ಯಾಂತ್ರಿಕ ಬದುಕು ಕಟ್ಟಿಕೊಂಡಿರುವ ಮನುಷ್ಯ ತಂತ್ರಜ್ಞಾನದ ಜೊತೆಗೂಡಿ ತತ್ವಪದ ಜಾನಪದಗಳಂತಹ ದೇಶಿ ಕಲೆಯನ್ನು ಮರೆಸುತ್ತಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿ, ಕ್ಷೀರಸಾಗರ ಮೀತ್ರಕೂಟ ಹಾಗೂ ಮಹಿಳಾ ಸರ್ಕಾರಿ ಕಾಲೇಜು ಸಹಯೋಗದಲ್ಲಿ ಇಂದು ದಿವಂಗತ ತಂಬೂರಿ ಜವರಯ್ಯ ಸ್ಮರಣಾರ್ಥ ತತ್ವಪದ ಜಾನಪದ ಗಾಯನ ವಿಚಾರ ಸಂಕಿರಣ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತತ್ವಪದವೂ ಮನುಷ್ಯನಿಗೆ ಗಾಢವಾದ ಅನುಭೂತಿ ನೀಡುತ್ತದೆ ಜೊತೆಗೆ ಕನ್ನಡದ ಅಭಿಮಾನದ ಕಣ್ಣನ್ನು ತೆರಸುತ್ತದೆ. ತಂಬೂರಿ ಜವರಯ್ಯ ಅವರಲ್ಲಿ ಕನ್ನಡ ಭಾಷಾಭಿಮಾನವಿತ್ತು, ಸರಳವಾಗಿ ತತ್ವಪದಗಳನ್ನು ಹಾಡಿ ಜನಕ್ಕೆ ಪರಿಚಯವಾದರು ಎಂದರು.
ತಂಬೂರಿ ಜವರಯ್ಯ ಬಡತನದಿಂದ ಬಂದು ಭಿಕ್ಷೆ ಬೇಡಿ ಊರೂರು ಸುತ್ತಿ ಜಾನಪದ, ತತ್ವಪದಗಳನ್ನು ಹಾಡುತ್ತ ಜೀವನ ಕಟ್ಟಿಕೊಂಡವರು. ಇಂದಿನ ವಿದ್ಯಾರ್ಥಿಗಳಿಗೆ ಹಾಗೂ ಸಾಹಿತ್ಯದಲ್ಲಿ ಅಭಿರುಚಿ ಇರುವವರಿಗೆ ಜಾನಪದ ಹಾಗೂ ತತ್ವಪದದ ಪರಿಚಯವಿರಬೇಕು ಎಂದರು.

ಸಿನಿಮಾ ವೀಕ್ಷಿಸಿದಾಗ ನಾವು ಅದರಲ್ಲಿ ಮೈಮರೆಯುತ್ತೇವೆ ಹಾಗಯೆ ತತ್ವಪದದ ಒಳಗೆ ಹೋಗಿ ಬಂದಾಗ ನಮ್ಮಲ್ಲಿ ಅನೇಕ ಬದಲಾವಣೆಗಳಾಗಿ ನಾವು ಜಾನಪದದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುತ್ತೇವೆ ಎಂದರು.
ಪ್ರಗತಿಪರ ಚಿಂತಕ ಡಾ.ಎನ್ ಜಗದೀಶ್ ಕೊಪ್ಪ ಅವರು ಮಾತನಾಡಿ ತಂಬೂರಿ ಜವರಯ್ಯ ಜಿಲ್ಲೆಯ ಜಾನಪದ , ತತ್ವಪದ ಗಾಯಕರಾಗಿ ಚಿರಪರಿಚಿತರಾದವರು. ಅದರಿಂದಲೇ ಅವರ ಬದುಕು ಸುಧಾರಿಸಿತ್ತು ಎಂದರು.
ತಂಬೂರಿ ಜವರಯ್ಯನವರ ಕಾಲಘಟ್ಟದಲ್ಲಿ ಮಂಡ್ಯ ಹಾಗೂ ನೆರೆಹೊರೆಯ ನಗರದದಲ್ಲಿ ಜಾನಪದ ಹಾಗೂ ತತ್ವಪದ ಶ್ರೀಮಂತವಾಗಿತ್ತು, ಇದೀಗ ಅದರ ಬೇರು ಕಳೆಚಿಕೊಂಡಿದೆ. ಇಂದಿನ ಯುವಕರು ಜಾನಪದ ಕಲೆ ಉಳಿಸಿ ತತ್ವಪದಗಳನ್ನು ಮೈಗಪ್ಪಿಕೊಳ್ಳಬೇಕು ಎಂದರು.
ತತ್ವಪದದ ಇತಿಹಾಸ ಬಹು ದೊಡ್ಡದಿದೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಇದರ ಮಹತ್ವದ ಹೆಜ್ಜೆ ಇದೆ. ತತ್ವಪದಗಳು ಮೊದಲು ವಚನಕಾರರಿಂದ ಹುಟ್ಟಿದ್ದು. ಸೂಫಿ ಸಂತರು ಭಾರತಕ್ಕೆ ಬಂದಾಗ ತತ್ವಪದ ಹಾಗೂ ಜಾನಪದಗಳು ಜನಮನ್ನಣೆ ಗಳಿಸಿದವು ಎಂದರು.
ಕಾರ್ಯಕ್ರಮದಲ್ಲಿ ಕೀಲಾರ ಕ್ಷೀರ ಸಾಗರ ಮಿತ್ರಕೂಟ ಅಧ್ಯಕ್ಷರಾದ ಕೆ. ಜಯಶಂಕರ್, ಮಂಡ್ಯ ತಾಲ್ಲೂಕು ಘಟಕ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರಾದ ಕಾರಸವಾಡಿ ಮಹದೇವು, ಸಂಚಾಲಕ ಕೆ. ಎಂ ಕೃಷ್ಣೇಗೌಡ ಕೀಲಾರ, ಬೆಂಗಳೂರು ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಎನ್ ನಮ್ರತ, ಮಂಡ್ಯ ಮಹಿಳಾ ಸರ್ಕಾರಿ ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಹೆಚ್ ಕೃಷ್ಣೇಗೌಡ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಕೆ ಚಂದ್ರಕಾಂತ್, ಜಾನಪದ ವಿದ್ವಾಂಸರು ನಿವೃತ್ತ ಪ್ರಾಂಶುಪಾಲರು ಪ್ರೊ. ವ.ನಂ.ಶಿವರಾಮು ಹಾಗೂ ಇನ್ನಿತರರು ಉಪಸ್ಥಿತರಿದ್ದರು.




