Saturday, May 18, 2024

ಪ್ರಾಯೋಗಿಕ ಆವೃತ್ತಿ

ಮೈಷುಗರ್ ಗೆ 1.55 ಲಕ್ಷ ಮೆಟ್ರಿಕ್ ಟನ್ ಕಬ್ಬು ಒಪ್ಪಿಗೆ : ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯಲ್ಲಿ ಮೈಷುಗರ್ ಸಕ್ಕರೆ ಕಾರ್ಖಾನೆಯ 2024-25 ನೇ ಸಾಲಿನ ಕಬ್ಬು ನುರಿಸುವಿಕೆಯನ್ನು ಜೂನ್ ಮಾಹೆಯಿಂದ ಪ್ರಾರಂಭಿಸಲಾಗುವುದು. ಈಗಾಗಲೇ ಕಾರ್ಖಾನೆಗೆ 1.55 ಲಕ್ಷ  ಮೆಟ್ರಿಕ್ ಟನ್ ಕಬ್ಬನ್ನು ನುರಿಸಲು ರೈತರ ಜೊತೆ ಒಪ್ಪಂದವಾಗಿದೆ. ಜೂನ್ ಮಾಹೆಯಿಂದ 4 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ನುರಿಸಲು ಗುರಿ ಹೊಂದಲಾಗಿದೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯ ಜಿಲ್ಲಾ ಪಂಚಾಯತ್ ನಲ್ಲಿ ಮೈಷುಗರ್ ಕಬ್ಬು ಅರೆಯುವ ಸಂಬಂಧ ಹಾಗೂ ಟ್ರಯಲ್ ಬ್ಲಾಸ್ಟ್ ಸಂಬಂಧ ಸಭೆ ನಡೆಸಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇನ್ನೂ ಸ್ಥಳ ಯಾವುದೇ ಸ್ಥಳ ನಿಗದಿಯಾಗಿಲ್ಲ ಹಾಗೂ ಮೈಷುಗರ್ ಸಕ್ಕರೆ ಕಾರ್ಖಾನೆ ಸ್ಥಳದಲ್ಲಿ ಹೊಸ ಸಾಫ್ಟವೇರ್ ಪಾರ್ಕ್ ನಿರ್ಮಾಣ ಮಾಡುವ ಬಗ್ಗೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸ ಯೋಜನೆಗಳನ್ನು ರೂಪಿಸುತ್ತಾರೆ. ಅದನ್ನೂ ಸಹ ಎಲ್ಲರೊಂದಿಗೆ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಲು ಸರ್ಕಾರ ನೀಡುವ ಅನುದಾನದೊಂದಿಗೆ.ಸಕ್ಕರೆ ಕಾರ್ಖಾನೆಯಿಂದ ಸಾಲ ಪಡೆಯಲು ಅನುದಾನ ಕ್ರೋಡೀಕರಿಸಲು ಇರುವ ಸೌಲಭ್ಯಗಳ ಬಗ್ಗೆ ಯೋಜನೆ ರೂಪಿಸಿ ಎಲ್ಲರ ಅಭಿಪ್ರಾಯ ಪಡೆದು ನಂತರ ತೀರ್ಮಾನ ಕೈಗೊಳ್ಳಲಾಗುವುದು. ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಇರುವ ಯಂತ್ರಗಳು ಅವುಗಳ ಸ್ಥಿತಿಗತಿಗಳ ಬಗ್ಗೆ ತಾಂತ್ರಿಕ ವರದಿ ಪಡೆದು, ಅವುಗಳ ಬಗ್ಗೆ ರೈತರ ಮುಖಂಡರೊಂದಿಗೆ ಚರ್ಚಿಸಿ ಇರುವ ಸಕ್ಕರೆ ಕಾರ್ಖಾನೆಯ ಸುಧಾರಿಸುವ ಬಗ್ಗೆ ಅಥವಾ ಹೊಸ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಬಗ್ಗೆ ಸೂಕ್ತ ನಿರ್ಣಾಯ ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು. ಕೃಷಿ ಸಚಿವನಾಗಿ ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಸದಾ ಚಿಂತನೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಹಲವಾರು ಲೋಪಗಳು ಉಂಟಾಗಿವೆ ಎಂದು ದೂರುಗಳಿವೆ. ಅವುಗಳ ಬಗ್ಗೆ ಪರಿಶೀಲಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. ಮೈಷುಗರ್ ಸಕ್ಕರೆ ಕಾರ್ಖಾನೆಯ ಮಂಡ್ಯ ಕಚೇರಿಯಲ್ಲಿ ಕಾರ್ಯನಿರ್ವಹಿಸುವಂತಹ ಎಂ.ಡಿ ಅವರನ್ನು ನಿಯೋಜಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು ಎಂದರು.

ಜಿಲ್ಲಾಡಳಿತ ಅಥವಾ ಸರ್ಕಾರದ ನಿರ್ಧಾರವಲ್ಲ

ಟ್ರಯಲ್ ಬ್ಲಾಸ್ಟ್ ನಡೆಸಲೇಬೇಕು ಎಂಬುದು ಜಿಲ್ಲಾಡಳಿತ ಅಥವಾ ಸರ್ಕಾರದ ನಿರ್ಧಾರವಲ್ಲ ಅದು ನ್ಯಾಯಾಲಯದ ಆದೇಶ. ಟ್ರಯಲ್ ಬ್ಲಾಸ್ಟನಿಂದ ಕೆ.ಆರ್.ಎಸ್ ಜಲಾಶಯಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ತಾಂತ್ರಿಕ ವರದಿ ಇದೆ. ಗಣಿಗಾರಿಕೆಯನ್ನು ಕೆ.ಆರ್.ಎಸ್ ನ 20 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿದೆ. ಟ್ರಯಲ್ ಬ್ಲಾಸ್ಟ್ ನಂತರ ಇದರ ವ್ಯಾಪ್ತಿ ಕಡಿಮೆಯಾಗಬಹುದು ಎಂದು ರೈತರಲ್ಲಿ ಆತಂಕವಿದೆ. ಟ್ರಯಲ್ ಬ್ಲಾಸ್ಟ್ ಕುರಿತಂತೆ ಅಡ್ವೋಕೇಟ್ ಜನರಲ್ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಅವರು ಗಣಿಗಾರಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಹೊರಡಿಸಿರುವ ವಿವಿಧ ಆದೇಶಗಳ ಬಗ್ಗೆ ಸಭೆಯಲ್ಲಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಹೆಚ್. ಎಲ್. ನಾಗರಾಜು ಮಾತನಾಡಿ, 2023-24 ನೇ ಸಾಲಿನಲ್ಲಿ 2,41,305 ಮೆಟ್ರಿಕ್ ಟನ್ ಕಬ್ಬನ್ನು ನುರಿಸಿ 1,67,926 ಕ್ವಿಂಟಾಲ್ ಸಕ್ಕರೆಯನ್ನು ಉತ್ಪಾದನೆಯಾಗಿರುತ್ತದೆ. 15,741.20 ಮೆ. ಟನ್ ಕಾಕಂಬಿ, 6,450 ಮೆ. ಟನ್ ಪ್ರೆಸ್ ಮಡ್ಡಿ ಮತ್ತು 68,680 ಮೆ. ಟನ್ ಬ್ಯಾಗ್ಯಾಸ್ ಉತ್ಪಾದನೆಯಾಗಿರುತ್ತದೆ ಎಂದರು.

2023 -24ನೇ ಸಾಲಿನಲ್ಲಿ ಸೆಪ್ಟೆಂಬರ್ 15 ರಂದು ಟರ್ಬೈನನ್ನು ಚಾಲನೆಗೊಳಿಸಿ 12,21,000 ಯೂನಿಟ್ಸ್ ವಿದ್ಯುತ್ ಉತ್ಪಾದಿಸಿ, 7,27,800 ಯೂನಿಟ್ಸ್ ಕಬ್ಬು ನುರಿಸುವ ಕಾರ್ಯಕ್ಕೆ ಬಳಸಿಕೊಂಡು ಉಳಿದ 4,93,200 ಯೂನಿಟ್ಸ್ ರಫ್ತು ಮಾಡಲಾಗಿದೆ. ಚೆಸ್ಕಾಂ ಕಂಪನಿಗೆ ವಿದ್ಯುತ್ ಬಿಲ್ ಬಾಕಿ 5 ಕೋಟಿ ರೂಗಳನ್ನು ಪಾವತಿಸಲಾಗಿದೆ ಎಂದು ತಿಳಿಸಿದರು.

2023 ರ ಡಿಸೆಂಬರ್ 5 ರವರೆಗೆ 2,41,305 ಮೆಟ್ರಿಕ್ ಟನ್ ಕಬ್ಬು ನುರಿಸಿ, 2023 – 24 ನೇ ಸಾಲಿನ ಪ್ರಗತಿಯನ್ನು ಮುಕ್ತಾಯಗೊಳಿಸಿದೆ. ರೈತರಿಗೆ ಪ್ರತಿ ಮೆ. ಟನ್ ಗೆ ರೂ 2920 ರಂತೆ ಒಟ್ಟು 70,46,10,515 ರೂ ಹಣವನ್ನು ಪಾವತಿಸಲಾಗಿದೆ. ಕಬ್ಬು ಕಟಾವು ಮೇಸ್ತ್ರಿಗಳಿಗೆ 10,21,57,933 ರೂ ಹಾಗೂ ಸಾರಿಗೆ 3,43,31,481 ರೂ ಹಣವನ್ನು ಪಾವತಿಸಲಾಗಿದೆ. ರೈತರ ಕ್ಷೇಮಾಭಿವೃದ್ಧಿ ನಿಧಿಗೆ 12,10,499 ರೂ ಹಣ ಹಾಗೂ ಅಂತಿಮ ಬಟವಾಡೆ ಮಾಡಿದ ರೈತರಿಗೆ 56,69,00,602 ರೂ ಹಣವನ್ನು ಪಾವತಿಸಲಾಗಿದೆ ಎಂದರು.

ಸಭೆಯಲ್ಲಿ ಲೋಕಸಭಾ ಸಂಸದೆ ಸುಮಲತಾ ಅಂಬರೀಷ್, ಮೇಲುಕೋಟೆ ವಿಧಾನಸಭಾ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷ ಗಂಗಾಧರ್, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್. ಯತೀಶ್, ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ರಘುರಾಮ್ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!