Friday, September 20, 2024

ಪ್ರಾಯೋಗಿಕ ಆವೃತ್ತಿ

1,07,305 ಮಹಿಳಾ ದೌರ್ಜನ್ಯ ಸಂಬಂಧಿತ ಕರೆಗಳು ಸ್ವೀಕೃತ- ಲಕ್ಷ್ಮೀ ಹೆಬ್ಬಾಳ್ಕರ್

ಕಳೆದ ಮೂರು ವರ್ಷಗಳಲ್ಲಿ ಕಿರುಕುಳ, ದೌರ್ಜನ್ಯ, ನಿಂದನೆ, ವೈದ್ಯಕೀಯ, ಆಶ್ರಯ, ಪುನರ್ ವಸತಿ ಸೇರಿದಂತೆ ವಿವಿಧ ಕಾರಣಗಳಿಗಾಗಿ ಸೌಲಭ್ಯ, ರಕ್ಷಣೆ ಕೋರಿ ಒಟ್ಟು 1,07,305 ಕರೆಗಳು ಸ್ವೀಕೃತವಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ತಿಳಿಸಿದರು.

ಕಾಂಗ್ರೆಸ್ ಶಾಸಕ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಮಾಹಿತಿ ಸಹಿತ ಉತ್ತರಿಸಿರುವ ಹೆಬ್ಬಾಳ್ಕರ್, ಸ್ವಯಂ ಸೇವಾ ಸಂಸ್ಥೆಯ ಮೂಲಕ ನಿರ್ವಹಿಸಲಾಗುತ್ತಿದ್ದ ಉಚಿತ ಮಕ್ಕಳ ಸಹಾಯವಾಣಿ ಸಂಖ್ಯೆ1098 ಅನ್ನು ಹಿಂಪಡೆದು ‘ಮಿಷನ್ ವಾತ್ಸಲ್ಯ ಯೋಜನೆ’ಯಡಿ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ-112 (ಇ.ಆರ್.ಎಸ್.ಎಸ್.) ಯೊಂದಿಗೆ ವಿಲೀನಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ 3 ವರ್ಷಗಳಲ್ಲಿ 2506 ದೌರ್ಜನ್ಯ, 1526 ಕಿರುಕುಳ, 852 ಆಶ್ರಯ, 328 ನಿಂದನೆ, 223 ಪುನರ್ ವಸತಿ, 141 ವೈದ್ಯಕೀಯ ಸೇರಿದಂತೆ 1,01,729 ಕರೆಗಳು ಸೇರಿದಂತೆ ರಾಜ್ಯದಾದ್ಯಂತ ಒಟ್ಟು 1,07,305 ಕರೆಗಳು ಸ್ವೀಕೃತವಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಸ್ವದೇಶಿ ಮತ್ತು ವಿದೇಶಿ ದತ್ತು ಪ್ರಕ್ರಿಯೆ ಪ್ರಕಾರ, 2013-14ನೇ ಸಾಲಿನಿಂದ 17 ಫೆಬ್ರವರಿ 2024ರವರೆಗೆ ಒಟ್ಟು 3,175 ಮಕ್ಕಳನ್ನು ದತ್ತು ನೀಡಲಾಗಿದೆ. ಇದರಲ್ಲಿ ಸ್ವದೇಶಿ ದತ್ತು ಪೋಷಕರಿಗೆ ಒಟ್ಟು 2,880 ಮಕ್ಕಳನ್ನು ಹಾಗೂ ವಿದೇಶಿ ದತ್ತು ಪೋಷಕರಿಗೆ 295 ಮಕ್ಕಳನ್ನು ದತ್ತು ನೀಡಲಾಗಿದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಬಾಲನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ, 2015ರಡಿ ಗುರುತಿಸಲ್ಪಡುವ ಅನಾಥ, ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳ ಪುನರ್ವಸತಿಗಾಗಿ ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!