ಮಂಡ್ಯ ನಗರದಲ್ಲಿ 43 ಕೋಟಿ ರೂ ವೆಚ್ಚದಲ್ಲಿ ನಗರದ ಫ್ಯಾಕ್ಟರಿ ಸರ್ಕಲ್ ಹಾಗೂ ಸಂಜಯ್ ಸರ್ಕಲ್ ನಲ್ಲಿ ಹೈಟೆಕ್ ಮಾದರಿ ವೃತ್ತ ನಿರ್ಮಾಣ, ಎನ್. ಹೆಚ್ – 275 ಶ್ರೀನಿವಾಸಪುರ ಗೇಟ್ ನಿಂದ ಇಂಡುವಾಳು ಅಂಡರ್ ಪಾಸ್ ವರೆಗೆ ಮಂಡ್ಯ ನಗರದ ಮಧ್ಯ ಭಾಗದಲ್ಲಿ ವಿಶ್ವ ದರ್ಜೆಯ ರಸ್ತೆ ಹಾಗೂ ಪಾದಾಚಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ನಂತರ ಮಾತನಾಡಿದ ಅವರು, 33 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ ಮೈಸೂರು – ಬೆಂಗಳೂರು ರಸ್ತೆಯಲ್ಲಿರುವ ಅಮರಾವತಿ ಹೋಟೆಲ್ ನಿಂದ ಜ್ಯೋತಿ ಇಂಟರ್ನ್ಯಾಷನಲ್ ಹೋಟೆಲ್ ವರೆಗೆ ಹೈಟೆಕ್ ಪುಟ್ ಬಾತ್ ಮತ್ತು ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಅಣ್ಣೂರಿನ ಮಾಜಿ ವಾಯ್ಸ್ ಚಾನ್ಸಲರ್ ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದರು.
ಅಧಿಕಾರಕ್ಕೆ ಬಂದ 8 ತಿಂಗಳಲ್ಲಿಯೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಜಿಲ್ಲೆಯ ಜನಸಾಮಾನ್ಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಶಾಸಕರಾದ ರವಿಕುಮಾರ್, ಉದಯ್ ಹಾಗೂ ರಮೇಶ್ ಬಂಡಿ ಸಿದ್ದೇಗೌಡ ಮೂವರು ನಗರದ ಅಭಿವೃದ್ಧಿಗಾಗಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಂಡ್ಯ ವಿಧಾನಸಭಾ ಶಾಸಕ ಪಿ. ರವಿಕುಮಾರ್, ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣಗೌಡ( ಸ್ಟಾರ್ ಚಂದ್ರು), ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಸ್.ಮಂಜು, ಸದಸ್ಯ ರಾಮಲಿಂಗಯ್ಯ, ಕಾಂಗ್ರೆಸ್ ಮುಖಂಡರಾದ ಸುರೇಶ್ ಕಂಠಿ ಹಾಗೂ ಅಭಿಲಾಷ್ ಉಪಸ್ಥಿತರಿದ್ದರು.




