ಹೆಚ್.ಡಿ.ಕುಮಾರಸ್ವಾಮಿ ಹೋದ ಕಡೆಯೆಲ್ಲ, ಇದು ನನ್ನ ಕರ್ಮ ಭೂಮಿ ಎನ್ನುತ್ತಾರೆ. ಮಂಡ್ಯ ಹಾಸನ, ಕೋಲಾರ ಮೂರು ಆದರೆ ಪರವಾಗಿಲ್ಲ ಚಿಕ್ಕಬಳ್ಳಾಪುರ, ತುಮಕೂರಿಗೂ ಹೋಗಿ ಬಂದಿದ್ದಾರೆ, ಅಲ್ಲಿಯೂ ಹಾಗೇ ಹೇಳಿದ್ದಾರೆ, ನಾನು ಕಾಂಗ್ರೆಸ್ ಸೇರಿ ಹೇಗೋ ಬಚಾವ್ ಆದೆ. ಆದರೆ ಪುಟ್ಟರಾಜ, ಪಾಪ ಅವನ ಕಥೆ ಈಗ ಏನಾಗಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಪುಟ್ಟರಾಜು ಕುರಿತು ಮರುಕ ವ್ಯಕ್ತಪಡಿಸಿದರು.
ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ಕೈಗೊಂಡು ಮಾತನಾಡಿದ ಅವರು, ‘ಪಾಪ ಆ ಪುಟ್ಟರಾಜುನಿಂದ ಮಂಡ್ಯದಲ್ಲಿ ಸಭೆ ಮಾಡಿಸಿದ್ದರು. ಆತ ಎಲ್ಲ ದೇವಸ್ಥಾನಗಳನ್ನು ಸುತ್ತಿ ಬಂದ. ಆದರೆ ಈಗ ಹುಡುಗಿ ಚೆನ್ನಾಗಿದ್ದಾಳೆ. ನಾನೆ ಮದುವೆ ಆಗುತ್ತೇನೆ ಎಂದಿದ್ದಾರೆ ಎಂದು ಕುಮಾರಸ್ವಾಮಿ ನಡೆ ಕುರಿತು ಛೇಡಿಸಿದರು.

ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಆದಂತಿದೆ
ಲೋಕಸಭಾ ಚುನಾವಣೆಯಲ್ಲಿ ಸಿ.ಎಸ್ ಪುಟ್ಟರಾಜು ಅಭ್ಯರ್ಥಿ ಎಂದೇಳಿ ಇದೀಗ ಅವರೇ ಸ್ಪರ್ಧೆ ಮಾಡುತ್ತಿದಾರೆ. ಮಂಡ್ಯ ಕ್ಷೇತ್ರದಿಂದ ಎಚ್ಡಿಕೆ ಸ್ಪರ್ಧೆ ಮಾಡುತ್ತಿರುವುದು ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಆದಂತೆ ಆಗುತ್ತಿದೆ. ಒಳ್ಳೆಯ ಹುಡುಗಿ ಇದ್ದಾಳೆ, ಈ ಬಾರಿ ನಾನೇ ಮಧ್ಯೆ ಆಗುತ್ತೇನೆ ಪುಟ್ಟರಾಜು, ನಿನಗೆ ಮುಂದೆ ಒಳ್ಳೆಯ ಹುಡುಗಿ ಹುಡುಕೋಣ ಎಂದಿದ್ದಾರೆ ಎಂದು ಲೇವಡಿ ಮಾಡಿದರು.
ಈಗ ಸಹೋದರಿ ಎನ್ನುತ್ತಿದ್ದಾರೆ
ಕಳೆದ ಚುನಾವಣೆಯಲ್ಲಿ ಸುಮಲತಾ ಅವರನ್ನು ನಿಂದಿಸಿದ್ದರು. ಈಗ ಸಹೋದರಿ ಎನ್ನುತ್ತಿದ್ದಾರೆ. ಆಗಲೇ ಈ ಮಾತು ಆಡಿದ್ದರೆ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗುತ್ತಿತ್ತು. ನನ್ನ ಮಗ ಗೆದ್ದರೂ ಒಂದೇ. ಅಕ್ಕ ಗೆದ್ದರೂ ಒಂದೇ ಎನ್ನಬಹುದಿತ್ತು ಎಂದು ತಿರುಗೇಟು ನೀಡಿದರು.
ನಮ್ಮ ಮಂಡ್ಯ ಜಿಲ್ಲೆಗೆ ಕೆಟ್ಟ ದೃಷ್ಟಿ ಬೀಳುವುದು ಬೇಡ. ನಾವು ನಮ್ಮ ಜನ ಏನೋ ಮಾಡಿಕೊಳ್ಳುತ್ತೇವೆ, ನೀವು ಇನ್ನೊಮ್ಮೆ ಸಿಎಂ ಹಾಗೂ ಪ್ರಧಾನಿ ಆಗಿ ನಿಮ್ಮ ಬಗ್ಗೆ ಕೆಟ್ಟದ್ದಾಗಿ ಮಾತನಾಡಲ್ಲ, ಆದರೆ ನಮ್ಮ ಜಿಲ್ಲೆಗೆ ನೀವು ಬರಬೇಡಿ ಮಂಡ್ಯವನ್ನು ನಾವು ಹೇಗೋ ಅಭಿವೃದ್ಧಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ವೇದಿಕೆಯಲ್ಲಿ ಶಾಸಕ ರವಿಕುಮಾರ್ ಗಣಿಗ, ಕಾಂಗ್ರೆಸ್ ಅಭ್ಯರ್ಥಿ ಸ್ಮಾರ್ ಚಂದ್ರು, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಸದಸ್ಯ ಮರಿತಿಬ್ಬೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ, ಮಾಜಿ ಶಾಸಕ ಎಚ್.ಬಿ.ರಾಮು, ತಾಪಂ ಮಾಜಿ ಅಧ್ಯಕ್ಷ ಸಿ. ತ್ಯಾಗರಾಜು, ಮನ್ಮುಲ್ ನಿರ್ದೇಶಕ ಯು.ಸಿ.ಶಿವಪ್ಪ ಮತ್ತಿತರರಿದ್ದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸಿದ್ದಾಂತ ಒಪ್ಪಿ ವಿವಿಧ ಪಕ್ಷಗಳ ಕಾರ್ಯಕರ್ತರು, ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.




