ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಉಪಪ್ರಧಾನಿಗಳಾದ ಡಾ. ಬಾಬು ಜಗಜೀವನರಾಮ್ ಅವರು ದೇಶಕ್ಕೆ ನೀಡಿದ ಕೊಡುಗೆಗಳು ಅಪಾರ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ಸಾಗಬೇಕು. ಅವರ ಚಿಂತನೆಗಳನ್ನು ನಾವೆಲ್ಲಾ ಮೈಗೂಡಿಸಿಕೊಳ್ಳಬೇಕು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಹೇಳಿದರು.
ಡಾ.ಬಾಬು ಜಗಜೀವನ ರಾಮ್ ಅವರ 117ನೇ ಜನ್ಮದಿನಾಚರಣೆ ಪ್ರಯುಕ್ತ ಮದ್ದೂರು ಆತಗೂರಿನಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಬಾಬೂಜಿ ಅವರು ಅಸ್ಪೃಶ್ಯತೆ ತೊಡೆದುಹಾಕಲು ಶ್ರಮಿಸಿದವರು. ಸಮಸಮಾಜದ ನಿರ್ಮಾಣಕ್ಕೆ ಹೋರಾಡಿದ ಮಹಾನ್ ಚೇತನ ಎಂದರು.
ಹಸಿರು ಕ್ರಾಂತಿ ಮೂಲಕ ಕೃಷಿ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗೆ ನಾಂದಿಯಾಡಿದವರು. ರೈತರು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಿದರು. ದೇಶದಲ್ಲಿ ಆಹಾರ ಉತ್ಪಾದನೆ ಹೆಚ್ಚಳಕ್ಕೆ ಕಾರಣೀಭೂತರು. ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಅವರು ದಲಿತ ಚಳವಳಿಗಳ ಎರಡು ಕಣ್ಣುಗಳಿದ್ದಂತೆ ಎಂದರು.
ಮದ್ದೂರಿನಲ್ಲಿ ಮತಪ್ರಚಾರ
ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಮದ್ದೂರು ವಿಧಾನಸಭಾ ಕ್ಷೇತ್ರದಾದ್ಯಂತ ಮತಪ್ರಚಾರ ನಡೆಸಿದರು.
ಗೊಲ್ಲರದೊಡ್ಡಿಯ ಜುಂಜಪ್ಪ ದೇವರಿಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದರು. ಮಲ್ಲನಕುಪ್ಪೆ, ಹೂತಗೆರೆ, ಕೆಸ್ತೂರು, ಆತಗೂರು, ಕದಲೂರು ಸೇರಿದಂತೆ ನಾನಾ ಗ್ರಾಮಪಂಚಾಯತ್ ಗಳಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.
ಮದ್ದೂರು ಶಾಸಕ ಉದಯ್, ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕದಲೂರು ರಾಮಕೃಷ್ಣ ಸೇರಿದಂತೆ ಹಲವು ಮುಖಂಡರು ಜೊತೆಯಲ್ಲಿದ್ದರು.




