ಮಂಡ್ಯ ತಾಲೂಕಿನ ಸಾತನೂರು ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ವರುಣನ ಮೂರ್ತಿ ಸ್ಥಾಪಿಸಿ ಮನೆ, ಮನೆಗೆ ತೆರಳಿ ತಣ್ಣೀರನ್ನು ತಲೆಮೇಲೆ ಸುರಿಸಿಕೊಂಡು ಪ್ರಾರ್ಥಿಸಿದರು.
ಗ್ರಾಮದ ಬೀದಿಗಳಲ್ಲಿ ಮಳೆರಾಯನ ಮೂರ್ತಿಯನ್ನು ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿದರು. ತಮಟೆ ಸದ್ದಿಗೆ ಮಕ್ಕಳು ಸಹ ನೃತ್ಯ ಮಾಡಿ ಮನೆಮನೆಯ ಬಳಿ ತಣ್ಣೀರನ್ನು ಸುರಿಸಿಕೊಂಡು ಮುಂದೆ ಸಾಗಿದರು. ದಾರಿ ಉದ್ದಕ್ಕೂ ಉಯ್ಯೋ ಉಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ. ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ ಎಂದು ಕೂಗುತ್ತಾ ಹೆಜ್ಜೆ ಹಾಕಿ ಮಳೆಗಾಗಿ ಪ್ರಾರ್ಥಿಸಿದರು.
ಮಳೆರಾಯನ ಮೂರ್ತಿಯನ್ನು ಮಣ್ಣಿನಲ್ಲಿ ತಯಾರಿಸಿ ಅದನ್ನು ಗ್ರಾಮದ ಸುತ್ತ ಹೊತ್ತು ಮೆರೆಸಲಾಯಿತು. ಜತೆಗೆ ಮಕ್ಕಳು ಸಹ ಭಾಗವಹಿಸಿ ಬೇವಿನ ಸೊಪ್ಪನ್ನು ನಡುವಿಗೆ ಕಟ್ಟಿಕೊಂಡು ತಮಟೆ ಸದ್ದಿಗೆ ನೃತ್ಯ ಮಾಡುತ್ತಾ ಮಳೆರಾಯನ್ನನ್ನು ಕೂಗಿ ಕರೆಯಲಾಯಿತು.




