ಮಂಡ್ಯ ತಾಲೂಕಿನ ಹನಕೆರೆ-ಗೌಡಗೆರೆ ಗೇಟ್ ಬಳಿ ಕೆಳ ಸೇತುವೆ (ಅಂಡರ್ ಪಾಸ್) ನಿರ್ಮಿಸುವಂತೆ ಆಗ್ರಹಿಸಿ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಉಪವಾಸ ಸತ್ಯಾಗ್ರಹ ನಡೆಸಿದರು. ಈ ಹೋರಾಟದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಭಾಗವಹಿಸುವ ಮೂಲಕ ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿದರು.
ರಾಮನಗರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ ಮುಂಭಾಗ ನೂರಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ ಗಣಿಗ ರವಿಕುಮಾರ್,ನಮಗೆ ಯಾವ ಕಾರಣಕ್ಕೂ ಮೇಲ್ಸೇತುವೆ ಬೇಡ, ರೈತರು, ಮಹಿಳೆಯರು, ಜನಸಾಮಾನ್ಯರಿಗೆ ಅನುಕೂಲವಾಗಲು ಅಂಡರ್ ಪಾಸ್ ನಿರ್ಮಾಣ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಂಡರ್ ಪಾಸ್ ಗೆ ಅನುಮತಿ ನೀಡುವವರೆಗೂ ನಾವು ಇಲ್ಲೇ ಇರುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಅಂಡರ್ ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ ವಿಧಾನಸಭಾ ಚುನಾವಣೆಗೂ ಮುನ್ನ ಸಾವಿರಾರು ರೈತರು, ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧಿಕಾರಿಗಳು ಪೋಲೀಸಿನವರಿಗೆ ದೂರು ನೀಡಿ ರೈತರು ಮಹಿಳೆಯರ ಮೇಲೆ ಲಾಠಿ ಪ್ರಹಾರ ಮಾಡಿಸಿದ್ದರು. ಈಗ ಮೇಲ್ಸೇತುವೆಗಾಗಿ ಸ್ಥಳ ಪರಿಶೋಧನೆ ಮಾಡುತ್ತಿದ್ದಾರೆ. ಮೇಲ್ಸೇತುವೆ ನಿರ್ಮಾಣ ಮಾಡಿದರೆ ಬೈಕ್ ಸವಾರರಿಗೆ, ಕಬ್ಬಿನ ಗಾಡಿ, ಟ್ಯಾಕ್ಟರ್ ಗಳಿಗೆ ತೊಂದರೆಯಾಗಲಿದೆ.ಸುಮಾರು 50 ರಿಂದ 1 ಲಕ್ಷ ಜನರಿಗೆ ಅಂಡರ್ ಪಾಸ್ ನಿರ್ಮಿಸಿದರೆ ಅನುಕೂಲ ಎಂದರು.

ಡಿ.ಕೆ.ಸುರೇಶ್ ಸಾಥ್
ಮಂಡ್ಯ ತಾಲೂಕಿನ ಹನಕೆರೆ-ಗೌಡಗೆರೆ ಗೇಟ್ ಬಳಿ ಅಂಡರ್ ಪಾಸ್ ನಿರ್ಮಿಸಲು ಆಗ್ರಹಿಸಿ ರಾಮನಗರದ ಬಸವನಪುರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಚೇರಿ ಮುಂಭಾಗ ಮಂಡ್ಯ ಶಾಸಕ ಗಣಿಗ ರವಿಕುಮಾರ್ ನಡೆಸುತ್ತಿರುವ ಹೋರಾಟ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸಂಸದ ಡಿ.ಕೆ.ಸುರೇಶ್ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎನ್.ಹೆಚ್ 275 ಹೆದ್ದಾರಿಯು ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ, ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಆದ್ದರಿಂದ ಎಲ್ಲಿ ಕೆಳ ಸೇತುವೆಗಳು ಅಗತ್ಯವಿದೆಯೋ ಅಲ್ಲಿ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಆಗ್ರಹಿಸಿದರು.
ಸುಳ್ಳು ಹೇಳಿಕೆ
ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳು ಈ ಹಿಂದೆ 8 ಕೋಟಿ ವೆಚ್ಚದಲ್ಲಿ ಅಂಡರ್ ಪಾಸ್ ನಿರ್ಮಿಸುವುದಾಗಿ ಹೇಳಿದ್ದರು. ಆದರೆ ಈಗ ಗುತ್ತಿಗೆದಾರರು ಸಿಗುತ್ತಿಲ್ಲ ಎಂದು ಕಾರಣ ಹೇಳುತ್ತಿದ್ದಾರೆ. ಹತ್ತು ಸಾವಿರ ಕೋಟಿ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರರು ಸಿಗುತ್ತಾರೆ, ಎಂಟು ಕೋಟಿ ಕಾಮಗಾರಿಗೆ ಸಿಗುವುದಿಲ್ಲವೇ? ಈ ರೀತಿ ಸುಳ್ಳುಗಳನ್ನು ಹೇಳುವುದನ್ನು ಅಧಿಕಾರಿಗಳು ಬಿಡಬೇಕು. ಇಂದಿನ ಉಪವಾಸ ಸತ್ಯಾಗ್ರಹದಲ್ಲಿ ನಾಲ್ಕೈದು ಮಂದಿ ಗುತ್ತಿಗೆದಾರರು ಭಾಗವಹಿಸಿದ್ದಾರೆ. ನೀವು ಅವರಿಗೆ ಟೆಂಡರ್ ಕೊಡಿ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಿಂತು ಮಾಡಿಸೋಣ ಎಂದು ಸವಾಲು ಹಾಕಿದರು.
ಸಂಸದರೇ ಕ್ರೆಡಿಟ್ ಪಡೆಯಲಿ
ಅಂಡರ್ ಪಾಸ್ ವಿಚಾರವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಬಗ್ಗೆ ಸಂಸದೆ ಸುಮಲತಾ ಅಂಬರೀಶ್, ಕ್ರೆಡಿಟ್ ಪಡೆಯಲು ಶಾಕರು ಈ ರೀತಿ ಗಿಮಿಕ್ ಮಾಡುತ್ತಿದ್ದಾರೆ ಎಂದಿದ್ದಾರೆ. ಆದರೆ ಸುಮಲತಾ ಅವರಿಗೆ ಮಾಹಿತಿಯ ಕೊರತೆ ಇದೆ. ಅವರು ಈಗಲೂ ನಾನೇ ಅಂಡರ್ ಪಾಸ್ ನಿರ್ಮಾಣಕ್ಕೆ ಕಾರಣ ಎಂದು ಹೇಳಿಕೊಳ್ಳುತ್ತಿದ್ದಾರೆ. ಮಾಡುತ್ತಾರೆ. ಆದರೆ ಮೇಲ್ಸೇತುವೆ ಬಗ್ಗೆ ಅಧಿಕಾರಿಗಳು ಹೇಳುತ್ತಿದ್ದಾರೆ. ನಮಗೆ ಉಪವಾಸ ಸತ್ಯಾಗ್ರಹ ಮಾಡಿ ಕ್ರೆಡಿಟ್ ಪಡೆಯುವುದೂ ಬೇಡ. ನೀವೇ ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿ, ಮೇಲ್ಸೇತುವೆ ಕಾಮಗಾರಿ ರದ್ದುಪಡಿಸಿ ಅಂಡರ್ ಪಾಸ್ ನಿರ್ಮಾಣಕ್ಕೆ ಅನುಮತಿ ಕೊಡಿಸಿ ನೀವೇ ಇದರ ಸಂಪೂರ್ಣ ಕ್ರೆಡಿಟ್ ತೆಗೆದುಕೊಳ್ಳಿ.ನಮಗೆ ಅಂಡರ್ ಪಾಸ್ ನಿರ್ಮಾಣವಾದರೆ ಸಾಕು ಎಂದು ತಿರುಗೇಟು ನೀಡಿದರು.
ಸಂಸದೆ ಸುಮಲತಾ ರವರು ಕೇಂದ್ರ ಸಚಿವರೊಂದಿಗೆ ಮಾತನಾಡಿ, ಈ ಸಮಸ್ಯೆಯನ್ನು ಬಗೆಹರಿಸಬಹುದಿತ್ತು.ಆದರೆ ಅವರು ಹಾಗೆ ಮಾಡದೆ ನನ್ನ ವಿರುದ್ಧ ಮಾತನಾಡಿಕೊಂಡು ತಿರುಗುತ್ತಿದ್ದಾರೆ ಎಂದರು.
ಅಂಡರ್ ಪಾಸ್ ನಿರ್ಮಾಣವಾಗದ ಕಾರಣ ಈಗಾಗಲೇ ನಾಲ್ಕೈದು ಮಂದಿ ಅಪಘಾತದಲ್ಲಿ ಮೃತರಾಗಿದ್ದಾರೆ. ಹಲವರ ಗಾಯಗೊಂಡಿದ್ದಾರೆ.ಈ ಬಗ್ಗೆ ಎಷ್ಟೇ ಹೇಳಿದರು ದಪ್ಪ ಚರ್ಮದ ಅಧಿಕಾರಿಗಳಿಗೆ ಸ್ವಲ್ಪವೂ ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ರಾಮನಗರ ಮಾಜಿ ಶಾಸಕ ಎನ್. ರಾಜು, ಮನ್ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಕುಮಾರ್, ಮೈ ಶುಗರ್ ಮಾಜಿ ಅಧ್ಯಕ್ಷ ಬಿ. ಸಿ. ಶಿವಾನಂದ, ಮುಖಂಡರಾದ ಎಚ್. ಎನ್. ಯೋಗೇಶ್, ಶಿವಲಿಂಗೇಗೌಡ, ಶೇಖರ್, ಜೆ.ಕೆ. ಲಕ್ಷ್ಮೀನಾರಾಯಣ್ ಮತ್ತಿತರರಿದ್ದರು.




