ಚುನಾವಣೆ ಎಂಬುದು ಮನೋರಂಜನೆಯಲ್ಲ. ಅದು ಬದುಕು ಕಟ್ಟುವ ಪ್ರಕ್ರಿಯೆ. ಜವಾಬ್ದಾರಿಯುತವಾಗಿ ತಪ್ಪದೇ ನೈತಿಕ ಮತದಾನ ಮಾಡಿ ಉತ್ತಮ ನಾಯಕರನ್ನು ಆಯ್ಕೆ ಮಾಡಿ ಉತ್ತಮ ಸಮಾಜವನ್ನು ಕಟ್ಟಿ, ಸಮಾಜದಲ್ಲಿ ಬದುಕನ್ನು ರೂಪಿಸಿಕೊಳ್ಳಿ ಎಂದು ಹಿರಿಯ ರಂಗಕರ್ಮಿ, ನಿರ್ದೇಶಕ, ನಟ ಹಾಗೂ ಮಂಡ್ಯ ಜಿಲ್ಲಾ ಸ್ವೀಪ್ ಐಕಾನ್ ಮಂಡ್ಯ ರಮೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ವತಿಯಿಂದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಮತದಾನದ ಮಹತ್ವ ಹಾಗೂ ನೈತಿಕ ಮತದಾನ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನೋರಂಜನೆಗಾಗಿ ನಾವು ಬಹಳಷ್ಟು ಸಮಯವನ್ನು ಜಂಗಮವಾಣಿಯೊಂದಿಗೆ ಕಳೆಯುತ್ತೇವೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿಯುವ ಮತದಾನಕ್ಕಾಗಿ ಏಪ್ರಿಲ್ 26 ರಂದು ಸಮಯ ಮೀಸಲಿಟ್ಟು, ತಪ್ಪದೇ ಮತದಾನ ಮಾಡೋಣ ಎಂದರು.

ಆತ್ಮತೃಪ್ತಿ ನೀಡುವ ಕೆಲಸ
ಒಂದು ಮತದಾನದಿಂದ ಯಾವ ಬದಲಾವಣೆಯಾಗುತ್ತದೆ ಎಂಬ ಆಲೋಚನೆಯನ್ನು ದೂರಮಾಡಿಕೊಳ್ಳಬೇಕು. ಬೇರೆ ಊರು, ದೇಶಗಳಿಂದ ಬಂದು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಜನರಿದ್ದಾರೆ. ಅವರು ನಮಗೆ ನಿದರ್ಶನವಾಗಬೇಕು. ಮತದಾನ ಪವಿತ್ರವಾದ, ಜವಾಬ್ದಾರಿಯುತ ಹಾಗೂ ಆತ್ಮತೃಪ್ತಿ ನೀಡುವ ಕೆಲಸ. ಎಲ್ಲರೂ ತಪ್ಪದೇ ಮತದಾನ ಮಾಡಿ ಹಾಗೂ ತಮ್ಮ ಸುತ್ತ ಮುತ್ತಲು ಇರುವ ಸಾರ್ವಜನಿಕರು ಹಾಗೂ ಯುವಜನರನ್ನು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೆರೇಪಿಸಿ ಎಂದರು.
ಮಹಿಳೆಯರು ಕುಟುಂಬದ ಶಕ್ತಿಯಾಗಿದ್ದು, ಅವರು ಹೇಳುವ ಮಾತನ್ನು ಎಲ್ಲರೂ ಕೇಳುತ್ತಾರೆ. ಮಹಿಳೆಯರು ತಮ್ಮ ಮನೆಯಲ್ಲಿ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವ ಬಗ್ಗೆ ಖಾತ್ರಿ ಮಾಡಿಕೊಳ್ಳಿ. ಮನೆಯಲ್ಲಿ ಪ್ರತಿ ದಿನ ಏಪ್ರಿಲ್ 26 ರಂದು ಮತದಾನ ಮಾಡಿ ಎಂಬ ಸುಪ್ರಭಾತವನ್ನು ಅಳವಡಿಸಿ ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ಮತ ಹಾಕುವುದು ನಮ್ಮ ನಿಮ್ಮೆಲ್ಲರ ಹಕ್ಕು. ಅದು ಪ್ರತಿಯೊಬ್ಬರ ಕರ್ತವ್ಯ ಆದ್ದರಿಂದ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಿ. ನಮ್ಮ ಮತ ಮಾರಾಟಕ್ಕಿಲ್ಲ ಅದು ಅಮೂಲ್ಯವಾದ ಶಕ್ತಿ ಎಂಬುದನ್ನು ಅರಿತು ಮತದಾನ ಮಾಡಿ ಎಂದು ಹೇಳಿದರು.
ತಪ್ಪದೇ ಮತದಾನ ಮಾಡಿ
ದಿನನಿತ್ಯ ಸಾರ್ವಜನಿಕರಿಗೆ ಕೆಲಸವಿರುವುದು ಸರ್ವೆ ಸಾಮಾನ್ಯ. ಏಪ್ರಿಲ್ 26 ರಂದು ತಮ್ಮ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಏಪ್ರಿಲ್ 26 ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಪ್ಪದೇ ಮತದಾನ ಮಾಡಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಪಾರದರ್ಶಕವಾಗಿ ನಿಭೀರ್ತಿಯಿಂದ ಪ್ರತಿಯೊಬ್ಬರಿಗೂ ಮತದಾನ ಮಾಡಲು ಅವಕಾಶ ನೀಡಿ ಚುನಾವಣೆ ನಡೆಸುವುದನ್ನು ನಾವು ನಮ್ಮ ದೇಶದಲ್ಲಿ ನೋಡಬಹುದು. ಚುನಾವಣೆ ನಡೆಸುವ ಬಗ್ಗೆ ಭಾರತ ದೇಶದಲ್ಲಿ 75 ವರ್ಷಗಳ ಇತಿಹಾಸವಿದೆ. 1952 ರಲ್ಲಿ ಸಾರ್ವಜನಿಕರಲ್ಲಿ ವಿದ್ಯಾಭ್ಯಾಸದ ಕೊರತೆ ಇತ್ತು, ಬಹಳಷ್ಟು ಜನರು ಆರ್ಥಿಕವಾಗಿ ಹಿಂದುಳಿದಿದ್ದರೂ. ಆದರೂ ಸಹ 1952 ರಲ್ಲಿ ನಡೆದ ಚುನಾವಣೆಯಲ್ಲಿ ಅಂದಾಜು ಶೇ. 55 ರಷ್ಟು ಮತದಾನವಾಗಿತ್ತು. ಇಂದು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಜನರು ಮುಂದಿದ್ದರೂ ಕೆಲವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬುದು ಯೋಚಿಸುವ ವಿಷಯವಾಗಿದೆ. ಚುನಾವಣೆ ಬಂದ ತಕ್ಷಣ ಪ್ರತಿಯೊಬ್ಬ ಮತದಾರರು ಕೂಡ ತಮ್ಮ ಮತದಾನದ ಜವಾಬ್ದಾರಿ ಹಾಗೂ ಹೊಣೆಗಾರಿಕೆಯನ್ನು ಅರಿತು ಅಮೂಲ್ಯವಾದ ಮತವನ್ನು ಚಲಾಯಿಸಬೇಕು ಎಂದು ಸ್ವೀಪ್ ಸಮಿತಿ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡು ಮತದಾನ ಮಾಡುವುದು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮತದಾರರ ಕರ್ತವ್ಯವಾಗಿದೆ. ಎಲ್ಲಾ ಮತದಾರರು ಕೂಡ ಪ್ರಜ್ಞಾವಂತ ಹಾಗೂ ಬುದ್ದಿವಂತ ಮತದಾರರಾಗಿ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಕು. ನಮ್ಮ ಮತ ನಮ್ಮ ವ್ಯಕ್ತಿತ್ವವನ್ನು ಹಿಮ್ಮಡಿಗೊಳಿಸುವ ರೀತಿಯಲ್ಲಿ ಇದ್ದು, ಪಾರದರ್ಶಕತೆ ಮತ್ತು ನೈತಿಕತೆಯಿಂದ ಮತದಾನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ನಗರಸಭೆ ಆಯುಕ್ತ ಮಂಜುನಾಥ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.




