ದೂರಿವೆ.

ಈ ಘಟನೆಗೆ ಪ್ರಮುಖ ಕಾರಣವಾಗಿರುವ ಮಂಡ್ಯದ ಪೂರ್ವ ಪೋಲಿಸ್ ಠಾಣೆಯ ಸಬ್ ಇನ್ಸ್ ಫೆಕ್ಚರ್ ಅಯ್ಯನ್ ಗೌಡ ಮತ್ತು ಆತನ ಜೊತೆಗೆ ಸಹಕರಿಸಿರುವ ಸಿಬ್ಬಂದಿಗಳು ಅಮಾನತ್ತಾಗಬೇಕು. ಅಯ್ಯನ್ ಗೌಡ ರವರ ವಿರುದ್ಧ ಹಲವು ಗಂಭೀರವಾದ ಆರೋಪಗಳಿದ್ದು ಆತ ಬೇರಾವುದ ಜಾಗಕ್ಕೆ ಅಧಿಕಾರಿಯಾಗಿ ನೇಮಕವಾದರೂ ಇಂತಹ ಅಮಾಯಕರ ಮೇಲಿನ ದೌರ್ಜನ್ಯ ಮುಂದುವರೆಯುತ್ತದೆ, ಆದ್ದರಿಂದ ಆತನನ್ನು ಕೆಲಸದಿಂದಲೇ ವಜಾ ಮಾಡಬೇಕೆಂದು ಆಗ್ರಹಿಸಿದರು.

nudikarnataka.com

ಮಂಡ್ಯದ ಪೋಲಿಸ್ ಠಾಣೆಗಳು ಜನಸ್ನೇಹಿಯಾಗಿ ಮಹಿಳಾ ವಿಚಾರದಲ್ಲಿ ಸಂವೇದನಾಶೀಲಾರಾಗಿ ಕೆಲಸ ಮಾಡಬೇಕು. ನೊಂದ ಮಹಿಳೆಗೆ ಸೂಕ್ತ ರಕ್ಷಣೆ ಮತ್ತು ಆತನಿಂದ ಪರಿಹಾರ ಸಿಗುವಂತಾಗಬೇಕು. ಮಂಡ್ಯದಲ್ಲಿ ಪದೆ ಪದೇ ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಕುಮಾರಿ, ಮಹಿಳಾ ಮುನ್ನಡೆಯ ಪೂರ್ಣಿಮ, ರೈತಸಂಘದ ಲತಾ ಶಂಕರ್, ರಾಷ್ಟೀಯ ಭಾರತೀಯ ಮಾನವ ಹಕ್ಕುಗಳ ಸಂಘದ ರಾಧಾಮಣಿ ಬಿ.ಪಿ. ವಿಮೋಚನಾ ಮಹಿಳಾ ಸಂಘಟನೆಯ ಜನಾರ್ಧನ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಶಿಲ್ಪ, ಮಹದೇವಿ, ಕೃಷ್ಣ ಪ್ರಕಾಶ್, ಸಿಐಟಿಯು ಎಂ.ಬಿ.ಶಶಿಕಲಾ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!