Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ಸಮಸ್ಯೆ ಬಗೆಹರಿಸಲು ಹೆಚ್‌ಡಿಕೆ ಬೆಂಬಲಿಸಿ: ಅನ್ನದಾನಿ

ಬಹು ವರ್ಷಗಳಿಂದಲೂ ಸಮಸ್ಯೆಯಾಗಿಯೇ ಉಳಿದಿರುವ ಕಾವೇರಿ ನೀರಿನ ಹಂಚಿಕೆಯನ್ನು ಪರಿಹರಿಸಲು ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿಯಾಗಲೇಬೇಕು. ಅದಕ್ಕಾಗಿ ದಲಿತರು ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮತ ನೀಡುವ ಮೂಲಕ ಬಹುಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮಾಜಿ ಶಾಸಕ ಕೆ.ಅನ್ನದಾನಿ ಮನವಿ ಮಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರು ದಲಿತರನ್ನು ಮತ ಬ್ಯಾಂಕಾಗಿ ಇಟ್ಟುಕೊಂಡಿದ್ದಾರೆಯೇ ಹೊರತು, ಇದುವರೆಗೂ ನ್ಯಾಯ ದೊರಕಿಸಿಕೊಟ್ಟಿಲ್ಲ. ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಸುಮಾರು 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ 98 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿದೆ ಎಂದರು.

ಬದಲಾವಣೆ ಮಾಡಲು ಯಾರಿಗೂ ತಾಕತ್ತಿಲ್ಲ

ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಬದಲಾವಣೆ ಮಾಡಲು ಯಾರಿಗೂ ತಾಕತ್ತಿಲ್ಲ, ಒಂದು ವೇಳೆ ತಿದ್ದಲು ಪ್ರಯತ್ನಿಸಿದರೆ ರಕ್ತಪಾತವೇ ಹರಿಯುತ್ತದೆ. ನರೇಂದ್ರ ಮೋದಿ ಸಂವಿಧಾನ ಬದಲಾವಣೆ ಮಾಡುವುದಾಗಿ ಎಲ್ಲಿಯೂ ಹೇಳಿಲ್ಲ ಎಂದರು.

ಮುಖ್ಯಮಂತ್ರಿಯಾಗಬೇಕಿದ್ದ ಕಾಂಗ್ರೆಸ್ ಹಿರಿಯ ಮುತ್ಸದ್ದಿ ಡಾ. ಜಿ.ಪರಮೇಶ್ವರ್ ಅವರನ್ನು ಸೋಲಿಸಿ, ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ್ದು ಯಾರು? 2008ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲ ನೀಡದವರು ಯಾರು? ಇದರಲ್ಲಿ ಮಳವಳ್ಳಿ ಕ್ಷೇತ್ರದ ನಾಯಕನ ಪಾತ್ರವೂ ಇದೆ ಎಂದು ಹರಿಹಾಯ್ದರು.

ನಾಳೆ ನಾಮಪತ್ರ ಸಲ್ಲಿಕೆ

ಮಂಡ್ಯ ಲೋಕಸಭಾ ಕ್ಷೇತ್ರದ ಜಾ.ದಳ-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ. ಕುಮಾರಸ್ವಾಮಿ ಅವರು ಮಾ.4ರ ಗುರುವಾರ ಬೆಳಿಗ್ಗೆ 10.30 ಗಂಟೆಗೆ ನಾಮಪತ್ರ ಸಲ್ಲಿಸುತ್ತಿದ್ದು, ಪ.ಜಾತಿ,ಪಂಗಡದ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡುವಂತೆ ಕೋರಿದರು.

ಗೋಷ್ಠಿಯಲ್ಲಿ ಜಿಲ್ಲಾ ಜಾ.ದಳ ಪ.ಜಾತಿ ವರ್ಗದ ಅಧ್ಯಕ್ಷ ಸಾತನೂರು ಜಯರಾಮು, ಬಿಜೆಪಿ ಪ.ಜಾತಿ ವರ್ಗದ ಅಧ್ಯಕ್ಷ ನಿತ್ಯಾನಂದ, ಮುಖಂಡರಾದ ವೈರಮುಡಿ, ಪಾಪಯ್ಯ, ನರಸಿಂಹ, ಬೊಮ್ಮರಾಜು, ಕಾಂತರಾಜು, ಭದ್ರಾಚಲಮೂರ್ತಿ, ಶಂಕರ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!