Thursday, May 16, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ಹಾಗೂ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು: ಎಚ್.ಡಿ.ಕೆ

ಕರ್ನಾಟಕಕ್ಕೆ ದೇವೇಗೌಡರ ಕೊಡುಗೆ ಏನು ಎಂದು ಹಗುರವಾಗಿ ಮಾತನಾಡುವ ಸಿಎಂ ಸಿದ್ದರಾಮಯ್ಯ ಅವರು ಕಾವೇರಿ ವಿಚಾರದಲ್ಲಿ ತಮ್ಮ ಕೊಡುಗೆ ಏನೆಂಬುದನ್ನು ಸ್ಪಷ್ಟಪಡಿಸಲಿ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಮಂಡ್ಯನಗರದ ಹೊರವಲಯದಲ್ಲಿರುವ ಅಮರಾವತಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಅಮರಾವತಿ ಚಂದ್ರಶೇಖರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ದೇವೇಗೌಡರ ಬಗ್ಗೆ ಹಗುರವಾಗಿ ಸಿದ್ದರಾಮಯ್ಯನವರು ಮಾತನಾಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇನೆ. ನನ್ನ ರಕ್ತದ ಕಣಕಣದಲ್ಲೂ ಹೋರಾಟವಿದೆ.ನಾನು ಕನ್ನಡಿಗ ಎನ್ನುವ ಸಿದ್ದರಾಮಯ್ಯನವರು ಕಾವೇರಿ ವಿಚಾರದಲ್ಲಿ ಕಾನೂನಾತ್ಮಕವಾಗಿ ಯಾವ ಹೋರಾಟ ಮಾಡಿದ್ದಾರೆ.ಅವರ ಕೊಡುಗೆ ಏನೆಂಬುದನ್ನು ಹೇಳಲಿ.ದೇವೇಗೌಡರು 24ನೇ ವಯಸ್ಸಿನಲ್ಲಿ ನಿಂದಲೇ ಕಾವೇರಿ ಹಾಗೂ ರಾಜ್ಯದ ನೀರಾವರಿಗೆಗಾಗಿ ಹಲವು ಹೋರಾಟ ಮಾಡಿದ್ದಾರೆ.ಸಿದ್ದರಾಮಯ್ಯ ಅವರು ಕೊಟ್ಟಿರುವ ಕೊಡುಗೆ ಬಗ್ಗೆ ತಿಳಿಸಲಿ ಎಂದರು.

ನುಡಿದಂತೆ ನಡೆದಿದ್ದೇವೆ ಎಂದು ಬೊಬ್ಬೆ ಹಾಕುವ ಕಾಂಗ್ರೆಸ್ ಸರ್ಕಾರ 1.05 ಲಕ್ಷ ಕೋಟಿ ಸಾಲ ತಂದು ಗ್ಯಾರಂಟಿಗೆ 52,000 ನೀಡಿದೆ ಇನ್ನುಳಿದ ದುಡ್ಡು ಎಲ್ಲಿದೆ, ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಜನರ ಮೇಲೆ ಸಾಲದ ಹೊರೆ ಹೊರಿಸಲಾಗಿದೆ, ರಾಜ್ಯದ ಖಜಾನೆ ಖಾಲಿ ಮಾಡಿ ಕೇಂದ್ರ ಸರ್ಕಾರದ ಮೇಲೆ ದೋಷಾರೋಪಣೆ ಮಾಡಿ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಕೂಗಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಯೋಜನೆಗಳಿಗೆ ಹಣ ನೀಡಲು ಮುಂದಾಗಿದೆ, ಆದರೆ ರಾಜ್ಯ ಸರ್ಕಾರ ಯೋಜನೆಯನ್ನ ರೂಪಿಸುತ್ತಿಲ್ಲ, ಸಂಘರ್ಷ ಮಾಡಿಕೊಂಡರೆ ಹಣ ಸಿಗಲಿದೆಯಾ ಎಂದು ಪ್ರಶ್ನಿಸಿದರು.

ನಾನು 2006ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಶಿಕ್ಷಣ ಇಲಾಖೆ, ವಿದ್ಯುಚ್ಛಕ್ತಿ, ನೀರಾವರಿ ಸೌಲಭ್ಯಗಳಿಗೆ ಯಾವ ರೀತಿ ಅನುದಾನ ನೀಡಿದೆ ಎಂಬುದನ್ನು ಸಿದ್ದರಾಮಯ್ಯನವರು ಮಾಹಿತಿ ಪಡೆಯಲಿ. ಕೆ.ಆರ್. ಪೇಟೆಯಲ್ಲಿ ಇಂಜಿನಿಯರಿಂಗ್ ಕಾಲೇಜು,ಮಂಡ್ಯ ಮೆಡಿಕಲ್ ಕಾಲೇಜಿಗೆ 60 ಕೋಟಿ ಹಣ ನೀಡಿದ್ದು ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲೆಗೆ ಮಾಡಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ 9,000 ಕೋಟಿ ಅನುದಾನವನ್ನು ಬಜೆಟ್ ನಲ್ಲಿ ಮಂಡಿಸಿದ್ದೆ.ಈ ಬಗ್ಗೆ ಬಹಳ ಜನರು ವ್ಯಂಗ್ಯವಾಡಿದರು‌.ಎರಡನೇ ಬಾರಿ ಸಿಎಂ ಆದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಆದರೆ ಈಗಿನ ಸರ್ಕಾರ ಮೈಷುಗರ್ ಕಾರ್ಖಾನೆ ಆಸ್ತಿಯನ್ನು ಮಾರಲು ಹೊರಟಿದೆ‌. ಈ ಬಗ್ಗೆ ಇಲ್ಲಿಯ ಸ್ಥಳೀಯ ಶಾಸಕರು ಸೇರಿದಂತೆ ಹಲವರು ಪುಟಗಟ್ಟಲೆ ಜಾಹೀರಾತು ನೀಡಿದ್ದಾರೆ. ಸಿದ್ದರಾಮಯ್ಯನವರು ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಬಜೆಟ್ ನಲ್ಲಿ ನಯಾ ಪೈಸೆ ನೀಡಿಲ್ಲ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಶಾಸಕ ಎಚ್. ಟಿ. ಮಂಜು,ಮಾಜಿ ಶಾಸಕರಾದ ಸುರೇಶ ಗೌಡ, ಅನ್ನದಾನಿ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್, ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರು ಉಪಾಧ್ಯಕ್ಷ ರಘುನಂದನ್, ಮುಖಂಡರಾದ ಬಿ.ಆರ್.ಸುರೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!