Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಹೊಸ ಸಕ್ಕರೆ ಕಾರ್ಖಾನೆ ಘೋಷಿಸಿದ ಸಿಎಂಗೆ ಅಭಿನಂದನೆ: ರವಿಕುಮಾರ್ ಗಣಿಗ

ಕಳೆದ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಾಗಿ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದರು. ಅದರಂತೆ ಬಜೆಟ್ ನಲ್ಲಿ 500 ಕೋಟಿ ಹಣ ನೀಡುವ ಮೂಲಕ ನುಡಿದಂತೆ ನಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಂಡ್ಯ ಜಿಲ್ಲೆಯ ಜನತೆಯ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆಂದು ಶಾಸಕ ಗಣಿಗ ರವಿಕುಮಾರ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯದ ಸಕ್ಕರೆ ಕಾರ್ಖಾನೆ ಜಿಲ್ಲೆಯ ರೈತರ ಜೀವನಾಡಿ, ಬದುಕು ಎಲ್ಲವೂ ಆಗಿದೆ. ಅಯೋಧ್ಯೆಯಲ್ಲಿರುವ ರಾಮಮಂದಿರ, ಕಾಶಿಯಲ್ಲಿರುವ ವಿಶ್ವನಾಥ ಮಂದಿರದಂತೆ ನಮ್ಮ ಜಿಲ್ಲೆಗೆ ಮೈಷುಗರ್ ಕಾರ್ಖಾನೆ ಇದೆ.ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಯತ್ನದ ಫಲವಾಗಿ ನಿರ್ಮಾಣವಾಗಿರುವ ಮೈಸೂರು ಸಕ್ಕರೆ ಕಾರ್ಖಾನೆಗೆ 100 ವರ್ಷಗಳ ಇತಿಹಾಸವಿದ್ದು, ಈ ಕಾರ್ಖಾನೆಯನ್ನು ಮೇಲೆತ್ತಲು ಕಾರಣರಾದ ಸಿಎಂ ಸಿದ್ದರಾಮಯ್ಯನವರಿಗೆ,ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿಯವರೊಗೆ ಧನ್ಯವಾದ ಸಲ್ಲಿಸುತ್ತೇನೆ.ಇವರೆಲ್ಲರ ಇಚ್ಛಾಶಕ್ತಿಯಿಂದ ನೂತನ ಕಾರ್ಖಾನೆ ಸ್ಥಾಪನೆ ಆಗುತ್ತಿದ್ದು, ಶೀಘ್ರ ಭೂಮಿ ಪೂಜೆ ನಡೆಯಲಿದೆ ಎಂದರು.

ಉತ್ತಮ ತಂತ್ರಜ್ಞಾನದ ಸಕ್ಕರೆ ಕಾರ್ಖಾನೆ ನಿರ್ಮಾಣ

ಈಗಾಗಲೇ ಕಾಂಗ್ರೆಸ್ ಸರ್ಕಾರ 50 ಕೋಟಿ ಹಣವನ್ನು ಕಾರ್ಖಾನೆಗೆ ನೀಡಿತ್ತು. ಈಗ ಮತ್ತೆ 25 ಕೋಟಿ ಹಣ ನೀಡುವ ಮೂಲಕ ಒಟ್ಟಾರೆ 75 ಕೋಟಿ ರೂಗಳನ್ನು ಕಾರ್ಖಾನೆಗೆ ನೀಡಿದೆ. ಬಜೆಟ್ ನಲ್ಲಿ ಸರ್ಕಾರ ಹೊಸ ಕಾರ್ಖಾನೆಗೆ 100 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದು, ಉಳಿದ 400 ಕೋಟಿ ಹಣವನ್ನು ಸರ್ಕಾರವೇ ಮುಂದೆ ನಿಂತು ಸಾಲ ಸೌಲಭ್ಯದ ಮೂಲಕ ಕೊಡಿಸಲಿದೆ. ಈ ಹಣದಲ್ಲಿ ಉತ್ತಮ ತಂತ್ರಜ್ಞಾನದ ಸಕ್ಕರೆ ಕಾರ್ಖಾನೆ ನಿರ್ಮಾಣವಾಗಲಿದೆ ಎಂದರು.

ಸಾತನೂರು ಫಾರಂನಲ್ಲಿ ಜಾಗ

ನೂತನ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಸಾತನೂರು ಫಾರಂನಲ್ಲಿ ಜಾಗ ಗುರುತಿಸಲಾಗುವುದು. ಈಗಿರುವ ಸಕ್ಕರೆ ಕಾರ್ಖಾನೆ ಜಾಗದಲ್ಲಿ ಸಾಫ್ಟ್ ವೇರ್ ಪಾರ್ಕ್ ಮಾಡುವಂತೆ ಸರ್ಕಾರಕ್ಕೆ ನಾನು ಮನವಿ ಸಲ್ಲಿಸಿದ್ದೇನೆ. ಸಾಫ್ಟ್ ವೇರ್ ಪಾರ್ಕ್ ನಿರ್ಮಾಣವಾದರೆ ಸಾವಿರಾರು ಉದ್ಯೋಗದ ಅವಕಾಶಗಳು ದೊರಕಲಿವೆ ಎಂದರು.

ಮೈ,ಷುಗರ್ ಕಾರ್ಖಾನೆ ನಮಗೆ ರಾಮ ಮಂದಿರ ವಿದ್ದಂತೆ. ಎಲ್ಲರಿಗೂ ಕಾರ್ಖಾನೆ ನಮ್ಮದು ಎಂಬ ಭಾವನೆ ಮೂಡಿಸಲು ಪ್ರತಿ ಮನೆಯಿಂದ ಒಂದು ಹಿಡಿ ಮಣ್ಣನ್ನು ಸಂಗ್ರಹಿಸಿ ಮೈ ಶುಗರ್ ಕಾರ್ಖಾನೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು ಎಂದರು.

ವಿ.ಸಿ.ಫಾರ್ಮ್ ನಲ್ಲಿ ಕೃಷಿ ವಿಶ್ವವಿದ್ಯಾನಿಲಯ

ಬಜೆಟ್ ನಲ್ಲಿ ವಿ.ಸಿ.ಫಾರ್ಮ್ ನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಕೃಷಿ ಆಧಾರಿತ ಜಿಲ್ಲೆಯಾದ ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಾದರೆ ಬೆಂಗಳೂರು, ಧಾರವಾಡದಂತೆ ಕೃಷಿ ವಿಶ್ವವಿದ್ಯಾನಿಲಯ ವಿಸ್ತಾರವಾಗಿ ಹೊಸ ಹೊಸ ಸಂಶೋಧನೆಗಳು ನಡೆಯಲು ಅನುಕೂಲವಾಗುತ್ತದೆ ಎಂದರು.

ಬಸರಾಳು, ದುದ್ದ, ನಾಗಮಂಗಲ ಭಾಗದ ನಾಲೆಗಳ ದುರಸ್ತಿಗೂ ಬಜೆಟ್ ನಲ್ಲಿ ಹಣ ನೀಡಲಾಗಿದೆ. ಸಾರ್ವಜನಿಕ ಆರೋಗ್ಯ ಪ್ರಯೋಗ ಶಾಲೆಗಳ ನಿರ್ಮಾಣ,ಮಿಮ್ಸ್ ಆಸ್ಪತ್ರೆ ಮೇಲ್ದರ್ಜೆಗೇರಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

ಶೀಘ್ರದಲ್ಲೇ ಭೂಮಿಪೂಜೆ

ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದ್ದು, ಈ ಹಿಂದೆ 2019 ರಲ್ಲಿದ್ದ ಜೆಡಿಎಸ್ ಸರ್ಕಾರದಂತೆ ಕೇವಲ ಘೋಷಣೆ ಮಾಡಿ ಸುಮ್ಮನಿರುವ ಸರ್ಕಾರ ನಮ್ಮದಲ್ಲ. ಶೀಘ್ರ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಯವರನ್ನು ಕರೆದುಕೊಂಡು ಬಂದು ಭೂಮಿ ಪೂಜೆ ಮಾಡುತ್ತೇನೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹೊಸ ಕಾರ್ಖಾನೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ ಎಂಬುದು ತಪ್ಪು ಕಲ್ಪನೆ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಜನಸ್ಪಂದನೆ ಯಾತ್ರೆ ಬಹಳ ಚೆನ್ನಾಗಿ ನಡೆಯುತ್ತಿದೆ. ಇದರಿಂದ ಸ್ಥಳೀಯವಾಗಿ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ಬಗೆಹರಿಸಲು ಪ್ರಯತ್ನ ನಡೆಸುತ್ತಿದ್ದೇನೆ. ಜಿಲ್ಲಾಸ್ಪತ್ರೆಯಲ್ಲಿರುವ ವೈದ್ಯರು ಪ್ರಾಮಾಣಿಕವಾಗಿ ಮನಸ್ಸಿನಿಂದ ಕೆಲಸ ಮಾಡಬೇಕು. ನಾನು ವೈದ್ಯರ ಅಲಭ್ಯತೆ ಬಗ್ಗೆ ಸಾಕಷ್ಟು ಬಾರಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಇರುವ ಸೌಲಭ್ಯಗಳನ್ನು ಬಳಸಿಕೊಂಡು ಕ್ಷೇತ್ರದ ಜನರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾ. ಪಂ.ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ನಗರಸಭಾ ಸದಸ್ಯ ಶ್ರೀಧರ್, ನಗರ ಘಟಕದ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಚ್.ಕೆ.ರುದ್ರಪ್ಪ, ಜಿ.ಪಂ. ಮಾಜಿ ಸದಸ್ಯ ಜಿ.ಸಿ.ಆನಂದ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!