Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನೂತನ 10 KSRTC ಬಸ್ಸುಗಳಿಗೆ ಚಲುವರಾಯಸ್ವಾಮಿ ಚಾಲನೆ

ಗ್ರಾಮೀಣ ಭಾಗದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಮಂಡ್ಯ ಜಿಲ್ಲಾದ್ಯಂತ ಸಂಚರಿಸಲು 10 ನೂತನ ಬಸ್ ಗಳಿಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಇಂದು ಮಂಡ್ಯ ಕೇಂದ್ರ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು.

ಜಿಲ್ಲೆಯಾದ್ಯಂತ ಹಾಗೂ ಹೊರ ಜಿಲ್ಲೆ, ರಾಜ್ಯಗಳಿಗೆ ಮಂಡ್ಯ ನಗರದಿಂದ ಸಂಚರಿಸಲು ಇನ್ನೂ 50 ರಿಂದ 100 ಬಸ್ ಗಳ ಅವಶ್ಯಕತೆ ಇದೆ ಎಂದು ಕೆ ಎಸ್ ಆರ್ ಸಿ ನಿಗಮಕ್ಕೆ ಮನವಿ ಮಾಡಲಾಗಿದೆ. ಎಲ್ಲೆಲ್ಲಿ ಜನರಿಗೆ ಬಸ್ ಗಳ ಕೊರತೆ ಇದೆ ಅಲ್ಲಿಗೆ ಹಂತ ಹಂತವಾಗಿ ಬಸ್ ಗಳ ಸೇವೆ ಒದಗಿಸಲಾಗುವುದು ಎಂದರು.

ಮಂಡ್ಯ ಬಸ್ ನಿಲ್ದಾಣದ ವಿಭಾಗವು 2006 ರಲ್ಲಿ ಪ್ರಾರಂಭವಾಯಿತು. ವಿಭಾಗವು ಪ್ರಸ್ತುತ 451 ಅನುಸೂಚಿ ಗಳನ್ನು 475 ವಾಹನಗಳ ಬಲದಿಂದ ಕಾರ್ಯಾಚರಣೆ ಮಾಡಿ ಪ್ರತಿ ನಿತ್ಯ 1.65 ಲಕ್ಷ ಕಿ.ಮೀ ಕ್ರಮಿಸಿ ‌ರೂ.73.09 ಲಕ್ಷ ಆದಾಯವನ್ನು ಗಳಿಸುತ್ತಿದೆ ಎಂದರು.

ಮಂಡ್ಯ ಬಸ್ ನಿಲ್ದಾಣಕ್ಕೆ ಬೇಕಿರುವ ಬದಲಾವಣೆಗಳ ಬಗ್ಗೆ ಡಿ.ಪಿ‌.ಆರ್ ಮಾಡಿ ಸಾರಿಗೆ ಸಚಿವರಿಗೆ ಬಸ್ ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಿಕೊಡುವಂತೆ ಮನವಿ ಮಾಡಲಾಗುವುದು. ಲೋಕಸಭಾ ಚುನಾವಣೆಯ ನಂತರ ಕ್ರಮ ವಹಿಸಲಾಗುವುದು ಎಂದರು.

ಶಕ್ತಿ ಯೋಜನೆಯಿಂದ ಮಹಿಳಾ ಸಬಲೀಕರಣದ ದಿಟ್ಟ ಹೆಜ್ಜೆ

ಶಕ್ತಿ ಯೋಜನೆ ಜಾರಿಯಾದ ಹಿನ್ನಲೆ ಮಹಿಳಾ ಪ್ರಯಾಣಿಕರ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದು, ಮಂಡ್ಯ ವಿಭಾಗದ ವ್ಯಾಪ್ತಿಯ ವಾಹನಗಳಲ್ಲಿ ಫೆಬ್ರವರಿ 2024 ಅಂತ್ಯದವರೆಗೆ ಒಟ್ಟು 4.67 ಕೋಟಿ ಪ್ರಯಾಣಿಕರು ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ.

ಜಿಲ್ಲೆಯಲ್ಲಿ ಶಕ್ತಿ ಯೋಜನೆ ಜಾರಿಯಾಗುವ ಮೊದಲು 2.04 ಲಕ್ಷ ದೈನಂದಿನ ಪ್ರಯಾಣಿಕರಿದ್ದು, ಶಕ್ತಿ ಯೋಜನೆ ಜಾರಿಯಾದ ನಂತರ 2.79 ಲಕ್ಷ ದೈನಂದಿನ ಪ್ರಯಾಣಿಕರಿ ಪ್ರಯಾಣಿಸುತ್ತಿದ್ದು, ಇದೀಗ ದೈನಂದಿನ ಆದಾಯ ರೂ.70.39 ಲಕ್ಷವಿದೆ.

ಶಕ್ತಿ ಯೋಜನೆಯಿಂದ ಮಹಿಳೆಯರು ಸಬಲರಾಗಿದ್ದು, ಮಹಿಳೆಯರು ಎಲ್ಲಿಯಾದರೂ ಸ್ವತಂತ್ರವಾಗಿ ತಿರುಗಾಡಬಹುದು.‌ಈ ಮೂಲಕ ಅವರ ಆತ್ಮ ಸ್ಥೈರ್ಯ ಹೆಚ್ಚುತ್ತಿದೆ.

2.80 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ

ವಿಭಾಗದ ಪ್ರಮುಖ ಆದಾಯ ಮೂಲವಾದ ಮಂಡ್ಯ-ಬನ್ನೂರು-ಟಿ.ನರಸೀಪುರ, ಮದ್ದೂರು- ಕೊಪ್ಪ ಹಾಗೂ ನಾಗಮಂಗಲ-ಶ್ರೀನಗರ, ಕೆ.ಆರ್.ಪೇಟೆ-ನಾಗಮಂಗಲ, ಶ್ರೀರಂಗಪಟ್ಟಣ- ಬನ್ನೂರು, ಮಂಡ್ಯ-ಮಳವಳ್ಳಿ, ಮಂಡ್ಯ-ನಾಗಮಂಗಲ ಇನ್ನಿತರ ಖಾಸಗಿ ವಾಹನಗಳು ಹೆಚ್ಚಾಗಿ ಸಂಚರಿಸುವ ಮಾರ್ಗಗಳಲ್ಲಿ ಖಾಸಗಿ ವಾಹನಗಳಿಗೆ ಪೈಪೋಟಿ ನೀಡಿ ಕಾರ್ಯಾಚರಣೆ ಮಾಡಲಾಗುತ್ತಿದೆ.

ಪ್ರತಿ ನಿತ್ಯ ವಿದ್ಯಾರ್ಥಿ ಪಾಸ್, ದೈನಂದಿನ ಪಾಸ್, ಅಂಗವಿಕಲರ ಪಾಸ್ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಪಾಸ್ ಪ್ರಯಾಣಿಕರನ್ನು ಒಳಗೊಂಡಂತೆ ಸುಮಾರು 2.80 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದರು.

ಮಂಡ್ಯ ವಿಭಾಗವು ಮಂಡ್ಯ ಮದ್ದೂರು, ಕೊಪ್ಪ, ಕೆ.ಎಂ.ದೊಡ್ಡಿ, ಬೆಸಗರಹಳ್ಳಿ, ಮಳವಳ್ಳಿ, ಬನ್ನೂರು, ಬೆಳಕವಾಡಿ, ಹಲಗೂರು, ನಾಗಮಂಗಲ, ಆದಿಚುಂಚನಗಿರಿ, ಕೆ.ಆರ್.ಪೇಟೆ, ಕಿಕ್ಕೇರಿ, ಪಾಂಡವಪುರ, ಶ್ರೀರಂಗಪಟ್ಟಣ, ಮೇಲುಕೋಟೆ, ಚಿನಕುರುಳಿ ಹಾಗೂ ಜಕ್ಕನಹಳ್ಳಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣಗಳನ್ನು ಹೊಂದಿದೆ. ಮಂಡ್ಯ ವಿಭಾಗ ವ್ಯಾಪ್ತಿಯಲ್ಲಿ 18 ಬಸ್ ನಿಲ್ದಾಣಗಳಿದ್ದು, ಈ ನಿಲ್ದಾಣದಿಂದ ಪ್ರಮುಖ ಸ್ಥಳಗಳಿಗೆ, ಪ್ರೇಕ್ಷಣೀಯ ಸ್ಥಳಗಳಿಗೆ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಸಾರಿಗೆ ಸಂಪರ್ಕವನ್ನು ಕಲ್ಪಿಸಲಾಗಿದೆ. ಎಲ್ಲಾ ಬಸ್ ನಿಲ್ದಾಣಗಳಲ್ಲಿಯೂ ಪ್ರಯಾಣಿಕರಿಗೆ ಮಹಿಳಾ ನಿರೀಕ್ಷಣಾ ಕೊಠಡಿ, ಶೌಚಾಲಯಗಳು ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಶಾಸಕ ಪಿ.ರವಿಕುಮಾರ್, ನರೇಂದ್ರಸ್ವಾಮಿ, ಕೆ.ಎಂ ಉದಯ್, ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು, ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕ ನಾಗರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!