Thursday, September 19, 2024

ಪ್ರಾಯೋಗಿಕ ಆವೃತ್ತಿ

’ಧೈರ್ಯವಾಗಿ ಪ್ರಶ್ನಿಸಲು’ ಬಿಜೆಪಿಯವರೇಕೆ ಅಧೀರಗೊಂಡಿದ್ದಾರೆ ?

✍️ ಮಾಚಯ್ಯ ಎಂ ಹಿಪ್ಪರಗಿ

ಶಾಲೆಯ ಬಾಗಿಲಲ್ಲಿ ಕುವೆಂಪು ಅವರ ಘೋಷವಾಕ್ಯ ‘ಜ್ಞಾನದೇಗುಲವಿದು ಕೈಮುಗಿದು ಒಳಗೆ ಬಾ’ ಅನ್ನೋದನ್ನು ವಸತಿಶಿಕ್ಷಣ ಇಲಾಖೆ ‘ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸು’ ಎಂದು ಬದಲಾಯಿಸಿದೆ ಎಂದು ಬಿಜೆಪಿ ಮತ್ತು ಅದರ ಬಕೇಟ್ ಮೀಡಿಯಾಗಳು ಇನ್ನಿಲ್ಲದಂತೆ ಬೊಬ್ಬಿಡುತ್ತಿವೆ. ಕುವೆಂಪು ಅವರ ಮೇಲೆ ದಿಢೀರ್ ಮಮಕಾರ ಉಕ್ಕಿದವರಂತೆ ’ಸರ್ಕಾರದಿಂದ ಕುವೆಂಪು ಅವರಿಗೆ ಅನ್ಯಾಯವಾಗಿದೆ’ ಅಂತ ಹೈಸ್ಕೂಲ್ ಹೈದ ವಿಜಯೇಂದ್ರ ಕೂಡಾ ಗೋಳಾಡುತ್ತಿದ್ದಾನೆ. ಕುವೆಂಪು ಅವರು ತಮ್ಮ ಇಡೀ ಬದುಕು, ಸಾಹಿತ್ಯ ಮತ್ತು ವಿಚಾರದ ಮೂಲಕ ಬಿಜೆಪಿಯವರು ಮತ್ತು ಅದರ ಸನಾತನಿಗಳ ಕುಂಡೆ ಮೇಲೆ ಅದೆಷ್ಟು ಬಾಸುಂಡೆ ಮೂಡಿಸಿದ್ದಾರೋ ಗೊತ್ತಿಲ್ಲ. ಆ ಕಾರಣಕ್ಕೆ ಕುವೆಂಪು ಅವರನ್ನು ನಖಾಶಿಖಾಂತ ದ್ವೇಷಿಸುವ ಬಿಜೆಪಿಯವರು ಇವತ್ತು ಕುವೆಂಪು ಅವರ ಬಗ್ಗೆ ಮಾತಾಡುತ್ತಿರುವುದೇ ಹಾಸ್ಯಾಸ್ಪದ.

ಕುವೆಂಪು ವಿರಚಿತ ನಾಡಗೀತೆಯನ್ನು ಅಶ್ಲೀಲವಾಗಿ ತಿರುಚಿ ಪ್ರಚಾರ ಮಾಡಿದ ಪೆಕ್ರತೀರ್ಥ ಎಂಬ ರೋಡ್‌ಸೈಡ್ ಬುದ್ದಿವಿಕಲನನ್ನು ಹುಡುಕಿತಂದು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ‘ಚೋರ್ಮನ್ ಮಾಡಿದ್ದ ಬಿಜೆಪಿಯವರು ಆತನ ಮೂಲಕ ಕುವೆಂಪು ಅವರಿಗೆ ಅವಮಾನ ಮಾಡಬೇಕು ಅಂತಲೇ ಪಠ್ಯಪುಸ್ತಕಗಳಲ್ಲಿ ಕುವೆಂಪು ಅವರನ್ನು ಪರಿಚಯಿಸುವ ಎಲ್ಲಾ ಕಡೆಗಳಲ್ಲಿ ಕರ್ನಾಟಕದ ‘ಎರಡನೇ’ ರಾಷ್ಟ್ರಕವಿ ಎಂದು ಉದ್ದೇಶಪೂರ್ವಕವಾಗಿ ಕೀಳುತನ ತೋರಿದ್ದರು. ಅಂದರೆ, ಕುವೆಂಪು ಮೇರುಕವಿಯೇನಲ್ಲ, ಅವರಿಗಿಂತ ಮೊದಲೇ ಬೇರೊಬ್ಬರೂ ರಾಷ್ಟ್ರಕವಿಯಿದ್ದರು ಎಂದು ಮೂದಲಿಸುವುದು ಬಿಜೆಪಿಯ ಉದ್ದೇಶವಾಗಿತ್ತು.

ಹೋಗಲಿ ಬಿಡಿ, ಕುವೆಂಪು ಅವರ ವಿಚಾರಕ್ರಾಂತಿಗೂ ಬಿಜೆಪಿಯವರ ಅನಾಚಾರ ಭ್ರಾಂತಿಗೂ ಇರುವ ಎಣ್ಣೇಸೀಗೆಕಾಯಿ ಸಂಬಂಧವನ್ನು ಎಳೆಎಳೆಯಾಗಿ ಬಿಡಿಸಿಹೇಳಿದರೆ ಅರಗಿಸಿಕೊಳ್ಳುವ ಜಠರಶಕ್ತಿ ಚೆಡ್ಡಿಗಳಿಗಿಲ್ಲ. ಪ್ರಸ್ತುತ ವಿಚಾರ ಏನಂದ್ರೆ, ‘ಧೈರ್ಯವಾಗಿ ಪ್ರಶ್ನಿಸು’ ಎಂಬ ಎರಡು ಪದಗಳಿಗೆ ಬಿಜೆಪಿಯವರು ಯಾಕಿಷ್ಟು ಪತರುಗುಟ್ಟುತ್ತಿದ್ದಾರೆ ಅನ್ನೋದು? ಎಷ್ಟರಮಟ್ಟಿಗೆಂದರೆ ತಮ್ಮ ಸಿದ್ಧಾಂತದ ಕಡುವಿರೋಧಿಯಾದ ಕುವೆಂಪು ಅವರನ್ನೇ ಆಸರೆಯಾಗಿಸಿಕೊಳ್ಳುವಷ್ಟು ಗಲಿಬಿಲಿಗೊಂಡಿದ್ದಾರೆ.

ಕಾರಣ ಇಷ್ಟೆ, ಈ ಬಿಜೆಪಿಯವರಿಗೆ ಮತ್ತವರ ಮೂಲ ಸನಾತನಿಗಳಿಗೆ ಪ್ರಶ್ನೆಯೆಂದರೇ ಅಲರ್ಜಿ! ಯಾರೂ ಏನನ್ನೂ ಪ್ರಶ್ನಿಸದೆ ಅವರು ಹೇಳಿದ್ದನ್ನು ಒಪ್ಪಿಕೊಳ್ಳುತ್ತಾ ಹೋಗಬೇಕು. ಅಂದರೆ, ಗುಲಾಮಗಿರಿ ಮಾಡಿಕೊಂಡಿರಬೇಕಷ್ಟೆ. ಗುಲಾಮಿತನ, ದಬ್ಬಾಳಿಕೆ, ದೌರ್ಜನ್ಯ, ಅನ್ಯಾಯಗಳಿಂದ ಬಿಡುಗಡೆ ಪಡೆಯುವ ಮೊದಲ ಕೀಲಿಕೈ ‘ಪ್ರಶ್ನೆ’! ಒಬ್ಬ ವ್ಯಕ್ತಿ ಪ್ರಶ್ನಿಸಲು ಶುರು ಮಾಡಿದರೆ, ಅವನು ಸತ್ಯದ ಕಡೆಗೆ ಮುಖ ಮಾಡುತ್ತಿದ್ದಾನೆ ಎಂದರ್ಥ. ಅವನಿಗೆ ಸತ್ಯದ ಅನಾವರಣ ಆಯಿತೆಂದರೆ, ಇವರ ಸುಳ್ಳುಗಳನ್ನು ಯಾಕೆ ನಂಬುತ್ತಾನೆ? ಅವುಗಳ ಹುನ್ನಾರಕ್ಕೆ ಯಾಕೆ ಬಲಿಯಾಗುತ್ತಾನೆ?

ನೀನು ಬ್ರಹ್ಮನ ಕಾಲಿನಿಂದ ಹುಟ್ಟಿದವನು; ಹಾಗಾಗಿ ನೆತ್ತಿಯಿಂದ ಜನ್ಮವೆತ್ತಿದ ನಮ್ಮ ಸೇವೆ ಮಾಡಿಕೊಂಡು ಬಿದ್ದಿರಬೇಕು ಎಂಬ ಸುಳ್ಳನ್ನು ಪ್ರಶ್ನಿಸದೆ ಒಪ್ಪಿಕೊಂಡು ಚಾಕರಿ ಮಾಡಿಕೊಂಡಿರುವವರನ್ನು ಮಾತ್ರ ಅವರು ಬಯಸುತ್ತಾರೆ. ಹುಟ್ಟಿಸುವುದಕ್ಕೆಂದೇ ಈ ಪ್ರಕೃತಿ ನಮಗೆ ಜನನೇಂದ್ರಿಯಗಳನ್ನೂ, ಗರ್ಭಾಶಯವನ್ನೂ ಕೊಟ್ಟಿರುವಾಗ ಒಬ್ಬ ನೆತ್ತಿಯಿಂದ, ಮತ್ತೊಬ್ಬ ಪಾದದಿಂದ ಹುಟ್ಟಲು ಹೇಗೆ ಸಾಧ್ಯ? ಎಂಬ ಪ್ರಶ್ನೆಯನ್ನು ಮುಂದಿಟ್ಟರೆ ಅವರು ಗಲಿಬಿಲಿಗೊಳ್ಳುತ್ತಾರೆ. ನಿಮ್ಮ ಪ್ರಶ್ನಿಸುವ ಧೈರ್ಯವನ್ನೇ ಹುಟ್ಟಡಗಿಸಿ, ಕರ್ಮಫಲದ ನಾನ್‌ಸೆನ್ಸ್ ಬ್ಯಾಲೆನ್ಸ್ ಶೀಟ್‌ಗಳನ್ನು ಮುಂದಿಟ್ಟು ಹೆದರಿಸುತ್ತಾರೆ. ಯಾಕೆ ಹೆದರಿಸುತ್ತಾರೆಂದರೆ, ನಮ್ಮ ಪ್ರಶ್ನೆಯಿಂದ ಸ್ವತಃ ಅವರೇ ಹೆದರಿರುತ್ತಾರೆ ಅದಕ್ಕೆ. ಈಗ ಬಿಜೆಪಿಯವರು ಹೆದರಿರುವುದು ಥೇಟು ಇದೇ ಕಾರಣಕ್ಕೆ!!

ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬೇಡ ಎಂದವನು ಬುದ್ಧ; ಪ್ರಶ್ನಿಸುವ ಪರಂಪರೆಯನ್ನು ಪ್ರತಿ ಹಟ್ಟಿಗೆ-ಕೇರಿಗೆ ತಂದವರು ಬಸವಣ್ಣ; ಪ್ರಶ್ನಿಸಲು ಏನೆಲ್ಲಾ ತಯಾರಿಯಿರಬೇಕು, ಪ್ರಶ್ನಿಸುವ ಪಟ್ಟು ಹೇಗಿರಬೇಕು ಎಂದು ತೋರಿಸಿಕೊಟ್ಟವರು ಅಂಬೇಡ್ಕರ್; ಮುಖಾಮುಖಿಯಾದ ಪ್ರಶ್ನೆಗಳಿಂದ ತನ್ನನ್ನು ತಾನು ನಿರಂತರ ಪರಿವರ್ತಿಸಿಕೊಳ್ಳುತ್ತಾ ಆ ಮೂಲಕ ನಮಗೆ ಪಾಠವಾದವರು ಗಾಂಧಿ…. ಇವರನ್ನೆಲ್ಲ ಸಾರಾಸಗಟಾಗಿ ದ್ವೇಷಿಸುವವರು ಬಿಜೆಪಿಯವರು! ಆ ಕಾರಣಕ್ಕೇ ‘ಧೈರ್ಯವಾಗಿ ಪ್ರಶ್ನಿಸಿ’ ಎಂಬ ಯಕಶ್ಚಿತ್ ಗೋಡೆಬರಹಕ್ಕೆ ಹೆದರಿ ವಿಲವಿಲ ಒದ್ದಾಡುತ್ತಿದ್ದಾರೆ.

ಎಷ್ಟೇ ಆಗಲಿ, ಪ್ರಶ್ನೆಗಳಿಗೆ ಹೆದರಿ ಹತ್ತು ವರ್ಷದಲ್ಲಿ ಒಮ್ಮೆಯೂ ಸಾರ್ವಜನಿಕ ಪತ್ರಿಕಾಗೋಷ್ಠಿಯನ್ನ ನಡೆಸದ ವ್ಯಕ್ತಿಯ ಮುಂದೆ ನಡುಬಗ್ಗಿಸಿ ‘ಕೈಮುಗಿದು’ ಗುಲಾಮಗಿರಿ ಮಾಡುವವರಲ್ಲವೇ ಈ ಬಿಜೆಪಿಯವರು! ಅಂತವರು ಪ್ರಶ್ನಿಸುವಿಕೆಯನ್ನು ಹೇಗೆ ತಾನೆ ಒಪ್ಪಿಕೊಂಡಾರು…!?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!